SUDDIKSHANA KANNADA NEWS/ DAVANAGERE/ DATE: 30-01-2024
ದಾವಣಗೆರೆ (Davanagere): ಪಾದಯಾತ್ರೆ ನಡೆಸುವ ಮೂಲಕ ಗ್ರಾಮೀಣ ಭಾಗ ಮಾತ್ರವಲ್ಲ, ಜಿಲ್ಲೆಯಲ್ಲಿ ಚಿರಪರಿಚಿತವಾಗಿರುವ ಕಾಂಗ್ರೆಸ್ ಯುವ ನಾಯಕ, ಭಾರತೀಯ ಯುವ ಕಾಂಗ್ರೆಸ್ ಔಟ್ರೀಚ್ ವಿಭಾಗದ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಹಾಗೂ ಬೆಂಗಳೂರು ಇನೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕರು ಹಾಗೂ ನಿರ್ದೆಶಕ ಜಿ. ಬಿ. ವಿನಯ್ ಕುಮಾರ್ ಜಿಲ್ಲೆಯಲ್ಲಿ ಈಗ ಎಲ್ಲರಿಗೂ ಚಿರಪರಿಚಿತ. ವಿನಯ ನಡಿಗೆ ಹಳ್ಳಿ ಕಡೆಗೆ ಪಾದಯಾತ್ರೆ ಆರಂಭಿಸಿ ಗಮನ ಸೆಳೆದಿದ್ದ ಕಾಂಗ್ರೆಸ್ ಯುವ ಮುಖಂಡ ಈಗ ರಾಜ್ಯಮಟ್ಟದಲ್ಲಿಯೂ ಗುರುತಿಸುವಂತಾಗಿದ್ದಾರೆ. ಹಳ್ಳಿ ಹಳ್ಳಿ ಸಂಚರಿಸಿದ್ದ ಈ ಪಾದಯಾತ್ರೆಯು ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕೊಗ್ಗನೂರು ಗ್ರಾಮದಲ್ಲಿ ಅಂತ್ಯವಾಯ್ತು. ಆದ್ರೆ, ವಿನಯ್ ಕುಮಾರ್ ಈ ಗ್ರಾಮದಲ್ಲಿ ಮಾಡಿದ ಅಬ್ಬರದ ಭಾಷಣಕ್ಕೆ ಎಲ್ಲರೂ ತಲೆದೂಗಿದರು.
ಜಗಳೂರು ತಾಲೂಕಿನ ಚಿಕ್ಕ ಉಜ್ಜಿನಿಗಡಿ ಗ್ರಾಮದಿಂದ ವಿನಯ ನಡಿಗೆ ಹಳ್ಳಿ ಕಡೆಗೆ ಬೃಹತ್ ಪಾದಯಾತ್ರೆಗೆ ಕಳೆದ ವರ್ಷದ ಡಿಸೆಂಬರ್ 18ರಂದು ಚಾಲನೆ ನೀಡಲಾಯಿತು. ಹರಪನಹಳ್ಳಿ, ಜಗಳೂರು, ಚನ್ನಗಿರಿ, ಹೊನ್ನಾಳಿ, ಹರಿಹರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಪಾದಯಾತ್ರೆ ನಡೆಸುವ ಮೂಲಕ ಜನರ ಪ್ರೀತಿ, ವಿಶ್ವಾಸ ಸಂಪಾದನೆ ಮಾಡಿದವರು.
ಈ ಸುದ್ದಿಯನ್ನೂ ಓದಿ: SPECIAL STORY: ವಿನಯ್ ಕುಮಾರ್ ಪಾದಯಾತ್ರೆಗೆ Siddaramaiah ಶಹಬ್ಬಾಸ್ ಗಿರಿ, ಚಿತ್ರದುರ್ಗದಲ್ಲಿ ಸಿಎಂ – ಕೈ ಯುವ ನಾಯಕನ ನಡುವಿನ ಮಾತುಕತೆ ಏನು ಗೊತ್ತಾ…?
