SUDDIKSHANA KANNADA NEWS/ DAVANAGERE/ DATE:18-06-2024
ದಾವಣಗೆರೆ (Davanagere): ನೊಣಗಳು ಸಾರ್ ನೊಣಗಳು. ಎಲ್ಲಿ ನೋಡಿದರೂ ನೊಣಗಳು. ಮನೆಯೊಳಗೂ ನೊಣಗಳು.. ಹೊರಗೂ ನೊಣಗಳು. ಪ್ಲೇಟ್, ಬಲ್ಬ್, ಕಂಬ, ಅನ್ನ, ಸಾರು ಸೇರಿದಂತೆ ಎಲ್ಲೆಲ್ಲೂ ನೊಣಗಳು. ಈ ನೊಣಗಳ ಕಾಟಕ್ಕೆ ಗ್ರಾಮಸ್ಥರು ಅಕ್ಷರಕ್ಷಃ ಬೆಚ್ಚಿ ಬಿದ್ದಿದ್ದಾರೆ.
ನಿತ್ಯವೂ ಈ ಗೋಳಿನ ಬದುಕು ಸಾಕು ಸಾಕಾಗಿ ಹೋಗಿದೆ. ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ ಆಗಿರುವ ಪ್ರಯೋಜನ ಮಾತ್ರ ಶೂನ್ಯ. ಜನರ ಸಂಕಷ್ಟ, ಗೋಳು ಕೇಳುವವರೇ ಇಲ್ಲದಂತಾಗಿಬಿಟ್ಟಿದ್ದು, ಸಾಕು ಸಾಕಾಗಿ
ಹೋಗಿ ಆ ದೇವರ ಮೇಲೆ ಭಾರ ಹಾಕುವಂತ ದುಃಸ್ಥಿತಿ ನಿರ್ಮಾಣವಾಗಿದೆ.
ಇಂಥ ನಿತ್ಯಯಾತನೆ ಅನುಭವಿಸುತ್ತಿರುವುದು ದಾವಣಗೆರೆಯ ಹೆಬ್ಬಾಳು ಗ್ರಾಮದವರು. ಜಿಲ್ಲಾಧಿಕಾರಿಗಳು, ಶಾಸಕರು, ಸಂಬಂಧಪಟ್ಟ ಜನಪ್ರತಿನಿಧಿಗಳು, ಸ್ಥಳೀಯ ಆಡಳಿತಕ್ಕೂ ಮನವಿ ಕೊಟ್ಟಿದ್ದರೂ ಸಮಸ್ಯೆ ಮಾತ್ರ ಇಂದಿಗೂ ಹಾಗೆಯೇ ಉಳಿದಿದೆ. ದೂರು ಕೊಟ್ಟಾಗ ಸ್ವಲ್ಪ ಮಟ್ಟಿಗೆ ಸ್ಪಂದಿಸುವ ಅಧಿಕಾರಿಗಳು ಆಮೇಲೆ ಇತ್ತ ತಲೆ ಹಾಕಿ ಕೂಡ ಮಲಗುವುದಿಲ್ಲ. ದಿನ ಸಾಯುವವರಿಗೆ ಅಳುವವರು ಯಾರು ಎಂಬಂಥ ಸ್ಥಿತಿ ಹೆಬ್ಬಾಳು ಗ್ರಾಮದ ಜನರದ್ದು.
ನೊಣ. ನೊಣ. ನೊಣ. ಕುರ್ಚಿ. ಟೇಬಲ್ಲು. ದೇವರ ಫೋಟೋ, ಕರೆಂಟ್ ವೈರ್ ಗಳು, ಜಗ್ಗುಗಳು, ಅಡುಗೆಯ ಸಾಮಗ್ರಿಗಳು, ಫ್ಯಾನು, ಮಿಕ್ಸಿ. ದೇವಸ್ಥಾನದ ಗಂಟೆ ಮೇಲೂ ಸೇರಿದಂತೆ ಎಲ್ಲೆಲ್ಲೂ ನೊಣಗಳದ್ದೇ ಹಾವಳಿ. ಚಿಕ್ಕಮಕ್ಕಳು, ದೊಡ್ಡವರಂತೂ ನಿತ್ಯವೂ ಗೋಳಾಟದಿಂದ ದಿನನೂಕುವಂತಾಗಿದೆ.
READ ALSO THIS STORY: BIG BREAKING: ಸೋಲಾರ್ ಅಳವಡಿಸಿದ್ರೆ ಬೆಂಕಿ ಹಚ್ಚಿಬಿಡ್ತೀವಿ: ಎಂ. ಪಿ. ರೇಣುಕಾಚಾರ್ಯ ರೋಷಾಗ್ನಿ ಸ್ಫೋಟ…!
