SUDDIKSHANA KANNADA NEWS/ DAVANAGERE/ DATE:11-09-2023
ಕೊಲಂಬೋ: ಕನ್ನಡಿಗ ಕೆ. ಎಲ್. ರಾಹುಲ್ ಹಾಗೂ ಕಿಂಗ್ ವಿರಾಟ್ ಕೊಹ್ಲಿ (Virat Kohli) ಬಾರಿಸಿದ ಭರ್ಜರಿ ಶತಕದ ನೆರವಿನಿಂದ ಭಾರತ ತಂಡವು, ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 356 ರನ್ ಗಳ ಬೃಹತ್ ಮೊತ್ತ ಪೇರಿಸಿದೆ. ವಿರಾಟ್ ಕೊಹ್ಲಿ 13 ಸಾವಿರ ರನ್ ಗಳ ಸರದಾರ ಎನಿಸಿಕೊಂಡರು.
ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಭಾರತವು ಭಾನುವಾರ 24.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 147 ರನ್ ಪೇರಿಸಿತ್ತು. ಶುಭಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಭರ್ಜರಿ ಅರ್ಧಶತಕದ ನೆರವಿನಿಂದ ಈ ಮೊತ್ತ ಪೇರಿಸಿತ್ತು. ಮಳೆ ಸುರಿದ ಕಾರಣ ಸೋಮವಾರಕ್ಕೆ ಪಂದ್ಯ ಮುಂದೂಡಲಾಗಿತ್ತು.
ಈ ಸುದ್ದಿಯನ್ನೂ ಓದಿ:
ಬಿಜೆಪಿಗೆ ಎಂ. ಪಿ. ರೇಣುಕಾಚಾರ್ಯ (M. P. Renukacharya)ಕಪ್ಪುಚುಕ್ಕೆ, ತೇಜೋವಧೆ ಮುಂದುವರೆಸಿದರೆ ಸುಮ್ಮನಿರಲ್ಲ: ವೀರೇಶ್ ವೀರಾವೇಶದ ಎಚ್ಚರಿಕೆ
ಮಧ್ಯಾಹ್ನ ಶುರುವಾದ ವಿರಾಟ್ ಕೊಹ್ಲಿ (Virat Kohli) ಹಾಗೂ ಕೆ. ಎಲ್. ರಾಹುಲ್ ಆಟದಲ್ಲಿ ಮಳೆ ಬಾರದಿದ್ದರೂ ಬೌಂಡರಿ, ಸಿಕ್ಸರ್ ಗಳ ಮಳೆ ಸುರಿಯಿತು. ವಿರಾಟ್ ಕೊಹ್ಲಿ(Virat Kohli) ಯಂತೂ ಭರ್ಜರಿ 9 ಬೌಂಡರಿ ಹಾಗೂ ಮೂರು ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಕ್ರಿಕೆಟ್ ಪ್ರಿಯರ ರಂಜಿಸಿದರು. ಕೇವಲ 94 ಎಸೆತಗಳಲ್ಲಿ 122 ರನ್ ಚಚ್ಚಿದರು. ಕೊಹ್ಲಿ ವಿರಾಟ ಆಟಕ್ಕೆ ಪಾಕ್ ಬೌಲರ್ ಗಳು ಮಂಕಾದರು. 26.1 ಓವರ್ ಗಳ ಬ್ಯಾಟಿಂಗ್ ಮಾಡಿದ ಇಬ್ಬರೂ ಆಟಗಾರರು ಪಾಕ್ ಬೌಲರ್ ಗಳನ್ನು ಮನಬಂದಂತೆ ದಂಡಿಸಿದರು. 193 ಬಾಲ್ ಗಳಲ್ಲಿ ಈ ಜೋಡಿ 233 ರನ್ ಗಳ ದಾಖಲೆಯ ಜೊತೆಯಾಟ ನೀಡಿತು.
ಕಳಪೆ ಫಾರ್ಮ್ ನಿಂದ ತಂಡದಿಂದ ಹೊರಗುಳಿದಿದ್ದ ಕೆ. ಎಲ್. ರಾಹುಲ್ ಭರ್ಜರಿ ಕಂ ಬ್ಯಾಕ್ ಮಾಡಿದರು. ಕಳೆದ ಕೆಲ ದಿನಗಳಿಂದ ಶತಕ ಬಾರಿಸದ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಗೆ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು
ಖುಷಿ ಪಟ್ಟರು.
