ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

BIG NEWS: ಕೈಕೊಟ್ಟು ಕಮಲ ಮುಡಿದ ಶಿವನಹಳ್ಳಿ ರಮೇಶ್ ಹೇಳಿದ್ದೇನು..? ಬಿಜೆಪಿ ಸೇರಲು ಕೊಟ್ಟ ಕಾರಣವೇನು… ಎಸ್. ಎಸ್. ಮಲ್ಲಿಕಾರ್ಜುನ್ ಪ್ರತಿಕ್ರಿಯೆ ಏನು?

On: April 11, 2024 4:24 PM
Follow Us:
---Advertisement---

SUDDIKSHANA KANNADA NEWS/DAVANAGERE/DATE:11-04-2024

ದಾವಣಗೆರೆ: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ಗೆ ಮಾಸ್ಟರ್ ಸ್ಟ್ರೋಕ್ ನೀಡಿರುವ ಬಿಜೆಪಿಯು ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಆಪ್ತ ಶಿವನಹಳ್ಳಿ ರಮೇಶ್ ಅವರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಕಾಂಗ್ರೆಸ್ ಪಕ್ಷ ಬಿಡಲು ಶಿವನಹಳ್ಳಿ ರಮೇಶ್ ಕಾರಣ ನೀಡಿದ್ದಾರೆ.

ಜಿಎಂಐಟಿಯಲ್ಲಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ, ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ಶಾಸಕ ಬಿ. ಪಿ. ಹರೀಶ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪರ ಸಮ್ಮುಖದಲ್ಲಿ ಬಿಜೆಪಿ ಬಾವುಟ ಪಡೆದು ಸೇರಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಹಾಗೂ ನನ್ನ ತಂದೆ ಸ್ನೇಹಿತರು. ಆಗಿನಿಂದಲೂ ನಾನು ಕಾಂಗ್ರೆಸ್ ನಲ್ಲಿಯೇ ಇದ್ದೆ. ಆದ್ರೆ, ಕಳೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವೈಯಕ್ತಿಕ ಕಾರಣಗಳಿಂದ ಸ್ಪರ್ಧೆ ಮಾಡಲಿಲ್ಲ ಎಂದರು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶದ ಸಶಕ್ತವಾಗಿದೆ, ಬಲಿಷ್ಠವಾಗಿದೆ. ದೇಶ ಮುನ್ನಡೆಸುತ್ತಿರುವ ಮೋದಿ ಹಾಗೂ ಕೇಂದ್ರ ಸರ್ಕಾರದ ಜನಪರ ಆಡಳಿತ ಮೆಚ್ಚಿ ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ. ಯಾವುದೇ ಷರತ್ತು ಇಲ್ಲದೇ ಬಂದಿದ್ದು, ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರ ಗೆಲುವಿಗೆ ಶ್ರಮಿಸುತ್ತೇನೆ. ನನ್ನ ಜೊತೆಗೆ ನೂರಾರು ಮುಖಂಡರು, ಕಾರ್ಯಕರ್ತರು ಬಿಜೆಪಿಗೆ ಸೇರುತ್ತಿದ್ದೇವೆ ಎಂದು ತಿಳಿಸಿದರು.

ಕಾಂಗ್ರೆಸ್ ನಲ್ಲಿ ನನಗೆ ಉಸಿರುಗಟ್ಟುವ ವಾತಾವರಣ ಇರಲಿಲ್ಲ. ನಾನು ಕಾಂಗ್ರೆಸ್ ಪಕ್ಷದ ಚಿಹ್ನೆಯಿಂದ ಸ್ಪರ್ಧಿಸಿ ನಾಲ್ಕು ಬಾರಿ ಗೆದ್ದಿದ್ದೇನೆ. ಎರಡು ಬಾರಿ ನಗರಸಭೆ ಸದಸ್ಯನಾಗಿ, ಎರಡು ಬಾರಿ ಮಹಾನಗರ ಪಾಲಿಕೆಯ ಸದಸ್ಯನಾಗಿ ಒಟ್ಟು
ಹದಿನೆಂಟು ವರ್ಷ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ರಾಜಕಾರಣದಲ್ಲಿ ಕಳೆದ ಐದು ವರ್ಷಗಳಿಂದ ಮುಂಚೂಣಿಯಲ್ಲಿರಲಿಲ್ಲ. ವೈಯಕ್ತಿಕ ಕಾರಣಗಳಿಂದ ಸ್ವಲ್ಪ ದೂರವಿದ್ದೆ. ಆದ್ರೆ, ಈಗ ಬಿಜೆಪಿ ತತ್ವ, ಸಿದ್ಧಾಂತ ಮೆಚ್ಚಿ ಸೇರುತ್ತಿದ್ದೇನೆ. ಇದು ಖುಷಿ ತಂದಿದೆ ಎಂದು ಹೇಳಿದರು.

