SUDDIKSHANA KANNADA NEWS/ DAVANAGERE/ DATE:01-03-2024
ಹಾಸನ: ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆಯನ್ನು ತಕ್ಷಣದಲ್ಲಿ ಮಾಡಲಾಗುವುದು. ಎಲ್ಲರೂ ಒಗ್ಗಟ್ಟಾಗಿರುವುದರಿಂದ ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಗೊಂದಲವಿರುವುದಿಲ್ಲ ಎಂದು ಮುಖ್ಯಮಂತ್ರಿ
ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಘೋಷಣೆ ಕೂಗಿದ್ದು ನಿಜವಾದರೆ ಕಠಿಣ ಕ್ರಮ:
ಪಾಕಿಸ್ತಾನ ಪರ ಘೋಷಣೆ ಪ್ರಕರಣ ಸಂಬಂಧಿಸಿದಂತೆ ಎಫ್ ಎಸ್ ಎಲ್ ವರದಿ ಬೇಗ ಬಹಿರಂಗಪಡಿಸಬೇಕು ಎಂದು ವಿರೋಧಪಕ್ಷದ ನಾಯಕ ಅಶೋಕ್ ಒತ್ತಾಯಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ವರದಿ ಬಂದ ತಕ್ಷಣ ಬಹಿರಂಗ ಮಾಡುತ್ತೇವೆ. ಭಾರತದ ಪರವಾಗಿ ಇಲ್ಲದಿರುವವರು ಘೋಷಣೆ ಕೂಗಿದ್ದು ನಿಜವಾಗಿದ್ದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ದೇಶಭಕ್ತಿಯನ್ನು ಬಿಜೆಪಿಯವರು ಕಾಂಗ್ರೆಸ್ ಗೆ ಹೇಳಿಕೊಡುವ ಅಗತ್ಯವಿಲ್ಲ. ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ್ದು ಕಾಂಗ್ರೆಸ್ ಹೊರತು ಬಿಜೆಪಿಯಲ್ಲ ಎಂದು ತಿಳಿಸಿದರು.
ಜಾತಿಗಣತಿ ವರದಿ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ:
ಕಾಂತರಾಜು ವರದಿಯನ್ನು ಕೆಲವು ಸ್ವಾಮೀಜಿಗಳು ಹಾಗೂ ಪಕ್ಷದ ಕೆಲ ನಾಯಕರೇ ವಿರೋಧಿಸುತ್ತಿರುವ ಬಗ್ಗೆ ಉತ್ತರಿಸಿ, ಜಾತಿಗಣತಿ ವರದಿಯನ್ನು ಸ್ವೀಕರಿಸಲಾಗಿದೆ. ಆದರೆ ವರದಿಯಲ್ಲಿರುವ ಅಂಶಗಳ ಬಗ್ಗೆ ಮಾಹಿತಿಯಿಲ್ಲ. ಸದರಿ ವರದಿಯನ್ನು ಸಚಿವ ಸಂಪುಟದ ಮುಂದೆ ಇರಿಸಿ ಚರ್ಚಿಸಲಾಗುವುದು ಎಂದು ಹೇಳಿದರು.
ಎಲ್ಲರ ಅಭಿಪ್ರಾಯವನ್ನು ಪಡೆದೇ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ, ಆದರೆ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂದರು.
ಜಾತ್ಯಾತೀತ ಜೆಡಿಎಸ್ ಕೋಮುವಾದಿ ಪಕ್ಷದೊಂದಿಗೆ ಮೈತ್ರಿ
ವಿರೋಧಪಕ್ಷದವರು ಅಧಿವೇಶನವನ್ನು ಬಹಿಷ್ಕರಿಸಿ ರಾಜ್ಯಪಾಲರನ್ನು ಭೇಟಿಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯವರು ಒಬ್ಬರು ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿ, ಮತ್ತೊಬ್ಬರು ಗೈರಾಗಿದ್ದರು. ಇದನ್ನು ಮುಚ್ಚಿಹಾಕಲು ಈ ರೀತಿ ಮಾಡುತ್ತಿದ್ದಾರೆ. ಪಕ್ಷವು ಮಾಡಿಕೊಂಡಿರುವ ಮೈತ್ರಿಯನ್ನು ಶಾಸಕರೇ ಒಪ್ಪಿರುವುದಿಲ್ಲ. ಜೆಡಿಎಸ್ ಅವರು ಜಾತ್ಯಾತೀತರಾಗಿದ್ದು, ಕೋಮುವಾದಿಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದ್ದರು ಎಂದು ತಿಳಿಸಿದರು.
ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಯಲ್ಲಿ ಸಿಎಂ ರಾಜಕೀಯ ಭಾಷಣ ಮಾಡುತ್ತಾರೆ ಎಂಬ ಪ್ರತಿಪಕ್ಷಗಳ ಮಾತಿಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಪಕ್ಷ ಪ್ರಾರಂಭಿಸಿದ್ದ ಹಲವು ಕಾರ್ಯಕ್ರಮಗಳನ್ನ ಜೆಡಿಎಸ್ ಹಾಗೂ ಬಿಜೆಪಿಯವರು ಉದ್ಘಾಟನೆ ಮಾಡಿದ್ದಾರೆ. ಸರ್ಕಾರದಲ್ಲಿ ಇದು ನಿರಂತರ ಪ್ರಕ್ರಿಯೆ. ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ ಮಾಡುವುದನ್ನು ಪ್ರಧಾನಿ ಮೋದಿಯವರಿಂದಲೇ ಕಲಿತಿದ್ದು. ಅವರು ಸಂಸತ್ ಭವನದಲ್ಲಿ ರಾಜಕೀಯ ಭಾಷಣ
ಮಾಡುತ್ತಾರೆ ಎಂದು ತಿರುಗೇಟು ನೀಡಿದರು.
ಹಾಸನ ಮೇಲ್ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ 48 ಕೋಟಿ ರೂ. ಕೊಟ್ಟಿಲ್ಲ ಎಂದು ಜೆಡಿಎಸ್ ಟೀಕೆಗೆ ಪ್ರತಿಕ್ರಿಯೆ ನೀಡಿ, ಇದಕ್ಕೆ ಅನುದಾನವನ್ನು ಜೆಡಿಎಸ್ ಅವರಲ್ಲ, ನಮ್ಮ ಸರ್ಕಾರವೇ ನೀಡುತ್ತದೆ ಎಂದರು.
ಹಾಸನ ವಾರ್ತಾ ಇಲಾಖೆಯ ಕಚೇರಿಯಲ್ಲಿ ಪತ್ರಕರ್ತರನ್ನ ಕರೆದೊಯ್ಯುವ ವಾಹನವಿರದ ಕಾರಣ ತೊಂದರೆಯಾಗಿರುವ ಬಗ್ಗೆ ಪತ್ರಕರ್ತರು ತಿಳಿಸಿದ್ದಕ್ಕೆ , ವಾರ್ತಾ ಇಲಾಖೆಯ ಅಧಿಕಾರಿಗಳೊಂದಿಗೆ ಈ ಬಗ್ಗೆ ಮಾತನಾಡುವುದಾಗಿ ತಿಳಿಸಿದರು.