SUDDIKSHANA KANNADA NEWS/ DAVANAGERE/ DATE:15-12-2024
ದಾವಣಗೆರೆ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಅವರನ್ನು ಮುಂಬರುವ ವಿಧಾನಸಭೆ ಚುನಾವಣೆಯವರೆಗೆ ಮುಂದುವರಿಸಬೇಕು ಎಂಬುದೂ ಸೇರಿದಂತೆ ಮೂರು ಮಹತ್ವದ ನಿರ್ಣಯವನ್ನು ಬಿಜೆಪಿ ನಿಷ್ಠರ ತಂಡ ತೀರ್ಮಾನಿಸಿದೆ.
ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಈ ವಿಷಯ ತಿಳಿಸಿದರು.
ಮುಂದಿನ ಚುನಾವಣೆವರೆಗೆ ವಿಜಯೇಂದ್ರ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮುಂದುವರಿಸಬೇಕು. ಯಡಿಯೂರಪ್ಪನವರ ಜನುಮದಿನ ಆಚರಿಸಬೇಕು. ಸಭೆಯಲ್ಲಿ ಪಾಲ್ಗೊಂಡಿರುವ ಎಲ್ಲರಿಗೂ ಸೂಕ್ತ ಸ್ಥಾನಮಾನ ನೀಡಬೇಕೆಂಬ ಮೂರು ಮಹತ್ವದ ನಿರ್ಣಯ ಅಂಗೀಕರಿಸಿದ್ದೇವೆ. ದೆಹಲಿಗೆ ತೆರಳಿ ರಾಷ್ಟ್ರೀಯ ನಾಯಕರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನ ಮಾಡುತ್ತೇವೆ. ನಾವೆಲ್ಲರೂ ಪಕ್ಷದ ಪರವಾಗಿ ಕೆಲಸ ಮಾಡುತ್ತಿರುವ ನಿಷ್ಠಾವಂತ, ಪ್ರಾಮಾಣಿಕ, ಪಕ್ಷ ಕಟ್ಚಿರುವ ನಾಯಕರು. 60 ನಾಯಕರು ಸೇರಿದ್ದು, ಶೇಕಡಾ 90ರಷ್ಟು ಜನರು ಮುಂಬರುವ ಚುನಾವಣೆಯಲ್ಲಿ ಗೆದ್ದು ಬರುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.
ಸಭೆಯಲ್ಲಿ ಪಾಲ್ಗೊಂಡಿರುವ ಐದಾರು ಜನರು ಸ್ಪರ್ಧೆ ಮಾಡಲ್ಲ. ಶಕ್ತಿ ಇರುವ ನಾಯಕರೇ ಸೇರಿದ್ದೇವೆ. ಹಿಂದೆ ಸ್ಪರ್ಧೆ ಮಾಡಿದ್ದರು, ಮುಂದೆಯೂ ಸ್ಪರ್ಧೆ ಮಾಡುತ್ತಾರೆ. ಕ್ಷೇತ್ರಗಳಲ್ಲಿ ಇವರಿಗೆ ಪರ್ಯಾಯವೇ ಇಲ್ಲದ ನಾಯಕರು ಸಭೆಯಲ್ಲಿ ಸೇರಿದ್ದಾರೆ. ಕಪ್ಪು ಚುಕ್ಕೆ ಹೊತ್ತುಕೊಂಡು ಕ್ಷೇತ್ರವನ್ನು ಕೆಡಿಸಿಕೊಂಡವರು ಯಾರೂ ಇಲ್ಲ. ಅವರವರ ಕ್ಷೇತ್ರದಲ್ಲಿ ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ವಿಚಾರವನ್ನು ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರ ಗಮನಕ್ಕೆ ತಂದು ಇಷ್ಟು ಜನ ಇದ್ದೇವೆ. ಪಕ್ಷದ ನಿಷ್ಠಾವಂತರಾಗಿ ಕೆಲಸ
ಮಾಡಿದ್ದು, ಎಲ್ಲಾ ರೀತಿಯ ಅವಕಾಶ ನೀಡಬೇಕು ಎಂದು ಮನವಿ ಮಾಡುತ್ತೇವೆ ಎಂದರು.
ಇಷ್ಟು ಜನರು ಒಗ್ಗಟ್ಟಾಗಿ ಚುನಾವಣೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ ಬಿಜೆಪಿ 140ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ. ಇಲ್ಲದಿದ್ದರೆ ನೂರು ಸ್ಥಾನ ಬರುವುದಿಲ್ಲ. ಎಲ್ಲರೂ ಶಕ್ತಿವಂತರಿದ್ದೇವೆಂದು ರವೀಂದ್ರನಾಥ್ ಅವರು ಹೇಳಿರುವುದು ಸತ್ಯ. ನಾವು ಇಲ್ಲಿ ಸೇರಿರುವ ಶೇಕಡಾ 95ರಷ್ಟು ಜನರಿಗೆ ಅವಕಾಶ ಸಿಗಬೇಕು. ಶಾಸಕರಾಗಿ ಆರಿಸಿ ಬರಬೇಕು. ಸೂಕ್ತ ಗೌರವ, ಸ್ಥಾನಮಾನ ನೀಡಬೇಕೆಂಬುದು ನಮ್ಮ ಒತ್ತಾಯ. ರಾಜ್ಯಾಧ್ಯಕ್ಷರು, ರಾಷ್ಟ್ರೀಯ ನಾಯಕರಿಗೆ ಯಡಿಯೂರಪ್ಪರ ಗಮನಕ್ಕೆ ಈ ವಿಚಾರ ತರುತ್ತೇವೆ. ರಾಜ್ಯದಲ್ಲಿರುವ ಪ್ರಮುಖ ನಾಯಕರನ್ನು ಭೇಟಿ ಆಗುತ್ತೇವೆ ಎಂದು ಮಾಹಿತಿ ನೀಡಿದರು.
