SUDDIKSHANA KANNADA NEWS/ DAVANAGERE/ DATE:19-03-2024
ದಾವಣಗೆರೆ: ಬಿಜೆಪಿ – ಜೆಡಿಎಸ್ ಮೈತ್ರಿಕೂಟದ ಎನ್ ಡಿಎನಲ್ಲಿ ಮೈತ್ರಿ ಧರ್ಮ ಪಾಲನೆ ಆಗಲೇಬೇಕು. ಜೆಡಿಎಸ್ ವರಿಷ್ಠರ ಸೂಚನೆ ಇದುವರೆಗೆ ಬಂದಿಲ್ಲ. ಅಪ್ಪಣೆ ಬಂದ ಮೇಲೆ ನಾವು ಕೆಲಸ ಮಾಡುತ್ತೇವೆ. ಅಲ್ಲಿಯವರೆಗೆ ಜಿಲ್ಲಾಧ್ಯಕ್ಷರು ಹಾಗೂ ನಾನು ಸೂಚನೆ ನೀಡುವವರೆಗೂ ಕಾರ್ಯಕರ್ತರು ತಟಸ್ಥರಾಗಬೇಕು. ಈ ಬಾರಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸುಲಭವೇನಿಲ್ಲ. ಇದಕ್ಕೆ ನಾನಾ ಕಾರಣಗಳಿವೆ. ಒಳಬೇಗುದಿ ಸರಿಪಡಿಸಿಕೊಳ್ಳದಿದ್ದರೆ ಗೆಲುವು ಕಷ್ಟಸಾಧ್ಯ ಎಂದು ಜೆಡಿಎಸ್ ಮುಖಂಡ ಹಾಗೂ ಮಾಜಿ ಶಾಸಕ ಹೆಚ್. ಎಸ್. ಶಿವಶಂಕರ್ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಐದು ತಾಲೂಕುಗಳಲ್ಲಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಬಿಜೆಪಿ ಟಿಕೆಟ್ ನೀಡಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ಎಂ. ಪಿ. ರೇಣುಕಾಚಾರ್ಯ, ಮಾಡಾಳ್ ಮಲ್ಲಿಕಾರ್ಜುನ್, ಬಸವರಾಜ್ ನಾಯ್ಕ್, ಹರಪನಹಳ್ಳಿಯ ಕರುಣಾಕರ ರೆಡ್ಡಿ ಸೇರಿದಂತೆ ಹಲವು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಹಿರಂಗವಾಗಿಯೇ ಅಸಮಾಧಾನ, ಭಿನ್ನಮತ ಹೊರಹಾಕಿದ್ದಾರೆ. ಮೈತ್ರಿ ಧರ್ಮ ಪಾಲನೆ ಆಗಲೇಬೇಕು, ಜೊತೆಗೆ ಭಿನ್ನಾಭಿಪ್ರಾಯ ಸರಿಪಡಿಸಿಕೊಳ್ಳಬೇಕು ಎಂದರು.
ಕಳೆದ ನಾಲ್ಕು ಬಾರಿ ಡಾ. ಜಿ. ಎಂ. ಸಿದ್ದೇಶ್ವರ ಅವರು ಸುಲಭವಾಗಿ ಜಯ ಗಳಿಸಿರಲಿಲ್ಲ. ಪ್ರಯಾಸದ ಗೆಲುವು ಕಂಡಿದ್ದಾರೆ. 2004ರಲ್ಲಿ ಎಸ್. ಎಸ್. ಮಲ್ಲಿಕಾರ್ಜುನ್ ರ ವಿರುದ್ಧ ಮಲ್ಲಿಕಾರ್ಜುನ್ ವಿರುದ್ಧ 32672 ಮತಗಳ ಅಂತರದಲ್ಲಿ ಜಯಭೇರಿ ಬಾರಿಸಿದ್ದರು. ಆಗ ಸಿದ್ದೇಶ್ವರ ಅವರಿಗೆ ಮಲ್ಲಿಕಾರ್ಜುನಪ್ಪ ಅವರ ನಿಧನದ ಅನುಕಂಪ ವರವಾಗಿತ್ತು. 2009ರಲ್ಲಿ ಜೆಡಿಎಸ್ ವಚನಭ್ರಷ್ಟ ಮಾಡಿತ್ತು ಎಂದು ಆರೋಪಿಸಿದ್ದ ಬಿಜೆಪಿಗೆ ಯಡಿಯೂರಪ್ಪರ ಜನಪ್ರಿಯತೆ ಬಲ ಇತ್ತು. ಆದರೂ 2024 ಮತಗಳ ಅಂತರದಲ್ಲಿ ಬಿಜೆಪಿ ಗೆದ್ದಿತ್ತು. 