2018ರಲ್ಲಿ ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧೆ ಮಾಡಲಿಲ್ಲ. ನನಗೆ ಬಿ ಫಾರಂ ಅನ್ನು ಕಾಂಗ್ರೆಸ್ ನೀಡಿತ್ತಾದರೂ ಕಣಕ್ಕಿಳಿದಿರಲಿಲ್ಲ. ಯಾವುದೇ ಗೊಂದಲ ಇರಲಿಲ್ಲ. ಯುಗಾದಿ ಹಬ್ಬವಾದ ಕಾರಣ ಚಂದ್ರನನ್ನು ನೋಡಿದ ಬಳಿಕ ಹಿರಿಯ ಆಶೀರ್ವಾದ ಪಡೆಯುವುದು ಸಾಮಾನ್ಯ. ಈ ಕಾರಣಕ್ಕೆ ಶಾಮನೂರು ಶಿವಶಂಕರಪ್ಪರನ್ನು ಭೇಟಿ ಮಾಡಿದ್ದೆ. ಆದ್ರೆ, ಯಾವುದೇ ಬಂಡಾಯ, ಭಿನ್ನಮತ ಶಮನಕ್ಕಲ್ಲ. ಅವರ ಆಶೀರ್ವಾದ ಪಡೆದು ಬಂದಿದ್ದೆ ಎಂದು ತಿಳಿಸಿದರು.

ನಾನು ಕಾಂಗ್ರೆಸ್ ಚಿಹ್ನೆಯಡಿ ಚುನಾವಣೆಯಲ್ಲಿ ಗೆದ್ದಿದ್ದರೂ ಕಾಂಗ್ರೆಸ್ ಪಕ್ಷದ ಯಾವುದೇ ಹುದ್ದೆಗಳಲ್ಲಿ ಇರಲಿಲ್ಲ. ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡಿಲ್ಲ. ಎಲ್ಲಾ ಅವಕಾಶಗಳನ್ನೂ ಕಾಂಗ್ರೆಸ್ ನೀಡಿತ್ತು. ನಾನು ವ್ಯಾಪಾರಸ್ಥ. ಈ ಕಾರಣಕ್ಕೆ ಹೆಚ್ಚು ರಾಜಕೀಯದಲ್ಲಿ ತೊಡಗಿಸಿಕೊಂಡಿರಲಿಲ್ಲ. ಮತ್ತೆ ಕಾಂಗ್ರೆಸ್ ಗೆ ಮರಳಿ ಹೋಗುವ ಕುರಿತಂತೆ ಸಂಧಾನ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಎಸ್. ಎಸ್. ಮಲ್ಲಿಕಾರ್ಜುನ್ ಏನಂದ್ರು..?

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು, ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಹೋಗುತ್ತಾರೆ ಎಂಬ ವದಂತಿ ಇತ್ತು. ಆಗ ಕರೆದು ಮಾತನಾಡಿದ್ದೆವು. ಇಂದು ಬಿಜೆಪಿ ಸೇರಿದ್ದಾರೆ ಎಂಬ ವಿಚಾರ ಗೊತ್ತಾಗಿದೆ. ನಾವು ಅವರು ಉತ್ತಮ ಸ್ನೇಹಿತರು. ಮತ್ತೊಮ್ಮೆ ಮಾತನಾಡುತ್ತೇನೆ. ಕಾಂಗ್ರೆಸ್ ಗೆ ಮರಳುವಂತೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment