SUDDIKSHANA KANNADA NEWS/ DAVANAGERE/ DATE:26-12-2024
ಹೈದರಾಬಾದ್: ಪುಷ್ಪಾ-2 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. ಸಾವಿರ ಕೋಟಿ ರೂಪಾಯಿಗೂ ಅಧಿಕ ಹಣ ಕೊಳ್ಳೆ ಹೊಡೆದಿದೆ. ಇನ್ನು ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್ ಫ್ಯಾನ್ಸ್ ಹುಚ್ಚಾಟ ಮುಂದುವರಿದಿದೆ. ಈ ಕಾರಣಕ್ಕೆ ಹೈದರಾಬಾದ್ ಪೊಲೀಸರು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಇನ್ನು ಸಂಧ್ಯಾ ಥಿಯೇಟರ್ ಗೆ ಅಲ್ಲು ಅರ್ಜುನ್ ಬಂದ ಬಳಿಕ ನಡೆದ ಬೆಳವಣಿಗೆಗಳು ಟಾಲಿವುಡ್ ನಟ ಅಲ್ಲು ಅರ್ಜುನ್ ಹಾಗೂ ತೆಲಂಗಾಣ ಸಿಎಂ ನಡುವಿನ ಗುದ್ದಾಟ ಜೋರಾಗಿತ್ತು. ಮಹಿಳೆ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಬಳಿಕ ಪೊಲೀಸರು ಅಲ್ಲು
ಅರ್ಜುನ್ ಬಂಧಿಸಿದ್ದರು. ಸ್ಥಳೀಯ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ಒಪ್ಪಿಸಿತ್ತು. ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಆದರೂ ಒಂದು ದಿನ ಜೈಲಿನಲ್ಲಿಯೇ ಅಲ್ಲು ಅರ್ಜುನ್ ಕಳೆದಿದ್ದರು.
ಸಂಧ್ಯಾ ಥಿಯೇಟರ್ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ಹರಡದಂತೆ ಹೈದರಾಬಾದ್ ನಗರ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ದಾರಿತಪ್ಪಿಸುವ ವಿಷಯಗಳನ್ನು
ಹರಿಬಿಡುವವರ ವಿರುದ್ಧ ನಿರ್ದಾಕ್ಷಿಣ್ಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಒಂದು ಸಾವಿಗೆ ದುರಂತ ಕಾರಣವಾದ ಪ್ರಕರಣವನ್ನು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ನಂಬಲರ್ಹವಾದ ಪುರಾವೆಗಳನ್ನು ಹೊಂದಿರುವ ಯಾರಾದರೂ ಮುಂದೆ ಬರುವಂತೆ ಒತ್ತಾಯಿಸುತ್ತಾರೆ. ಸಾರ್ವಜನಿಕರು ವೈಯಕ್ತಿಕ ಪ್ರತಿಕ್ರಿಯೆ ನೀಡದಂತೆ ಪೊಲೀಸರು ವಿನಂತಿಸಿದ್ದಾರೆ.