2014ರಲ್ಲಿ ಮಹಿಮಾ ಪಟೇಲ್ ಬಟ್ಟೆ ಹಾವು ಅಂದ್ರು. ಆಗ ಮಹಿಮಾ ತೆಗೆದುಕೊಂಡಿದ್ದು 46,911 ಮತಗಳು. ಆಗ ಬಿಜೆಪಿ ಗೆದ್ದಿದ್ದು 17,67 ಮತಗಳಿಂದ ಅಷ್ಟೇ. 2019ರಲ್ಲಿ ಪುಲ್ವಾಮಾ ದಾಳಿ, ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯ ನಡುವೆ 1 ಲಕ್ಷದ 69 ಸಾವಿರ ಮತಗಳ ಅಂತರದಲ್ಲಿ ಸಿದ್ದೇಶ್ವರ ಜಯಭೇರಿ ಬಾರಿಸಿದ್ದರು. ಕೊನೆ ಗಳಿಗೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದಿದ್ದ ಹೆಚ್. ಬಿ. ಮಂಜಪ್ಪ ಬಲಿಪಶುವಾಗಿದ್ದರು ಎಂದು ವಿವರಿಸಿದರು.
ನಮಗೂ ಶಕ್ತಿ ಇದೆ. ಬಹಳ ಅಂತರದಲ್ಲಿ ಬಿಜೆಪಿ ಗೆದ್ದಿಲ್ಲ. ಕ್ಷೇತ್ರದಲ್ಲಿ ವಿಶ್ವಾಸ ಕಳೆದುಕೊಂಡಿದೆ. ಅಭ್ಯರ್ಥಿ ಬದಲಾವಣೆಗೆ ಆಂದೋಲನ ಪ್ರವೃತ್ತಿ ಶುರುವಾಗಿದೆ. ಮೈತ್ರಿ ಧರ್ಮ ಪಾಲನೆ ಮಾಡದಿದ್ದಲ್ಲಿ ನಾವು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗುತ್ತವೆ. ಜೆಡಿಎಸ್ ವರಿಷ್ಠರ ಸೂಚನೆಗೆ ಕಾಯುತ್ತಿದ್ದೇವೆ. ಇದು ಸರಿ ಆಗದಿದ್ದರೆ, ಭಿನ್ನಮತ ಸರಿಪಡಿಸಿಕೊಳ್ಳದಿದ್ದರೆ ನಾವು ಚುನಾವಣೆಗೆ ನಿಲ್ಲುತ್ತೇವೆ. ನಮಗೇನೂ ಚುನಾವಣೆ ಮಾಡುವುದು ಹೊಸದಲ್ಲ. ಜನರು ಹೊಸ ಮುಖ ಬಯಸುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ಗೆಲುವು ಸಿಕ್ಕರೂ ಸಿಗಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ವರಿಷ್ಠರಿಗೆ ಅವಮಾನ:
ಆಂಧ್ರಪ್ರದೇಶಕ್ಕೆ ನರೇಂದ್ರ ಮೋದಿ ಅವರು ಬಂದಾಗ ಮಾಜಿ ಸಿಎಂ ಚಂದ್ರಬಾಬು ನಾಯ್ಡು, ಖ್ಯಾತ ನಟ ಪವನ್ ಕಲ್ಯಾಣ್ ಅವರ ಜೊತೆ ವೇದಿಕೆ ಹಂಚಿಕೊಂಡರು. ಆದ್ರೆ, ಕಲ್ಬುರ್ಗಿ ಹಾಗೂ ಶಿವಮೊಗ್ಗಕ್ಕೆ ಆಗಮಿಸಿದಾಗ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಿಲ್ಲ. ಹೇಗೆ ಮೈತ್ರಿ ಧರ್ಮ ಪಾಲನೆ ಮಾಡಿದಂತಾಗುತ್ತದೆ. ಇದು ಹೆಚ್. ಡಿ. ದೇವೇಗೌಡ ಕುಮಾರಸ್ವಾಮಿ ಅವರು ನೆನಪಾಗಲಿಲ್ವಾ? ಇದು ಪಕ್ಷಕ್ಕೆ ಮಾಡಿದ ಅವಮಾನ. ಈ ಬಾರಿಯೂ ಪೈಪೋಟಿ ಹೆಚ್ವಿದೆ. ಗೆಲುವು ಸುಲಭವಲ್ಲ ಎಂದು ಪ್ರತಿಪಾದಿಸಿದರು.
