ದಾವಣಗೆರೆ: ದೇವಸ್ಥಾನ ಸೇರಿ ಪ್ರೇಕ್ಷಣೀಯ ಸ್ಥಳಗಳಲ್ಲಿ ವೆಡ್ಡಿಂಗ್ ಫೋಟೋ ಮತ್ತು ವಿಡಿಯೋ ಶೂಟ್ ಗೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಅವರಿಗೆ ಕರ್ನಾಟಕ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಅಸೋಸಿಯೇಷನ್ ಜಿಲ್ಲಾ ಮತ್ತು ತಾಲೂಕು ಘಟಕಗಳ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.
ದಾವಣಗೆರೆ ಜಿಲ್ಲೆಗೆ ಸಂಬಂಧಿಸಿದಂತೆ ಎಲ್ಲಾ ಪ್ರೇಕ್ಷಣೀಯ ಸ್ಥಳಗಳು ಹಾಗೂ ದೇವಸ್ಥಾನಗಳಾದ ಹರಿಹರ, ನೀಲಗುಂದ, ಸಂತೆಬೆನ್ನೂರು, ಬಾಗಳಿ ಹಾಗೂ ಇನ್ನಿತರೆ ದೇವಸ್ಥಾನಗಳಲ್ಲಿ ಹೊರಾಂಗಣ ಚಿತ್ರೀಕರಣ, ಪ್ರೀ ವೆಡ್ಡಿಂಗ್ ಫೋಟೋಶೂಟ್ ಹಾಗೂ ವಿಡಿಯೋ ಶೂಟ್ ಮಾಡಲು ಸ್ಥಳದಲ್ಲಿಯೇ ಟಿಕೆಟ್ ಕೌಂಟರ್ ಮಾಡುವುದರ ಮೂಲಕ ದರ ನಿಗದಿಪಡಿಸಿ ಅನುಮತಿ ಕೊಡಬೇಕೆಂದು ಮನವಿ ಮಾಡಿದ್ದಾರೆ.
ಹಣ ಸಂಗ್ರಹಿಸುವುದರಿಂದ ದೇವಸ್ಥಾನದ ಅಭಿವೃದ್ಧಿ ಮತ್ತು ಜೀರ್ಣೋದ್ಧಾರಕ್ಕೆ ಹೆಚ್ಚು ಆದಾಯ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಫೋಟೋಶೂಟ್ ಮಾಡಲು ಅನುಮತಿ ಇಲ್ಲ ಎಂದು ದೇವಸ್ಥಾನಕ್ಕೆ ಸಂಬಂಧಪಟ್ಟ ಅರ್ಚಕರು ಹಾಗೂ ಸಿಬ್ಬಂದಿಗಳು ಹೇಳುತ್ತಿದ್ದಾರೆ. ಆದ ಕಾರಣ ಟಿಕೆಟ್ ಮಾಡುವುದರ ಮೂಲಕ ಅನುಮತಿ ಕೊಡಬೇಕೆಂದು ಕೇಳಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಚಿತ್ರೀಕರಣ ಮಾಡುವುದರಿಂದ ದೇವಸ್ಥಾನವನ್ನು ದೇಶ, ರಾಜ್ಯದ ಎಲ್ಲೆಡೆ ಪ್ರಚಾರ ಆಗುತ್ತದೆ. ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ಕೊಟ್ಟಂತೆ ಆಗುತ್ತದೆ. ಇತ್ತೀಚಿಗೆ ಛಾಯಾಗ್ರಾಹಕರು ಹೊನ್ನಾವರ, ಮೈಸೂರು, ಉಡುಪಿ, ಬೆಂಗಳೂರು, ಗೋವಾ, ಇನ್ನಿತರ ಊರುಗಳಿಗೆ ಹೋಗುತ್ತಿದ್ದಾರೆ ಸಮಯ, ಹಣ, ಇಂಧನವೂ ವ್ಯರ್ಥವಾಗುತ್ತದೆ. ಆದ್ದರಿಂದ ಕೂಡಲೇ ಪರಿಶೀಲಿಸಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಹಾಗೂ ವಿಡಿಯೋ ಶೂಟ್ ಗೆ ಅನುಮತಿ ಕೊಡಬೇಕೆಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ್ ಸ್ವಾಮಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಮನು ಎಂ. ದೇವನಗರಿ, ರಾಜ್ಯ ಕಾರ್ಯಾಧ್ಯಕ್ಷ ಕೊಂಡಜ್ಜಿ ಎಸ್. ರಾಜಶೇಖರ್, ರಾಜ್ಯ ಜಂಟಿ ಕಾರ್ಯದರ್ಶಿ ಡಿ. ರಂಗನಾಥ, ಜಿಲ್ಲಾಧ್ಯಕ್ಷ ಬಿ. ಮಂಜುನಾಥ್, ತಾಲೂಕು ಅಧ್ಯಕ್ಷ ಎಚ್. ಎಫ್. ಸಂಜಯ್ ಸೇರಿದಂತೆ ಮತ್ತಿತರರು ಹಾಜರಿದ್ದರು.