SUDDIKSHANA KANNADA NEWS/ DAVANAGERE/ DATE:15-03-2025
ದಾವಣಗೆರೆ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರ ಪರ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಿದ್ಧಗೊಳಿಸಲಾಗುತ್ತಿದೆ. ಮುಂಬರುವ ಮೇ ತಿಂಗಳಿನಲ್ಲಿ ವೀರಶೈವ ಲಿಂಗಾಯತ ಮಹಾಸಂಗಮ ಐತಿಹಾಸಿಕ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ಅವರ ನೇತೃತ್ವದಲ್ಲಿ ದಾವಣಗೆರೆಯಲ್ಲಿ ಈ ಸಮಾವೇಶ ನಡೆಯಲಿದೆ.
ನಗರದ ಪ್ರವಾಸಿ ಮಂದಿರದಲ್ಲಿ ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ಅಧ್ಯಕ್ಷತೆಯಲ್ಲಿ ಬಿಜೆಪಿ ಮುಖಂಡರು, ಮಾಜಿ ಸಚಿವರು, ಯುವ ಮುಖಂಡರು ಸೇರಿದಂತೆ ನೂರಾರು ಜನರು ಸೇರಿ ಈ ಬಗ್ಗೆ ಸಮಾಲೋಚನೆ ನಡೆಸಿದರು.
ವೀರಶೈವ ಲಿಂಗಾಯತ ಮಹಾಸಂಗಮ ಐತಿಹಾಸಿಕ ಸಮಾವೇಶ ನಡೆಸುವ ಸಲುವಾಗಿ ಈಗಾಗಲೇ 17 ಜಿಲ್ಲೆಗಳಲ್ಲಿ ಸಭೆ ನಡೆಸಲಾಗಿದೆ. ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಹಾಸನ, ದಾವಣಗೆರೆ, ಹಾವೇರಿ, ಚಿಕ್ಕಮಗಳೂರು, ಹೊಸಪೇಟೆ, ಬಳ್ಳಾರಿಯಲ್ಲಿ ಸಭೆ ನಡೆಸಿ ಲಿಂಗಾಯತ ಮುಖಂಡರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ – ಧಾರವಾಡ, ಗದಗ ಸೇರಿದಂತೆ ಉಳಿದ ಜಿಲ್ಲೆಗಳಲ್ಲಿಯೂ ಲಿಂಗಾಯತ ಮುಖಂಡರ ಸಭೆ ನಡೆಸಲಾಗುವುದು. ಲಿಂಗಾಯತ ಮುಖಂಡರ ಅಭಿಪ್ರಾಯ ಸಂಗ್ರಹಿಸಿ, ಸಮಾವೇಶದ ಯಶಸ್ಸಿಗೆ ಮನವಿ ಮಾಡಲು ತೀರ್ಮಾನಿಸಲಾಗಿದೆ.
ಹತ್ತರಿಂದ 11 ಜಿಲ್ಲೆಗಳು ಮಾತ್ರ ಬಾಕಿ ಇದ್ದು, ಇಲ್ಲಿಯೂ ಸಭೆ ನಡೆಸಲಾಗುವುದು. ಈಗಾಗಲೇ ನಡೆಸಿರುವ ಸಭೆಗಳಲ್ಲಿ ಸಮಾಜದ ಬಂಧುಗಳು, ಮುಖಂಡರು, ಮಠಾಧೀಶರು, ಲಿಂಗಾಯತ ಸಮುದಾಯದ ಒಳಪಂಗಡದವರು, ನಿವೃತ್ತ ಐಎಎಸ್,
ಐಪಿಎಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತುಕತೆ ನಡೆಸಿದ್ದೇವೆ. ಲಿಂಗಾಯತ ಸಮುದಾಯ ಒಡೆಯಲು ದುಷ್ಟ ಶಕ್ತಿಗಳು ಯತ್ನಿಸುತ್ತಿವೆ. ಲಿಂಗಾಯತ ಮುಖಂಡರನ್ನೇ ಎತ್ತಿಕಟ್ಟುವ ಷಡ್ಯಂತ್ರ ನಡೆಸಲಾಗುತ್ತಿದೆ. ಲಿಂಗಾಯತ ಸಮುದಾಯದವರೇ
ಹೆಚ್ಚು ಮುಖ್ಯಮಂತ್ರಿಗಳಾಗಿದ್ದಾರೆ. ಎಸ್. ಆರ್. ಬೊಮ್ಮಾಯಿ, ವೀರೇಂದ್ರ ಪಾಟೀಲ್, ಜೆ. ಹೆಚ್. ಪಟೇಲ್, ಬಿ. ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ ಈಗಾಗಲೇ ಮುಖ್ಯಮಂತ್ರಿಗಳಾಗಿದ್ದರು. ಸಮಾಜವು ಒಗ್ಗಟ್ಟಿನಿಂದ ಸಾಗಬೇಕಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯೋನ್ಮುಖರಾಗಿದ್ದೇವೆ ಎಂದು ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಮಾಹಿತಿ ನೀಡಿದರು.
ಬಿ. ಎಸ್. ಯಡಿಯೂರಪ್ಪ ಅವರು 2011ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ತುಂಬಾನೇ ಹಿಂಸೆ ನೀಡಿದರು. ಅಧಿಕಾರ ನಡೆಸಲು ಬಿಡಲಿಲ್ಲ. ಸ್ವಪಕ್ಷದವರೇ ಅಡ್ಡಗಾಲು ಹಾಕಿದರು. ಉತ್ತಮ ಆಡಳಿತ ನೀಡಿದರೂ ಅನಗತ್ಯವಾಗಿ ಯಡಿಯೂರಪ್ಪನವರಿಗೆ ತೊಂದರೆ ಕೊಟ್ಟರು. ಅಧಿಕಾರದಿಂದ ಕೆಳಗಿಳಿಸಲು ಷಡ್ಯಂತ್ರ ರೂಪಿಸಿದರು. ಯಾವುದೇ ದುಷ್ಟಶಕ್ತಿಗಳು ಸಮಾಜ ಒಡೆಯಲು ಪ್ರಯತ್ನಿಸಿದರೆ ಬಿಡುವ ಪ್ರಶ್ನೆಯೇ ಇಲ್ಲ. ಹಾಗಾಗಿ, ನಾವೆಲ್ಲರೂ ಸಂಘಟಿತರಾಗಬೇಕು, ಒಂದಾಗಬೇಕು, ಶಕ್ತಿ ಪ್ರದರ್ಶನ ಮಾಡಬೇಕು.
ಸಭೆಯಲ್ಲಿ ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ರವರು ಸಮಾಜದ ಮುಖಂಡರಾದ ರಾಜಶೇಖರ್ ನಾಗಪ್ಪ, ಬಿ. ಜಿ. ಅಜಯ್ ಕುಮಾರ್, ಲೋಕಿಕೆರೆ ನಾಗರಾಜ್, ಕಡ್ಲೇ ಬಾಳು ಧನಂಜಯ್, ಚಂದ್ರಶೇಖರ್ ಪೂಜಾರ್, ಕಿಚುಡಿ ಕೊಟ್ರೇಶ್, ಸಮಾಜದ ಮುಖಂಡರು ಮತ್ತು ಪ್ರಮುಖರು ಉಪಸ್ಥಿತರಿದ್ದರು.