SUDDIKSHANA KANNADA NEWS/ DAVANAGERE/ DATE:25-01-2024
ದಾವಣಗೆರೆ: ಭಾರತೀಯ ಯುವ ಕಾಂಗ್ರೆಸ್ ಔಟ್ರೀಚ್ ವಿಭಾಗದ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಯುವ ಮುಖಂಡ, ಬೆಂಗಳೂರು ಇನ್ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕ, ನಿರ್ದೇಶಕ ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜಿ. ಬಿ. ವಿನಯ್ ಕುಮಾರ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ವಿನಯ್ ಕುಮಾರ್ ಜಿ.ಬಿ. ಅವರನ್ನು ಭಾರತೀಯ ಯುವ ಕಾಂಗ್ರೆಸ್ ಔಟ್ರಿಚ್ ರಾಷ್ಟ್ರೀಯ ಅಧ್ಯಕ್ಷ ಚಾಂಡಿ ಊಮನ್ ಅವರು ಈ ನೇಮಕ ಮಾಡಿದ್ದಾರೆ.
ಇದರಿಂದ ಪಕ್ಷ ಸಂಘಟನೆ ಜವಾಬ್ದಾರಿ ಹೆಚ್ಚಾಗಿದ್ದು, ತಳಮಟ್ಟದಲ್ಲಿ ಕೆಲಸ ಮಾಡಲು ಮತ್ತಷ್ಟು ನನ್ನಲ್ಲಿ ಉತ್ಸುಹಕತೆ ಹೆಚ್ಚಾಗಿದೆ. ನಾನು ಕಾಂಗ್ರೆಸ್ ಸದಸ್ಯತ್ವ ಪಡೆದಿಲ್ಲ ಎಂಬ ಆರೋಪಕ್ಕೆ ಈ ಮೂಲಕ ಉತ್ತರ ಸಿಕ್ಕಿದೆ. ಇದು ಮಾಧ್ಯಮಗಳಲ್ಲಿ
ಬಂದ ಮೇಲೆ ಯಾರಿಗೆ ಉತ್ತರ ಸಿಗಬೇಕೋ ಅವರಿಗೆ ತಲುಪುತ್ತದೆ ಎಂದು ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ವಿನಯ್ ಕುಮಾರ್ ಅವರು ತಿಳಿಸಿದರು.
‘ಗ್ಯಾರಂಟಿ ಅಭಿಯಾನ’:
ದಾವಣಗೆರೆ ಲೋಕಸಭಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪಾದಯಾತ್ರೆ ಜೊತೆ ಜೊತೆಯಲ್ಲಿಯೇ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ, ನೇರವಾಗಿ ಅರ್ಹ ಫಲಾನುಭವಿಗಳನ್ನು ತಲುಪಬೇಕೆಂಬ ಸದುದ್ದೇಶದಿಂದ
ಆಂತರಿಕ ‘ ಗ್ಯಾರಂಟಿ ಅಭಿಯಾನ ‘ ವನ್ನು ಈಗಾಗಲೇ ಪ್ರಾರಂಭಿಸಿದ್ದೇವೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಹತ್ತು ಜನರ ತಂಡ ರಚಿಸಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯೋನ್ಮುಖವಾಗಿದೆ. ಇನ್ನೊಂದು ವಾರದಲ್ಲಿ ವರದಿ ಬರಲಿದ್ದು, ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ತಲುಪಿದೆಯೋ, ಇಲ್ಲವೋ ಎಂಬುದರ ಬಗ್ಗೆ ಮತ್ತು ಲಾಭ ಪಡೆಯದೇ ಇರುವ ಫಲಾನುಭವಿಗಳ ಅಂಕಿ ಅಂಶಗಳೊಂದಿಗೆ ಪಟ್ಟಿ ಮಾಡಿ ಯೋಜನೆಯನ್ನು ನೇರವಾಗಿ ತಲುಪಿಸುವ