ಕಾಂಗ್ರೆಸ್ – ಬಿಜೆಪಿ ಒಳಒಪ್ಪಂದ:
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಒಳಒಪ್ಪಂದದಿಂದಲೇ ಸೋಲುಂಟಾಯಿತು. ಮಾವ, ಅಳಿಯ ಎಂದುಕೊಂಡು ಚುನಾವಣೆ ಎದರಿಸುತ್ತಾರೆ. ಶಿವಮೊಗ್ಗದಲ್ಲಿ ಬಿ. ವೈ. ರಾಘವೇಂದ್ರ ಅವರು ಪ್ರತಿನಿಧಿಸುವ ಬಿಜೆಪಿಗೆ ಮತ ಹಾಕಿ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ಇದನ್ನು ನೋಡಿದರೆ ಒಳಒಪ್ಪಂದ ಆಗಿದೆ ಎಂಬುದಾಗಿ ಜನರೇ ಮಾತನಾಡುತ್ತಿದ್ದಾರೆ. ಬಿಜೆಪಿ ಮುಖಂಡರು ಸಿಡಿದೆದ್ದಿರುವುದನ್ನು ಗಮನಿಸಿದರೆ ಕಾಂಗ್ರೆಸ್ ಜೊತೆ ಒಳಒಪ್ಪಂದ ಮಾಡಿಕೊಂಡಿರಬಹುದು ಎಂಬ ಮಾತೂ ಜನರಿಂದಲೇ ಕೇಳಿ ಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಾಸನದಲ್ಲಿ ಜೆಡಿಎಸ್ ನ ಪ್ರಜ್ವಲ್ ರೇವಣ್ಣ ಬದಲಾಗಬೇಕು ಎಂದು ಪ್ರೀತಂಗೌಡ ಹೇಳಿದ್ದಾರೆ. ಹಾಗಿದ್ದರೆ, ದಾವಣಗೆರೆಯಲ್ಲಿಯೂ ಬಿಜೆಪಿ ಅಭ್ಯರ್ಥಿ ಬದಲಾಯಿಸಿ ಎಂದು ನಾವೂ ಕೇಳಬೇಕಾಗುತ್ತದೆ. ನಾವು ತಾಳ್ಮೆಯಿಂದ ಕಾಯುತ್ತಿದ್ದೇವೆ. ಎಲ್ಲದಕ್ಕೂ ಸಮಯವೇ ಉತ್ತರ ಕೊಡುತ್ತದೆ ಎಂದು ಹೆಚ್. ಎಸ್. ಶಿವಶಂಕರ್ ಹೇಳಿದರು.
ಜಿ. ಎಂ. ಸಿದ್ದೇಶ್ವರ ಕರೆ ಮಾಡಿದ್ದರು:
ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರು ನನಗೆ ಕರೆ ಮಾಡಿದ್ದರು. ಆಗ ನಾನೇ ನಿಮ್ಮ ಗೊಂದಲ ಸರಿಪಡಿಸಿಕೊಳ್ಳಿ ಎಂದು ಸಲಹೆ ನೀಡಿದೆ. ರಾಜ್ಯದ ವರಿಷ್ಠರು ನಮಗೆ ಇನ್ನೂ ಆದೇಶ ನೀಡಿಲ್ಲ. ಇದಕ್ಕೆ ಕಾಯುತ್ತಿದ್ದೇವೆ. ಅಲ್ಲಿಂದ ಬಂದ ಬಳಿಕ ಕಾರ್ಯೋನ್ಮುಖರಾಗುತ್ತೇವೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದ , ರಾಮಚಂದ್ರಮೂರ್ತಿ, ಟಿ. ಅಸ್ಗರ್, ಬಾತಿ ಶಂಕರ್ , ಗಾದ್ರಿ ರಾಜು, ಎನ್.ಗಂಗಾಧರಪ್ಪ, ಕುಬೇರಪ್ಪ ಹೆಚ್ .ಕೆ ಬಸವರಾಜ್, ಉಸ್ಮಾನ್ ಶರೀಫ್, ಜೆ. ಅಮಾನುಲ್ಲಾ ಖಾನ್ ಮತ್ತಿತರರು ಹಾಜರಿದ್ದರು.