SUDDIKSHANA KANNADA NEWS/ DAVANAGERE/ DATE:15-11-2023
ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಕರ್ನಾಟಕ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಹಾಗೂ ಶಿಕಾರಿಪುರ ಶಾಸಕ ಬಿ. ವೈ. ವಿಜಯೇಂದ್ರ ಅವರು ಕರ್ನಾಟಕ ಬಿಜೆಪಿ ಘಟಕದ ಅಧ್ಯಕ್ಷರಾಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲಿದ್ದು, ಅವರ ಮುಂದೆ ಸಾಲು ಸಾಲು ಸವಾಲುಗಳಿವೆ.
ನಳಿನ್ ಕುಮಾರ್ ಕಟೀಲ್ ಅವರ ಸ್ಥಾನಕ್ಕೆ ವಿಜಯೇಂದ್ರ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ನಳೀನ್ ಕುಮಾರ್ ಕಟೀಲ್ ಅಧಿಕಾರ ಹಸ್ತಾಂತರಿಸಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಶುಕ್ರವಾರ (ನವೆಂಬರ್ 10) ಕರ್ನಾಟಕ
ಘಟಕದ ಬಿಜೆಪಿ ಅಧ್ಯಕ್ಷರಾಗಿ ಬಿ. ವೈ. ವಿಜಯೇಂದ್ರ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದರು.
ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡುವ ಕುರಿತು ಬಿಜೆಪಿ ಶಾಸಕರ ಜತೆ ಚರ್ಚಿಸುವುದಾಗಿ ತಿಳಿಸಿದ ಬಿ.ವೈ.ವಿಜಯೇಂದ್ರ, ಅವರು ಈಗಾಗಲೇ ಮಾಜಿ ಸಿಎಂಗಳಾದ ಎಸ್. ಎಂ. ಕೃಷ್ಣ, ಬಸವರಾಜ್ ಬೊಮ್ಮಾಯಿ, ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಮಾತ್ರವಲ್ಲ, ಅವರ ಜೊತೆ ಸಹಕಾರ, ಬೆಂಬಲವನ್ನೂ ಕೋರುವ ಮೂಲಕ ಬಿಜೆಪಿ ಮತ್ತಷ್ಟು ಬಲಿಷ್ಠವಾಗಿಸುವ ಹೊಣೆಗಾರಿಕೆ ಪ್ರದರ್ಶಿಸಿದ್ದಾರೆ.
ವಿಜಯೇಂದ್ರ ನೇಮಕ ಆದ ಬಳಿಕ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಳ್ಳುವ ಲಕ್ಷಣ ಗೋಚರಿಸುತ್ತಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಆಕಾಂಕ್ಷಿಯಾಗಿದ್ದ ಸಿ. ಟಿ. ರವಿ ಮಾತುಗಳು ಒಂದೊಂದು ರೀತಿಯ ವ್ಯಾಖ್ಯಾನಕ್ಕೂ ಕಾರಣವಾಗಿದೆ. ಅವರು ಪ್ರತಿ ಬಾರಿ ಮಾತನಾಡಿದಾಗಲೂ ಅಸಮಾಧಾನದ ಹೊಗೆ ಕಾಣುತ್ತಲೇ ಇದೆ. ಇನ್ನು ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್, ವಿ. ಸೋಮಣ್ಣ ಸೇರಿದಂತೆ ಹಲವರು ಅಸಮಾಧಾನಗೊಂಡಿದ್ದಾರೆ.
ಬಹಿರಂಗವಾಗಿಯೇ ವಿ. ಸೋಮಣ್ಣ ಅವರು ವಿಧಾನಸಭೆ ಚುನಾವಣೆಗೆ ಮುನ್ನ ವಿಜಯೇಂದ್ರ ಯಾರು? ಯಡಿಯೂರಪ್ಪರ ಪುತ್ರ ಅಷ್ಟೇ ಎಂದಿದ್ದರು. ಆದ್ರೆ, ಈಗ ಅದೇ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವುದು ಇರಿಸು ಮುರಿಸು ತಂದಿದೆ. ಈ ಬೆಳವಣಿಗೆ ನಡುವೆ ಬಿಜೆಪಿಯ ಶಾಸಕರ ಜೊತೆ ಚರ್ಚಿಸುತ್ತೇನೆ. ಅಸಮಾಧಾನಿತರ ಜೊತೆಯೂ ಮಾತುಕತೆ ನಡೆಸುತ್ತೇನೆ ಎಂದು ವಿಜಯೇಂದ್ರ ಹೇಳಿದ್ದರು.
“ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಚುನಾವಣಾ ಪ್ರಚಾರಗಳಲ್ಲಿ ನಿರತರಾಗಿದ್ದಾರೆ. ನಾನು ನವೆಂಬರ್ 23 ರಂದು ದೆಹಲಿಗೆ ಹೋಗಿ ವಿರೋಧ ಪಕ್ಷದ ನಾಯಕರ ಆಯ್ಕೆ ಕುರಿತಂತೆ ಚರ್ಚೆ ನಡೆಸುವುದಾಗಿ ವಿಜಯೇಂದ್ರ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಾಧ್ಯಕ್ಷ ಹುದ್ದೆಗೆ ಮೂವರು ಹಿರಿಯ ನಾಯಕರು ಮುಂಚೂಣಿಯಲ್ಲಿದ್ದಾರೆ. ಅವರಲ್ಲಿ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಗುಂಪಿಗೆ ಸೇರಿದ 47 ವರ್ಷದ ಸುನೀಲ್ ಕುಮಾರ್ ಮತ್ತು ನಾಲ್ಕು ಬಾರಿ ಶಾಸಕರಾಗಿರುವ 55 ವರ್ಷದ ಸಿಎನ್ ಅಶ್ವತ್ಥನಾರಾಯಣ್, ನಾಲ್ಕು ಬಾರಿ ಒಕ್ಕಲಿಗ ಸಮುದಾಯದ ಶಾಸಕರು ಮತ್ತು 66- ಪದ್ಮನಾಭನಗರದಿಂದ ವರ್ಷ ವಯಸ್ಸಿನ ಆರ್ ಅಶೋಕ್, ಒಕ್ಕಲಿಗ ಸಮುದಾಯದಿಂದ ಏಳು ಬಾರಿ ಶಾಸಕರಾಗಿದ್ದಾರೆ. ಇವರು ಪ್ರಬಲ ಆಕಾಂಕ್ಷಿಯಾಗಿದ್ದರು.
ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವಿಜಯೇಂದ್ರ ಅವರ ಮುಂದೆ ಸಾಲು ಸಾಲು ಸವಾಲುಗಳಿವೆ. ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು, ಮುಂಬರುವ ಲೋಕಸಭೆ ಚುನಾವಣೆ. ಲೋಕಸಭೆ ಚುನಾವಣೆಯಂತೂ ಸವಾಲಿನದ್ದು. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ ವಿಜಯೇಂದ್ರ ಅವರ ಹಾದಿ ಅಷ್ಟು ಸುಲಭವಲ್ಲ. ಬಿ. ಎಸ್. ಯಡಿಯೂರಪ್ಪರು ಮತ್ತೆ ಆಕ್ಟೀವ್ ಆಗಿದ್ದು, ಇದು ಬಿಜೆಪಿಯಲ್ಲಿ ನವೋಲ್ಲಾಸ ತಂದಿದೆ. ಯಡಿಯೂರಪ್ಪರು ಪ್ರಚಾರಕ್ಕಿಳಿದರೆ ಬಿಜೆಪಿ ಲಾಭ ಆಗುವುದು ಖಚಿತ. ಹಾಗಾಗಿ, ರಾಜ್ಯ ಘಟಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಮುನ್ನ ವಿಜಯೇಂದ್ರ ಅವರು ತಂದೆಯ ಆಶೀರ್ವಾದ ಪಡೆದಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.
ಅಸಮಾಧಾನಿತ ಹಿರಿಯ ನಾಯಕರ ಮನವೊಲಿಸುವುದು ವಿಜಯೇಂದ್ರ ಅವರ ಮುಂದಿರುವ ದೊಡ್ಡ ಸವಾಲು. ಈ ಸವಾಲು ಸಮರ್ಥವಾಗಿ ನಿಭಾಯಿಸಿದರೆ ವಿಜಯೇಂದ್ರ ಅವರಿಗೆ ಮೊದಲ ವಿಜಯ ಖಚಿತ. ಆ ನಂತರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲೇಬೇಕಿದೆ. ವಿಧಾನಸಭೆ ಚುನಾವಣೆಯ ಹೀನಾಯ ಸೋಲು ಮರೆಯಬೇಕಾದರೆ ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲೇಬೇಕಿದೆ. ಉಪಚುನಾವಣೆಯಲ್ಲಿ ತಂತ್ರಗಾರಿಕೆ ಬಳಸಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದ ವಿಜಯೇಂದ್ರ ರಾಜ್ಯ ಘಟಕದ ಅಧ್ಯಕ್ಷರಾಗಿ ಯಾವೆಲ್ಲಾ ತಂತ್ರಗಾರಿಕೆ ರೂಪಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.