ಬೆಂಗಳೂರು: ಕರ್ನಾಟಕ ವಿಧಾನಸಭೆಯ ಸದಸ್ಯರಿಂದ ವಿಧಾನಪರಿಷತ್ತಿಗೆ ನಡೆಯುವ ದೈವಾರ್ಷಿಕ ಚುನಾವಣೆ-2024: 11 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ ಅಂತ ಚುನಾವಣಾಧಿಕಾರಿ ಎಂ.ಕೆ ವಿಶಾಲಾಕ್ಷಿ ಮಾಹಿತಿ ನೀಡಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಅವರು, ಕರ್ನಾಟಕ ವಿಧಾನಸಭೆಯ ಸದಸ್ಯರಿಂದ ವಿಧಾನಪರಿಷತ್ತಿಗೆ ಹನ್ನೊಂದು ಸದಸ್ಯರನ್ನು ಆಯ್ಕೆ ಮಾಡಲು ದೈವಾರ್ಷಿಕ ಚುನಾವಣೆಯನ್ನು ದಿನಾಂಕ 13ನೇ ಜೂನ್, 2024 ರಂದು ನಿಗದಿಪಡಿಸಲಾಗಿತ್ತು, ಈ ಚುನಾವಣೆಗೆ ದಿನಾಂಕ 27.05.2024 ರಿಂದ 03.06.2024ರವರೆಗೆ ನಾಮಪತ್ರಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು.
ಸದರಿ ಅವಧಿಯಲ್ಲಿ ಒಟ್ಟು 12 ಜನ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದರು ಎಂದು ತಿಳಿಸಿದ್ದಾರೆ.
ಸದರಿ ನಾಮಪತ್ರಗಳನ್ನು ದಿನಾಂಕ :04.06.2024 ರಂದು ಪರಿಶೀಲನೆಗೆ ತೆಗೆದುಕೊಳ್ಳಲಾಗಿತ್ತು. ಪರಿಶೀಲನೆಯ ಸಂದರ್ಭದಲ್ಲಿ ಶ್ರೀ ಆಸಿಫ್ ಪಾಷಾ ಆರ್.ಎಮ್. ಎಂಬುವವರ ನಾಮಪತ್ರವು ಸೂಚಕರಿಲ್ಲದ ಕಾರಣ ತಿರಸ್ಕೃತಗೊಂಡಿದ್ದು, ಉಳಿದ 11 ಜನ ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕಾರಗೊಂಡಿದ್ದವು. ಇಂದು ದಿನಾಂಕ:06.06.2024 ರಂದು ಮಧ್ಯಾಹ್ನ 3.00 ಗಂಟೆಯವರೆಗೆ ನಾಮಪತ್ರ ಹಿಂತೆಗೆದುಕೊಳ್ಳಲು ಅಂತಿಮ ದಿನವಾಗಿದ್ದು. ಯಾರು ನಾಮಪತ್ರವನ್ನು ಹಿಂಪಡೆದಿರುವುದಿಲ್ಲ. ಭರ್ತಿ ಮಾಡಬೇಕಾದ 11 ಸ್ಥಾನಗಳಿಗೆ 11 ಜನ ಅಭ್ಯರ್ಥಿಗಳು ಮಾತ್ರ ಅಂತಿಮವಾಗಿ ಕಣದಲ್ಲಿರುತ್ತಾರೆ ಅಂತ ಹೇಳಿದ್ದಾರೆ.
ಈ ಹಿನ್ನಲೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಐವಾನ್ ಡಿ’ ಸೋಜಾ, ಕೆ. ಗೋವಿಂದರಾಜ್, ಜಗದೇವ ಗುತ್ತೇದಾರ್, ಬಲ್ಕೀಸ್ ಬಾನು, ಬೋಸರಾಜು, ಡಾ. ಯತೀಂದ್ರ ಹಾಗೂ ಎ. ವಸಂತ ಕುಮಾರ ಸೇರಿ 7 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಭಾರತೀಯ ಜನತಾ ಪಾರ್ಟಿಯ ಮೂಳೆ ಮಾರುತಿರಾವ್, ಸಿ.ಟಿ. ರವಿ, ರವಿಕುಮಾರ ಎನ್ ಸೇರಿದಂತೆ ಮೂವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜನತಾದಳ(ಜಾ) ಪಕ್ಷದ ಟಿ.ಎನ್. ಜವರಾಯಿ ಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆಂದು ಈ ಮೂಲಕ ಘೋಷಿಸುತ್ತೇನೆ ಎಂದಿದ್ದಾರೆ.