ಯಾವ ವಿಚಾರಕ್ಕೆ ಸೇರಿದ್ದೇವೆ? ಕ್ಷೇತ್ರದಲ್ಲಿನ ಪರಿಸ್ಥಿತಿಗಳೇನು? ಎಂಬುದೂ ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆ ರಾಜ್ಯ, ರಾಷ್ಟ್ರ, ಜಿಲ್ಲಾಮಟ್ಟದ ಪ್ರಮುಖರ ಗಮನಕ್ಕೆ ತರುತ್ತೇವೆ. ಮಾಜಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಭೆಯಲ್ಲಿ ಚರ್ಚಿಸಿರುವ ವಿಚಾರಗಳು, ಯಡಿಯೂರಪ್ಪರ ಜನುಮದಿನದ ಕುರಿತಂತೆ ಮಾಹಿತಿ ನೀಡಿ, ಒಟ್ಟಾಗಿ ಮುನ್ನಡೆಯುತ್ತೇವೆ. ನಮ್ಮಲ್ಲಿ ಯಾರೂ ಭಿನ್ನಮತದ ಮಾತು ಆಡಿಲ್ಲ. ಒಬ್ಬರು ಹೇಳಿದರೆ ಸರಿ ಎಂಬ ಮನೋಭಾವದಿಂದ ಅಭಿಪ್ರಾಯ ವ್ಯಕ್ತಪಡಿಸಿ ಸರಿಯಾದ ಸಮಯದಲ್ಲಿ ನಾವು ಸೇರುತ್ತಿದ್ದೇವೆ. ದಾವಣಗೆರೆಯಲ್ಲಿ ರೇಣುಕಾಚಾರ್ಯ ಸಭೆ ಮಾಡುತ್ತೇವೆ ಎಂದು ಹೇಳಿದ್ದರು. ರಾಜಕೀಯ ಸಭೆ ಮಾಡಲು ಅವಕಾಶ ಇಲ್ಲದೇ ಇರುವುದರಿಂದ ಯಡಿಯೂರಪ್ಪರ ಅಭಿಮಾನಿಗಳ ಬಳಗ ಸಮಾವೇಶ ಮಾಡುತ್ತಿದ್ದೇವೆ. ಹಾಗಾಗಿ ಇವತ್ತು ಒಳ್ಳೆಯ ತೀರ್ಮಾನ ತೆಗೆದುಕೊಂಡಿದ್ದೇವೆ. ಈ ತಿಂಗಳ ಅಂತ್ಯದೊಳಗೆ ಮತ್ತೆ ಸಭೆ ನಡೆಸುತ್ತೇವೆ. ಜನವರಿ 15ರಂದು ಪೂರ್ವಭಾವಿ ಸಭೆಯನ್ನು ಇಲ್ಲಿಯೇ ನಡೆಸುತ್ತೇವೆ. ಪೂರ್ವ ಸಿದ್ಧತಾ ಅಂದಿನಿಂದಲೇ ಶುರುವಾಗಲಿದೆ ಎಂದರು.
ಸಭೆಯಲ್ಲಿ ಮಾಜಿ ಸಚಿವರಾದ ಎಂ. ಪಿ. ರೇಣುಕಾಚಾರ್ಯ, ಎಸ್. ಎ. ರವೀಂದ್ರನಾಥ್. ಹರತಾಳು ಹಾಲಪ್ಪ, ಮಾಜಿ ಶಾಸಕರಾದ ಎಸ್ ವಿ ರಾಮಚಂದ್ರಪ್ಪ , ಮಾಡಾಳ್ ವಿರೂಪಾಕ್ಷಪ್ಪ, ಬ್ಯಾಡಗಿ ವಿರುಪಾಕ್ಷಪ್ಪ, ರಾಣೆಬೆನ್ನೂರು ಅರುಣ್ ಕುಮಾರ್, ಮಾಜಿ ಸಚಿವ ಕೊಳ್ಳೆಗಾಲ ಮಹೇಶ್, ಮಾನ್ವಿ ಗಂಗಾಧರ ನಾಯ್ಕ್, ಶಿವಮೊಗ್ಗ ಕುಮಾರಸ್ವಾಮಿ, ಸೀಮಾ ಮಸೂತಿ, ಬಸವರಾಜ್ ನಾಯ್ಕ್, ಮೊಳಕಾಲ್ಮುರು ತಿಪ್ಪೇಸ್ವಾಮಿ, ಕಡೂರು ಬೆಳ್ಳಿ ಪ್ರಕಾಶ್, ರಾಜಶೇಖರ್ ಶೀಲವಂತ್, ಮಸ್ಕಿ ಪ್ರತಾಪ್ ಗೌಡ್ರು, ಮೈಸೂರು ನಾಗೇಂದ್ರ, ಗುಂಡ್ಲುಪೇಟೆ ನಿರಂಜನ್, ಜಗದೀಶ್ ಮೆಟ್ ಗುಡ್, ಸುರೇಶ್ ಮಾರಿಹಾಳ್. ವಿಶ್ವನಾಥ್ ಪಟೇಲ್,
ಮಾಡಾಳ್ ಮಲ್ಲಿಕಾರ್ಜುನ್, ಅಜಯ್ ಕುಮಾರ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.