ಈ ಪಾದಯಾತ್ರೆಯ ಮೂಲಕ ವಿನಯ್ ಕುಮಾರ್ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಯಿತು. ಜಿಲ್ಲೆಯ ಜನರಿಗೂ ಪರಿಚಯವಾದಂತಾಯ್ತು. ಪಾದಯಾತ್ರೆಯು ಅಬ್ಬರಿಸಿ ಬೊಬ್ಬಿರಿಯದೇ ಜನರೊಟ್ಟಿಗೆ ಸಂವಾದ, ಸಭೆ, ಸಮಾರಂಭ, ಸಮಸ್ಯೆಗಳು, ಗ್ರಾಮೀಣ ಭಾಗದ ಸಂಕಷ್ಟಗಳು, ಎಂಪಿ ಆದವರು ಹೇಗಿರಬೇಕು? ಯಾವೆಲ್ಲಾ ಯೋಜನೆ ಹಾಕಿಕೊಳ್ಳಬೇಕು? ಜನರೊಟ್ಟಿಗೆ ಹೇಗೆ ಸಂವಹನ ಮಾಡಬೇಕು ಎಂಬುದೂ ಸೇರಿದಂತೆ ಹತ್ತು ಹಲವು ವಿಚಾರಗಳು ಚರ್ಚಿತ ವಿಷಯವಾಗಿದ್ದು ವಿಶೇಷ.
ಮಾಯಕೊಂಡದಲ್ಲಿ ಮುಕ್ತಾಯ
ದಾವಣಗೆರೆ ಜಿಲ್ಲೆಯ ಮಾಯಕೊಂಡ ವ್ಯಾಪ್ತಿಯಲ್ಲಿ ಬರುವ ಕೊಗ್ಗನೂರು ಗ್ರಾಮದಲ್ಲಿ ಪಾದಯಾತ್ರೆ ಅಂತ್ಯವಾಯ್ತು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಹದಡಿ ಗ್ರಾಮದಲ್ಲಿ ಆಯೋಜಿಸಿದ್ದ ಪಾದಯಾತ್ರೆ ಮುಕ್ತಾಯವನ್ನು ಕೊಗ್ಗನೂರು ಗ್ರಾಮದಲ್ಲಿ ಆಯೋಜಿಸಿದ್ದು ಯಾಕೆ ಎಂಬ ಗುಟ್ಟು ಏನು ಎಂಬುದನ್ನು ಜನರಿಗೆ ತಿಳಿಸಿದರು.
ದಾವಣಗೆರೆ ಜನರ ನಾಡಿಮಿಡಿತ ಅರಿತಿದ್ದೇನೆ
ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಹಳ್ಳಿಗಳಲ್ಲಿ ಸುತ್ತಾಡಿ ಜನರ ನಾಡಿಮಿಡಿತ, ಗ್ರಾಮೀಣ ಸಮಸ್ಯೆಗಳನ್ನು ಅರಿಯುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಪಾದಯಾತ್ರೆ ಮಾಡುವಾಗ ಸುಮಾರು 200ರಿಂದ 300 ಜನರು ಇರಬೇಕು. ಇಲ್ಲದಿದ್ದರೆ ಪಾದಯಾತ್ರೆಗೆ ಶಕ್ತಿ ಇಲ್ಲ ಎಂದ್ರು. ಸಾವಿರಾರು ಜನರು ಬರಮಾಡಿಕೊಳ್ಳಬೇಕು. ರಾಜಕಾರಣದಲ್ಲಿ ಸಾವಿರಾರು ಜನರು ಹಿಂದೆ ಮುಂದೆ ಇದ್ದರೆ ನಾಯಕ ಎಂದುಕೊಂಡಿದ್ದಾರೆ. ಆದ್ರೆ ಇದು ನನ್ನ ಗುರಿಯಲ್ಲ. ಪಾದಯಾತ್ರೆ ಹೋಗ್ತಾ ಇರೋದು ನನ್ನನ್ನು ಪರಿಚಯ ಮಾಡಿಕೊಳ್ಳಲು. ಒಬ್ಬನೇ ಹೋದರೆ ಸಾಕು. ಪ್ರಜಾಪ್ರಭುತ್ವದಲ್ಲಿ ಒಬ್ಬ ಆಕಾಂಕ್ಷಿಯಾಗಿ ಜನರಿಗೆ ಪರಿಚಯವಾಗಬೇಕು ಎಂಬ ಉದ್ದೇಶ ಇತ್ತು. ಅದು ಸಾಕಾರಗೊಂಡಿದೆ ಎಂದು ವಿನಯ್ ಕುಮಾರ್ ಹೇಳಿದರು.
