SUDDIKSHANA KANNADA NEWS/ DAVANAGERE/ DATE:19-03-2024
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಣೆ ವಿಚಾರ ಸಂಬಂಧ ಭಿನ್ನ ಅಭಿಪ್ರಾಯ ಇದೆ. ಬಿಜೆಪಿ ಕಟ್ಟಿ ಬೆಳೆಸಿದ ಭೀಷ್ಮ ಎಂದೇ ಹೆಸರಾಗಿರುವ ಎಸ್. ಎ. ರವೀಂದ್ರನಾಥ್ ನೇತೃತ್ವದಲ್ಲಿ ನಾವೆಲ್ಲರೂ ಚರ್ಚೆ ಮಾಡಿದ್ದೇವೆ. ಒಂದು ವಿಚಾರಧಾರೆಗೆ ಬದ್ಧರಾಗಿದ್ದೇವೆ. ಗುಂಪು ವಿಚಲಿತರನ್ನಾಗಿ ಮಾಡಲು, ಒಡೆಯಲು ತಂತ್ರಗಾರಿಕೆ ನಡೆಸಲಾಗುತ್ತಿದೆ. ದಯಮಾಡಿ ಯಾರೂ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಚನ್ನಗಿರಿ ಬಿಜೆಪಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ಮನವಿ ಮಾಡಿದರು.
ಸಾಮಾಜಿಕ ಜಾಲತಾಣಗಳಲ್ಲಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರರ ಪತ್ನಿ ಗಾಯತ್ರಿ ಸಿದ್ದೇಶ್ವರರ ಗೆಲುವಿಗೆ ಮಾಡಾಳ್ ಮಲ್ಲಿಕಾರ್ಜುನ್ ಶ್ರಮಿಸುವುದಾಗಿ ಹೇಳಿದ್ದಾರೆ ಎಂದು ವದಂತಿ ಹಬ್ಬಿಸಲಾಗಿದೆ. ಇದು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.
ಸುಳ್ಳು ಸುದ್ದಿ ಹಬ್ಬಿಸಬೇಡಿ:
ಎಸ್. ಎ. ರವೀಂದ್ರನಾಥ್ ಅವರ ನೇತೃತ್ವದಲ್ಲಿ ಮಾಜಿ ಸಚಿವರಾದ ಎಂ. ಪಿ. ರೇಣುಕಾಚಾರ್ಯ, ಕರುಣಾಕರ ರೆಡ್ಡಿ, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಲೋಕಿಕೆರೆ ನಾಗರಾಜ್, ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಅಜಯ್ ಕುಮಾರ್, ಬಿಜೆಪಿ ಹಿರಿಯ ಮುಖಂಡ ಕಲ್ಲೇಶ್, ದೂಡಾ ಮಾಜಿ ಅಧ್ಯಕ್ಷ ಸುರೇಶ್, ಶಿವಯೋಗಿಸ್ವಾಮಿ ಅವರು ಸಭೆ ನಡೆಸಿದ್ದೇವೆ. ನಾನು ಪಾಲ್ಗೊಂಡಿದ್ದೆ. ಆದ್ರೆ ವಿನಾಕಾರಣ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಅಪಪ್ರಚಾರ ನಿಲ್ಲಿಸಿ:
ಚನ್ನಗಿರಿ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದೆ. ಈ ಪತ್ರಿಕಾಗೋಷ್ಠಿ ಬಳಸಿಕೊಂಡು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರರಿಗೆ ಬೆಂಬಲಿಸಿದ ಮಾಡಾಳ್ ಮಲ್ಲಿಕಾರ್ಜುನ್ ಎಂದೆಲ್ಲಾ ಪ್ರಚಾರ ಮಾಡಲಾಗುತ್ತಿದೆ. ಮುನಿಸು ಬಿಟ್ಟು ಬೆಂಬಲಿಸಿದ ಮಾಡಾಳ್ ಮಲ್ಲಿಕಾರ್ಜುನ್ ಅಂತೆಲ್ಲಾ ಪತ್ರಿಕಾಗೋಷ್ಠಿಯ ಚಿತ್ರ ಹಾಕಿ ಎಲ್ಲಾ ಕಡೆ ವೈರಲ್ ಮಾಡಲಾಗುತ್ತಿದೆ. ವ್ಯಾಟ್ಸಪ್ ಮತ್ತು ಫೇಸ್ ಬುಕ್ ಸೇರಿ ಸೋಷಿಯಲ್ ಮೀಡಿಯಾದಲ್ಲಿ ಬರುತ್ತಿದೆ. ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿದ್ದ ವಿಚಾರದ ಬಗ್ಗೆ ಮಾತನಾಡಿದ ಮಾಡಾಳ್ ಮಲ್ಲಿಕಾರ್ಜುನ್, ನಾವೆಲ್ಲಾ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರು. ಆದ್ದರಿಂದ ಈ ಭಾಗದ ಮುಖಂಡರಾಗಿ ಎಲ್ಲರಿಗೂ ಮನವಿ ಮಾಡಿದ್ದೆ. ಅತ್ಯುನ್ನತ ನಾಯಕರಾದ ನರೇಂದ್ರ ಮೋದಿ ಬರುತ್ತಿದ್ದಾರೆ. ಹೋಗೋಣ ಎಂದಿದ್ದೆ. ಆದ್ರೆ, ಅದನ್ನೇ ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದರು.