ಇಷ್ಟೆಲ್ಲ ಸಮಸ್ಯೆಗೆ ಹೆಬ್ಬಾಳು ಗ್ರಾಮದಲ್ಲಿರುವ ಕೋಳಿ ಫಾರಂಗಳ ಹಾವಳಿಯೇ ಕಾರಣ. ಸರಿಯಾದ ಊಟವೂ ಆಗುತ್ತಿಲ್ಲ. ನಿದ್ದೆಯಂತೂ ಮರೀಚಿಕೆ ಎಂಬಂತಾಗಿದೆ. ಮನೆಯಲ್ಲಿ ಇತರ ಪ್ರಾಬ್ಲಮ್ ಎಂದು ಹೋಟೆಲ್ ಗಾದರೂ ಹೋಗಿ ತಿನ್ನೋಣ ಅಂದರೆ ಹೋಟೆಲ್ ನಲ್ಲಿಯೂ ಮನೆಗಿಂತಲೂ ಜಾಸ್ತಿ ನೊಣ.
ಯಾವಾಗಿನಿಂದ ಹೋರಾಟ…?
2015 ರಿಂದ ಹೋರಾಟ ಮಾಡಿದರು ಯಾವ ಜಿಲ್ಲಾಧಿಕಾರಿಗಳಿಂದಲೂ ಕೋಳಿ ಫಾರಂಗಳನ್ನು ಬೇರೆ ಕಡೆ ಸ್ಥಳಾಂತರಿಸಲು ಆಗಿಲ್ಲ. ದೂರು ಸ್ವೀಕರಿಸುತ್ತಾರೆ. ಒಂದೆರಡು ದಿನ ಬಂದ್ ಮಾಡಿದ ಹಾಗೆ ಕೋಳಿ ಫಾರಂನವರು ಮಾಡುತ್ತಾರೆ. ಆಮೇಲೆ
ಮತ್ತೆ ಕೋಳಿ ಫಾರಂಗಳ ಮಾಲೀಕರು ಫಾರಂಗಳನ್ನು ನಡೆಸಿಕೊಂಡು ಹೋಗುತ್ತಾರೆ. ಕೋಳಿ ಫಾರಂಗಳು ಇರುವ ಕಾರಣಕ್ಕೆ ನೊಣಗಳು ಹೆಚ್ಚಾಗಿ ಬರುತ್ತವೆ ಎಂದು ಗೊತ್ತಿದ್ದರೂ ಆಡಳಿತ ವರ್ಗ ಮಾತ್ರ ಗಪ್ ಚುಪ್ ಆಗಿದೆ.
ಬೇಕರಿ ಬಂದ್…!
ಇನ್ನು ನೊಣಗಳ ಹಾವಳಿ ಎಷ್ಟಿದೆಯೆಂದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೇಕರಿ ಹಾಕಿದ್ದ ಮಾಲೀಕನು ಬೇಕರಿ ಬಂದ್ ಮಾಡಿದ್ದಾನೆ. ಹಣ ಸಂಪಾದನೆ ಮಾಡುವುದಕ್ಕಿಂತ ಸ್ವೀಟ್ ಸೇರಿದಂತೆ ಎಲ್ಲೆಡೆ ನೊಣಗಳು ಕೂರುವುದರಿಂದ ಗ್ರಾಹಕರು ಬರುವುದಿಲ್ಲ. ಎಷ್ಟೇ ರುಚಿಕರವಾಗಿ ಕೊಟ್ಟರೂ ಖರೀದಿಗೆ ಯಾರೂ ಮುಂದೆ ಬರಲ್ಲ. ಹಾಗಾಗಿ, ಲಕ್ಷಾಂತರ ರೂಪಾಯಿ ನಷ್ಟ ಮಾಡಿಕೊಂಡು ಬೇಕರಿ ಬಂದ್ ಮಾಡಿ ಹೋಗಿದ್ದಾರೆ.
1 ಲಕ್ಷ ರೂ. ಬಹುಮಾನ:
ನೊಣಗಳ ಹಾವಳಿಯಿಂದ ಮುಕ್ತಿ ನೀಡಿದರೆ ಒಂದು ಲಕ್ಷ ರೂಪಾಯಿ ನೀಡುವುದಾಗಿ ಗ್ರಾಮಸ್ಥರು ಘೋಷಿಸಿದ್ದಾರೆ. ನಾವು ಸಮಸ್ಯೆಗೆ ಮುಕ್ತಿ ಕೇಳುತ್ತಿದ್ದೇವೆ. ಕಳೆದ 9 ವರ್ಷಗಳಿಂದಲೂ ಬದುಕು ಮೂರಾಬಟ್ಟೆಯಾಗಿದೆ. ನಮ್ಮ ಸಮಸ್ಯೆ ಯಾಕೆ ಅರ್ಥ
ಆಗುತ್ತಿಲ್ಲ ಎಂಬುದೇ ಗೊತ್ತಾಗುತ್ತಿಲ್ಲ ಎನ್ನುತ್ತಾರೆ. ನೊಣಗಳು ಬಾರದಂತೆ ತಡೆಯುವ ಅಧಿಕಾರಿಗಳಿಗೆ, ಕೋಳಿ ಫಾರಂ ಮುಚ್ಚಿಸುವವರಿಗೆ 1 ಲಕ್ಷ ರೂಪಾಯಿ ಹಣ ನೀಡುವುದಾಗಿ ಹೇಳಿದ್ದರೂ, ಇಲ್ಲಿಗಿಂತ ಹೆಚ್ಚಿನ ಹಣ ಪಡೆದ ಕಾರಣಕ್ಕೆ ಕೋಳಿ ಫಾರಂಗಳನ್ನು ಬಂದ್ ಮಾಡಿಸುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ ಎನ್ನುತ್ತಾರೆ ಹೆಬ್ಬಾಳದ ವಿಜಯ್.