ಅಬ್ಬರದ ಭಾಷಣ
ರಾಜಕಾರಣಕ್ಕೆ ಕಾಲಿಟ್ಟಾಗ ದೊಡ್ಡ ಸವಾಲು ಮುಂದಿತ್ತು. ದಾವಣಗೆರೆ ಲೋಕಸಭಾ ಕ್ಷೇತ್ರ ದೊಡ್ಡದು. ಹರಪನಹಳ್ಳಿಯೂ ಸೇರಿದಂತೆ ಎಂಟು ಕ್ಷೇತ್ರಗಳು ಬರುತ್ತವೆ. ಸಾವಿರಾರು ಹಳ್ಳಿಗಳನ್ನು ಸುತ್ತಾಡಿದ್ದೇನೆ. ಬಹಳ ಊರು ಸುತ್ತಾಡಿ ಬಿಟ್ಟಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಮುಖ್ಯ? ಅತ್ಯಂತ ಪ್ರಮುಖರು ಯಾರು? ಎಂದರೆ ಮತದಾರರು, ಸಾಮಾನ್ಯ ಜನರು. ಪ್ರತಿಯೊಬ್ಬ ಜಾತಿ, ವರ್ಗ, ಪಂಗಡದವರು ಬಹುಮುಖ್ಯ ಪಾತ್ರ ಪ್ರಜಾಪ್ರಭುತ್ವದಲ್ಲಿ ವಹಿಸುತ್ತಾರೆ. ಮುಖ್ಯ ಪಾತ್ರವಹಿಸುವುದು ಜನರ ಅಭಿಪ್ರಾಯ, ಅನಿಸಿಕೆಗೆ ಮನ್ನಣೆ ಸಿಗಬೇಕು ಎಂಬುದು. ಇದು ಆಗಬೇಕಿದೆ. ಜನರಿಂದಲೇ ನಾವು, ನಿಮ್ಮಿಂದಲೇ ನಾವು ಎಂದು ಹೇಳಿದರು.
ಕೊಗ್ಗನೂರು ಗ್ರಾಮದ ಪ್ರತಿಯೊಬ್ಬ ಮುಖಂಡರು, ಜನರಿಗೂ ಅನಂತ ಧನ್ಯವಾದಗಳು. ಕೊಗನೂರು ಗ್ರಾಮಕ್ಕೆ ಮೂರನೇ ಬಾರಿ ಭೇಟಿ ನೀಡುತ್ತಿದ್ದೇನೆ. ಮೊದಲ ಬಾರಿಗೆ ಬಂದಾಗ ಯುವಕರು ಆಗಮಿಸಿದ್ದರು. ಶಾಲೆಯ ಕೊಠಡಿಯೊಳಗೆ ಹೋಗಿದ್ದೆ. ಅಂದು ಗಣೇಶ ಹಬ್ಬದ ದಿನ. ತುಂಬಾ ಪ್ರೀತಿಯಿಂದ ಸ್ವಾಗತ ಮಾಡಿ, ಆತ್ಮೀಯತೆಯಿಂದ ಬರಮಾಡಿಕೊಂಡರು. ತಾಳ್ಮೆಯಿಂದ ನನ್ನ ಮಾತು ಕೇಳಿಸಿಕೊಂಡರು.
ಅದಾದ ನಂತರ ದೇವಸ್ಥಾನಕ್ಕೆ ಬಂದು ಹತ್ತು ನಿಮಿಷ ಮಾತನಾಡಿ ಹೋಗಿದ್ದೆ. ಕನಕ ಜಯಂತಿ ಮೆರವಣಿಗೆಗೆ ಬಂದಿದ್ದೆ. ಶಾಸಕ ಬಸವಂತಪ್ಪರು ಇದ್ದರು. ನೆನಪಿಟ್ಟುಕೊಳ್ಳುವ ಪ್ರೀತಿ. ಆತ್ಮೀಯತೆ ಇಲ್ಲಿ ಸಿಕ್ತು. ದಾವಣಗೆರೆ ದಕ್ಷಿಣ ಭಾಗದ ಗ್ರಾಮ ಹದಡಿ ಗ್ರಾಮದಲ್ಲಿ ಐತಿಹಾಸಿಕ ಬೃಹತ್ ಪಾದಯಾತ್ರೆ ಅಂತ್ಯಗೊಳಿಸಬೇಕು ಎಂದುಕೊಂಡಿದ್ದೆ. ಆದ್ರೆ, ಹಳ್ಳಿಗಳನ್ನು ಸುತ್ತಾಡುತ್ತಾ ಜನರ ಪ್ರೀತಿ ಗಳಿಸುತ್ತಾ ನೂರಾರು ಹಳ್ಳಿ ಸುತ್ತಿದ್ದೇನೆ. ನನಗೆ ಹೆಚ್ಚು ಪ್ರಿಯವಾದ ಊರು ಕೊಗ್ಗನೂರು. ಇಲ್ಲಿನ ಜನರ ಪ್ರೀತಿ, ವಿಶ್ವಾಸ ಮರೆಯಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು.