ಪಾಕ್ ನ ಯಾವ ಬೌಲರ್ ಗಳು ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ವೇಗ ಹಾಗೂ ಸ್ಪಿನ್ ಬೌಲರ್ ಗಳನ್ನು ಆಗಾಗ್ಗೆ ಬೌಲಿಂಗ್ ಗೆ ಇಳಿಸಿದರೂ ಪಾಕ್ ನಾಯಕನ ಲೆಕ್ಕಾಚಾರ ತಲೆಕೆಳಗಾದವು. ಇನ್ನು ವಿಶ್ವಕಪ್ ಹತ್ತಿರವಾಗುತ್ತಿದೆ. ಇಂಥ
ವೇಳೆಯಲ್ಲಿ ಭಾರತ ತಂಡದ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ಕನ್ನಡಿಗ ಕೆ. ಎಲ್. ರಾಹುಲ್ ಆಟದ ಸೊಬಗು ಸೂಪರ್ ಆಗಿತ್ತು. ಕೇವಲ 106 ಎಸೆತಗಳಲ್ಲಿ12 ಬೌಂಡರಿ ಹಾಗೂ ಎರಡು ಭರ್ಜರಿ ಸಿಕ್ಸರ್ ನೆರವಿನಿಂದ 111 ರನ್ ಬಾರಿಸಿದರು. ವಿರಾಟ್ ಕೊಹ್ಲಿ ಹಾಗೂ ರಾಹುಲ್ ಬ್ಯಾಟಿಂಗ್ ನ ಸೊಬಗು
ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತೆ ಮಾಡಿತು.
ಇಬ್ಬರೂ ಶತಕ ಬಾರಿಸುವ ಮೂಲಕ ಟೀಂ ಇಂಡಿಯಾ ಬೃಹತ್ ಮೊತ್ತ ಪೇರಿಸಲು ಕಾರಣವಾದರು. ಪಾಕಿಸ್ತಾನ ತಂಡವು ಗೆಲ್ಲಲು 357 ರನ್ ಗಳ ಬೃಹತ್ ಮೊತ್ತದ ಸವಾಲು ನೀಡಿದೆ. ವಿರಾಟ್ ಕೊಹ್ಲಿ ಹಾಗೂ ಕೆ. ಎಲ್. ರಾಹುಲ್ ಇಬ್ಬರ
ಜೋಡಿ ದ್ವಿಶತಕಕ್ಕೂ ಹೆಚ್ಚು ರನ್ ಗಳನ್ನು ಬಾರಿಸುವ ಮೂಲಕ ಗಮನ ಸೆಳೆಯಿತು. ಮೂರನೇ ವಿಕೆಟ್ ಗೆ ಉತ್ತಮ ಜೊತೆಯಾಟ ನೀಡಿತು.
ವಿರಾಟ್ ಕೊಹ್ಲಿಗೆ ಡಬಲ್ ಧಮಾಕಾ. ಒಂದೆಡೆ ಶತಕ ಬಾರಿಸಿ ಖುಷಿ ಪಟ್ಟರೆ, ಮತ್ತೊಂದೆಡೆ ಏಕದಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ 13 ಸಾವಿರ ರನ್ ಬಾರಿಸಿದ ಆಟಗಾರ ಎಂಬ ಕೀರ್ತಿಗೂ ಪಾತ್ರರಾದರು. ರಾಹುಲ್ ಸಹ ತನ್ನ ಬ್ಯಾಟ್ ನಲ್ಲಿನ ರನ್ ಕೊರತೆ ನೀಗಿಸಿಕೊಂಡರು. ಆಯ್ಕೆಯನ್ನು ಈ ಮೂಲಕ ಸಮರ್ಥಿಸಿಕೊಂಡರು. ಶಹೀನ್ ಅಫ್ರೀದಿ, ಶಾದಾಬ್ ಖಾನ್ ಸೇರಿದಂತೆ ಪಾಕ್ ಬೌಲರ್ ಗಳ ತಂತ್ರ ಫಲ ಕೊಡಲಿಲ್ಲ. 26.1 ಓವರ್ ಗಳಲ್ಲಿ ಟೀಂ ಇಂಡಿಯಾ 200ಕ್ಕೂ ಹೆಚ್ಚು ರನ್ ಬಾರಿಸುವ ಮೂಲಕ ಪಾಕ್ ಬೌಲರ್ ಗಳನ್ನು ಚೆಂಡಾಡಿದರು.