ತೆರೆದ ಜೀಪಿನಲ್ಲಿ ಮೆರವಣಿಗೆ:
ಕೇವಲ ಒಂದು ಲಕ್ಷ ರೂಪಾಯಿ ಮಾತ್ರ ಘೋಷಿಸಿಲ್ಲ. ಸಮಸ್ಯೆಗೆ ಶಾಶ್ವತ ಮುಕ್ತಿ ಕೊಡಿಸುವ ಅಧಿಕಾರಿಗಳಿಗೆ ಹಣ ನೀಡುವ ಜೊತೆಗೆ ಹೆಬ್ಬಾಳ ಗ್ರಾಮದಲ್ಲಿ ತೆರೆದ ಜೀಪಿನಲ್ಲಿ ಗ್ರಾಮದ ತುಂಬೆಲ್ಲಾ ಮೆರವಣಿ ನಡೆಸಿ ಗೌರವಿಸುತ್ತೇವೆ, ಸನ್ಮಾನಿಸುತ್ತೇವೆ. ಹೋಗುವ ಮಾರ್ಗದುದ್ದಕ್ಕೂ ಪುಷ್ಪಾರ್ಚನೆ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಹೆಬ್ಬಾಳು ಗ್ರಾಮವನ್ನಾದರೂ ಸ್ಥಳಾಂತರಿಸಿ:
ಅಂತಿಮವಾಗಿ ಗ್ರಾಮಸ್ಥರು ಎಷ್ಟರ ಮಟ್ಟಿಗೆ ರೋಸಿ ಹೋಗಿದ್ದಾರೆ ಎಂದರೆ ನಮ್ಮ ಸಮಸ್ಯೆ ಪರಿಹರಿಸಲು ಸಾಧ್ಯವಾಗದಿದ್ದರೆ, ಹೆಬ್ಬಾಳ ಗ್ರಾಮದ ವಾಸಿಗಳನ್ನೆಲ್ಲರನ್ನೂ ಸ್ಥಳಾಂತರಿಸಿ. ನಾವು ಈಗ ಕಟ್ಟಿಕೊಂಡಿರುವ ಮನೆಗಳನ್ನೇ ಕಟ್ಟಿಸಿಕೊಡಲಿ. ಸೂಕ್ತ ಪರಿಹಾರ ಕೊಡಲಿ. ಅದಕ್ಕೂ ಸಿದ್ಧರಿದ್ದೇವೆ. ಕೋಳಿ ಫಾರಂಗಳು ಮುಖ್ಯ. ಜನರ ಬದುಕು ಮುಖ್ಯವಲ್ಲ ಎಂಬಂಥ ಸ್ಥಿತಿ ನಿರ್ಮಾಣವಾಗಿರುವುದು ವ್ಯವಸ್ಥೆಯ ದುರಂತ ಎನ್ನುತ್ತಾರೆ ವಿಜಯ್.
ರೋಗ ರುಜಿನ ಬಂದರೆ ಯಾರು ಹೊಣೆ…?
ಮಳೆಗಾಲ ಶುರುವಾಗಿದೆ. ರೋಗ ರುಜಿನಗಳು ಹೆಚ್ಚಾಗುತ್ತವೆ. ಒಂದು ವೇಳೆ ನೊಣಗಳ ರೀತಿ ಸೊಳ್ಳೆಗಳ ಕಾಟ ಶುರುವಾದರೆ ಮುಗಿದೇ ಹೋಯ್ತು. ಚಿಕನ್ ಗುನ್ಯಾ, ಹೆಚ್ 1ಎನ್1. ಡೆಂಗ್ಯೂ, ಮಲೇರಿಯಾ, ಕಾಲರಾದಂಥ ಸಾಂಕ್ರಾಮಿಕ ರೋಗಗಳು ಬಂದರೆ ಯಾರ ಬಳಿ ಹೋಗಬೇಕು. ಅನಾಹುತವಾಗುವ ಮುಂಚೆ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವವರು ಎಚ್ಚೆತ್ತುಕೊಂಡು ಸಮಸ್ಯೆಗೆ ಪರಿಹಾರ ದೊರಕಿಸಬೇಕಿದೆ ಎನ್ನುತ್ತಾರೆ ಗ್ರಾಮಸ್ಥರು.