ಒಂದು ವಿಚಾರಧಾರೆಗೆ ಬದ್ಧ:
ಒಂದು ವಿಚಾರಧಾರೆಗೆ ನಾವೆಲ್ಲರೂ ಬದ್ಧವಾಗಿದ್ದೇವೆ. ದಯಮಾಡಿ ಯಾರೂ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆಯೋ ಬಿಟ್ಟು ಬಿಡಿ. ಗುಂಪು ವಿಚಲಿತರನ್ನಾಗಿ ಮಾಡಲು, ಒಡೆಯಲು ತಂತ್ರಗಾರಿಕೆ ಮಾಡಬೇಡಿ ಎಂದು ಮನವಿ ಮಾಡುವುದಾಗಿ ಹೇಳಿದರು.
ನಾವೆಲ್ಲರೂ ಬಿಜೆಪಿಯವರೇ. ಕಾರ್ಯಕರ್ತರು, ಮುಖಂಡರು ಎಲ್ಲರೂ ಒಂದೇ. ಕೆಲ ವಿಚಾರಗಳ ಬಗ್ಗೆ ಚರ್ಚೆ ಮಾಡಬೇಕು. ರಾಜ್ಯದ ವರಿಷ್ಠರು ಬರಬೇಕು. ಬೇಡಿಕೆ ಇಲ್ಲವೇ ನಮ್ಮ ಮನಸ್ಸು ಸರಿಹೋಗಬೇಕು. ನಾವೆಲ್ಲರೂ ನೊಂದವರು, ದೌರ್ಜನ್ಯಕ್ಕೆ ಒಳಗಾದವರು. ಕುಳಿತು ಚರ್ಚೆ ಮಾಡಿ ತಿಳಿಗೊಂಡ ಮೇಲೆ ಚುನಾವಣಾ ಕಣಕ್ಕೆ ಧುಮುಕುತ್ತೇವೆ ಎಂದು ಹೇಳಿದ್ದೇವೆ. ಅದನ್ನು ಮೀರಿ ಮಾನವೀಯತೆ ಇಲ್ಲದ ರೀತಿಯಲ್ಲಿ ನಡೆದುಕೊಂಡರೆ ಮತದಾರರಿಗೆ ಬಿಡುತ್ತೇವೆ ಎಂದು ಮಾಡಾಳ್ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ನಾವೂ ಮೋದಿಜಿ ಅಭಿಮಾನಿಗಳು, ನಿಷ್ಠಾವಂತ ಕಾರ್ಯಕರ್ತರು. ಗುಂಪು ಒಡೆಯುವ ಹುನ್ನಾರ ಯಾರೂ ಮಾಡಬೇಡಿ. ಕೈಬಿಡಿ. ಪಕ್ಷಕ್ಕೂ ಒಳ್ಳೆಯದಲ್ಲ, ಯಾರಿಗೂ ಶೋಭೆ ತರುವಂಥದ್ದಲ್ಲ ಎಂದು ಹೇಳಿದ್ದಾರೆ.
ನಾನೊಬ್ಬನೇ ತೀರ್ಮಾನ ತೆಗೆದುಕೊಂಡಿಲ್ಲ:
ಒಳ್ಳೆಯ ರೀತಿಯಲ್ಲಿ ಹೋಗೋಣ ಎಂಬ ಪ್ರಯತ್ನ ನಮ್ಮದು. ಎಲ್ಲರ ಮನಸ್ಸು ತಿಳಿಗೊಳಿಸಿ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಹೋಗಬೇಕು. ಏನೇ ಆಗಲಿ, ರಾಷ್ಟ್ರ ಮತ್ತು ರಾಜ್ಯ ಮಟ್ಟಕ್ಕೆ ನಮ್ಮ ಬೇಡಿಕೆ ಮುಟ್ಟಿಸಿದ್ದೇವೆ. ನಾವೆಲ್ಲರೂ ಒಳ್ಳೆಯ ಭಾವನೆಯಿಂದ ಒಟ್ಟಾಗಿಸಲು ಗಮನ ಹರಿಸಬೇಕು ಎಂದು ಪ್ರತಿಪಾದಿಸುತ್ತೇವೆ. ಎಸ್. ಎ. ರವೀಂದ್ರನಾಥ್ ಅವರ ನೇತೃತ್ವದಲ್ಲಿ ನಾವೆಲ್ಲರ ತೀರ್ಮಾನ ಮಾಡಿದ್ದೇವೆ. ನಾನೊಬ್ಬನೇ ತೀರ್ಮಾನ ತೆಗೆದುಕೊಂಡಿಲ್ಲ. ಅವರೆಲ್ಲರೂ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ. ಯಾರೂ ಹೇಳಿಕೊಟ್ಟಿದ್ದಾರೋ, ಕೆಡಿಸಲು ಯಾರು ಮಾಡುತ್ತಿದ್ದಾರೋ ಗೊತ್ತಿಲ್ಲ. ಜನರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಆಗಬಾರದು. ಸಮಸ್ಯೆ ಸರಿಪಡಿಸುವುದಕ್ಕೆ ಗಮನ ನೀಡಲಾಗುತ್ತದೆ ಎಂದಿರುವ ಅವರು, ಆಸ್ತಿ ಕೇಳಿಲ್ಲ. ಪಕ್ಷದೊಳಗಿನ ಸಮಸ್ಯೆ ಸರಿ ಆಗಬೇಕು. ಮುಂದಿನ ದಿನಗಳಲ್ಲಿ ಯಾರ ಕಡೆಯಿಂದಲೂ ಅನ್ಯಾಯ ಆಗಬಾರದು, ದೌರ್ಜನ್ಯ ಆಗಬಾರದು ಎಂಬ ಸದುದ್ದೇಶದಿಂದ ಒಟ್ಟಾಗಿದ್ದೇವೆ. ಗೊಂದಲ ಸೃಷ್ಟಿ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.