ಅಬ್ಬರವಿಲ್ಲ, ಜಾತ್ರೆಯಂತಾಗಲಿಲ್ಲ
ಪಾದಯಾತ್ರೆಯು ಅಬ್ಬರದ ಪ್ರಚಾರ ಇಲ್ಲದೇ, ಜಾತ್ರೆಯ ರೀತಿಯಲ್ಲಿ ಮಾಡದೇ, ಜನರಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಮಾಡಿದ ಕಾರ್ಯ. ಪರಿಚಯ ಮಾಡಿಕೊಳ್ಳುವ ಉದ್ದೇಶವೂ ಇದರಲ್ಲಿತ್ತು. ಇದು ಸಾಕಾರಗೊಂಡಿದೆ. ಇದು ಸಂತೋಷ ತಂದಿದೆ ಎಂದು ವಿನಯ್ ಕುಮಾರ್ ತಿಳಿಸಿದರು.
ಜನಪ್ರತಿನಿಧಿಗಳಾದ ಮೇಲೆ ಅವರ ಕೆಲಸ ಏನು ಎಂಬುದು ಎಲ್ಲರಿಗೂ ಗೊತ್ತಿರಬೇಕು. ಜನರ ಸೇವೆ ಮಾಡುವುದು, ಕಷ್ಟ ಕುಂದುಕೊರತೆ, ನೋವು ನಲಿವಿಗೆ ಧ್ವನಿಯಾಗಿ ಅಸೆಂಬ್ಲಿ, ಪಾರ್ಲಿಮೆಂಟ್ ನಲ್ಲಿ ನಿಮ್ಮ ಪರವಾಗಿ ಮಾತನಾಡಬೇಕು. ನಿಮಗಾಗಿ ಮಾತನಾಡಬೇಕಾದರೆ ಪರಿಚಯ ಇರಬೇಕು. ಹಿನ್ನೆಲೆ, ವ್ಯಕ್ತಿತ್ವ ಗೊತ್ತಿರಬೇಕು. ಫೇಸ್ ಬುಕ್, ವಾಟ್ಸಪ್, ಇನ್ ಸ್ಟಾಗ್ರಾಂ, ಟಿವಿ, ಪೇಪರ್ ನಲ್ಲಿ ನೋಡಿದರೆ ಸಾಲದು. ನಿಮ್ಮ ಬಳಿಗೆ ಬರಬೇಕು ಎಂದರು.
ರಾಜಕಾರಣಿಯ ಮೊದಲ ಕರ್ತವ್ಯ ಎಂಪಿ ಆಗುವುದಕ್ಕಿಂತ ಮುಂಚೆ ಹಳ್ಳಿಗಳ ಜನರನ್ನು ಭೇಟಿ ಮಾಡಿ ಪರಿಚಯ ಮಾಡಿಕೊಳ್ಳಬೇಕು. ಇದು ನಮ್ಮ ಮೊದಲ ಧರ್ಮ. ಪಾದಯಾತ್ರೆ ಮೂಲಕ ಪರಿಚಯ ಮಾಡಿಕೊಂಡು ಬರುತ್ತೇನೆ. ಕೊಗ್ಗನೂರು ಗ್ರಾಮದವರು ಇಷ್ಟಪಟ್ಟಿದ್ದೀರಾ. ಎಂಪಿ ಆಗಬೇಕು ಎಂದು ಅಪೇಕ್ಷೆ ಪಟ್ಟಿದ್ದೀರಾ. ಅತ್ಯಂತ ಸ್ವಾಭಿಮಾನಿಗಳು ನೀವು. ಒಬ್ಬರಿಗೂ ಒಂದು ರೂಪಾಯಿ ಕೊಟ್ಟಿಲ್ಲ. ನೀವು ಬಂದಿದ್ದರೆ ಕುತೂಹಲದಿಂದ ಬಂದಿರಬಹುದು. ಯುವಕರು ಫೇಸ್ ಬುಕ್, ಇನ್ ಸ್ಟ್ರಾಗ್ರಾಂನಲ್ಲಿ ನೋಡಿರಬಹುದು. ಬಿಸಿಲಲ್ಲಿ ಓಡಾಡಿ ಕಪ್ಪು ಆಗಿದ್ದೇನೆ. ಇನ್ನೊಂದು ವಾರ ಹೋದರೆ ಬೆಳ್ಳಗೆ ಆಗುತ್ತೇನೆ. ಆದ್ರೆ, ನಾನು ಪಾದಯಾತ್ರೆ ವೇಳೆ ಕಲಿತ ಅನುಭವ ಎಲ್ಲಿಯೂ ಸಿಗಲ್ಲ ಎಂದ್ರು.