ಪ್ರಯತ್ನ ಮಾಡಲಾಗುವುದು. ಇದಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ 10 ಜನರನ್ನು ಒಳಗೊಂಡ ತಂಡ ಈಗಾಗಲೇ ರಚಿಸಿದ್ದು, ಪ್ರತಿಯೊಬ್ಬ ಫಲಾನುಭವಿಗಳಿಗೂ ಯೋಜನೆ ಪ್ರಯೋಜನ ಸಿಗುವಂತೆ ಮಾಡುವುದು ಅಭಿಯಾನದ ಮುಖ್ಯ
ಉದ್ದೇಶವಾಗಿದೆ. ಇದರೊಟ್ಟಿಗೆ ಗ್ರಾಮಗಳ ಶಾಲಾ – ಕಾಲೇಜುಗಳು, ಅಂಗನವಾಡಿ ಕೇಂದ್ರಗಳು, ಗ್ರಂಥಾಲಯಗಳ ಸ್ಥಿತಿಗತಿಯ ಹಾಗೂ ಮೂಲಭೂತ ಸಮಸ್ಯೆಗಳ ಬಗ್ಗೆ ಅವಲೋಕನ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಯಶಸ್ವಿ ಪಾದಯಾತ್ರೆ:
ಈಗಾಗಲೇ ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಹಳ್ಳಿಗಳಲ್ಲಿ ಸುತ್ತಾಡಿ ಜನರ ನಾಡಿಮಿಡಿತ, ಗ್ರಾಮೀಣ ಸಮಸ್ಯೆಗಳನ್ನು ಅರಿಯುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತಾ ಬರುತ್ತಿದ್ದೇನೆ. ಜನರು ಸಹ ತುಂಬು ಮನಸ್ಸಿನಿಂದ, ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡರು. ಅಭಿಮಾನ, ಪ್ರೀತಿಯಿಂದ ಹರಸಿ, ರಾಜಕೀಯದ ಹೊಸ ಬದಲಾವಣೆ ಬಯಸುತ್ತಿದ್ದಾರೆ ಎಂಬುದು ಪಾದಯಾತ್ರೆಯಿಂದ ಗೊತ್ತಾಯಿತು. ನಾನು ಕೂಡ ಕ್ಷೇತ್ರದಲ್ಲಿ ವಿನಯ ಮಾರ್ಗ ಟ್ರಸ್ಟ್ ವತಿಯಿಂದ ಕಳೆದ ಡಿಸೆಂಬರ್ 18 ರಿಂದ ಜಗಳೂರು ತಾಲ್ಲೂಕಿನ ಚಿಕ್ಕ ಉಜ್ಜಿನಿ ಗಡಿ ಗ್ರಾಮದಿಂದ ‘ ಏನಯ ನಡಿಗೆ ಹಳ್ಳಿ ಕಡೆಗೆ ವಿನೂತನ ಬೃಹತ್ ಪಾದಯಾತ್ರೆ ಹಮ್ಮಿಕೊಂಡು ಇದೀಗ ಮಾಯಕೊಂಡ ವಿಧಾನಸಭಾ ಕ್ಷೇತ್ರಕ್ಕೆ ಪ್ರವೇಶ ಕೂಡ ಮಾಡಲಾಗಿದೆ . ದಾವಣಗೆರೆ ತಾಲ್ಲೂಕಿನ ಕೊಗ್ಗನೂರು ಗ್ರಾಮದಲ್ಲಿ ಜ. 29ಕ್ಕೆ ಮುಕ್ತಾಯವಾಗಲಿದೆ ಎಂದರು.
ಪಾದಯಾತ್ರೆಗೆ ಅಭೂತಪೂರ್ವ ಜನ ಬೆಂಬಲ, ಆಶೀರ್ವಾದ ದೊರೆತಿದೆ . ರಾಜಕಾರಣದಲ್ಲಿ ಹೊಸ ಹೊಸ ಅನುಭವಗಳಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ, ನಿರುದ್ಯೋಗ, ನೀರಾವರಿ ಹಾಗೂ ಮಹಿಳೆಯರ ಸಮಸ್ಯೆಗಳನ್ನು ಅರಿತಿದ್ದೇನೆ. ಪರಿಹಾರ ಮಾರ್ಗಗಳ ಚಿಂತನೆ ಕೂಡ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ವಿನಯ ಮಾರ್ಗ ಟ್ರಸ್ಟ್ ನ ರಾಘು ದೊಡ್ಮನಿ, ಯುವ ಮುಖಂಡ ಶರತ್ ಕುಮಾರ್, ರಂಗಸ್ವಾಮಿ ಮತ್ತಿತರರು ಹಾಜರಿದ್ದರು.