20 ವರ್ಷ ಎಂಪಿ ಏನು ಮಾಡಿದ್ದಾರೆ…?
ಕಳೆದ 20 ವರ್ಷದಿಂದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಎಂಪಿ ಆಗಿದ್ದಾರೆ. ನಾಲ್ಕು ಅವಧಿ ಅಂದರೆ ಏಳೂವರೆ ಸಾವಿರ ದಿನಗಳು. 20 ವರ್ಷದಲ್ಲಿ ನಿಮ್ಮ ಊರಿನಲ್ಲಿ ಏನೇನಾಗಿದೆ? ಸಾವಿರಾರು ಜನರು ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ ಅರ್ಧಕ್ಕೆ ಬಿಟ್ಟಿರುತ್ತಾರೆ. ಅವರೆಲ್ಲಾ ಏನು ಮಾಡುತ್ತಿದ್ದಾರೆ? ಉದ್ಯೋಗ ಸಿಕ್ಕಿದೆಯಾ? ಜೀವನ ಹೇಗಿದೆ? ಎಂಬ ಅರಿವು ಅವರಿಗಿದೆಯಾ? ಅವ್ರಿಗೆ ನಿಮ್ಮೂರಿನವರ ಹೆಸರು ಗೊತ್ತಿಲ್ಲ ಎಂದ್ರೆ ಹೇಗೆ? ಎಷ್ಟು ಬಾರಿ ನಿಮ್ಮೂರಿಗೆ ಬಂದು ಸಮಸ್ಯೆ ಪರಿಹರಿಸಿದ್ದಾರೆ ಎಂದು ಸಿದ್ದೇಶ್ವರ ಅವರ ಹೆಸರು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದರು.
ಸಾಮಾನ್ಯ ಯುವಕ, ಸರಳ ಬದುಕು
ನಾನು ಸಾಮಾನ್ಯ ಯುವಕ. ಸರಳವಾಗಿ ಬದುಕುತ್ತೇನೆ. ಈತ ಏನು ಮಾಡುತ್ತಾನೆ ಎಂದು ಅಪಹಾಸ್ಯ ಮಾಡಿದವರುಂಟು. ನನ್ನ ಮುಂದೆ ಲೇವಡಿ ಮಾಡಿಲ್ಲ. ಹಿಂದೆ ಆಡಿಕೊಳ್ಳಬಹುದು. ಇದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ.
ನನ್ನ ಉದ್ದೇಶ ಸಾಕಾರಗೊಳಿಸಲು ಮುಂದುವರಿಯುತ್ತಿದ್ದೇನೆ. ಜಿಲ್ಲೆಯ ಜನರ, ಬಡವರು ಸೇರಿದಂತೆ ಎಲ್ಲಾ ವರ್ಗದವರು, ಜಾತಿಯವರು, ಧರ್ಮದವರ ಏಳಿಗೆಗೆ ಶ್ರಮಿಸುತ್ತೇನೆ. ಶಿಕ್ಷಣ, ಉದ್ಯೋಗ ಸೇರಿದಂತೆ ಮೂಲಭೂತ ಸೌಲಭ್ಯಗಳತ್ತ ಗಮನ ಹರಿಸುತ್ತೇನೆ. ನಾನು ಎಂಪಿ ಆದರೆ ಏನೆಲ್ಲಾ ಮಾಡುತ್ತೇನೆ ಎಂಬುದನ್ನು ಮುಂಬರುವ ದಿನಗಳಲ್ಲಿ ಹೇಳುತ್ತೇನೆ ಎಂದು ವಿನಯ್ ಕುಮಾರ್ ಹೇಳಿದರು.