ದಾವಣಗೆರೆ: ನಗರದ ಅಭಿನವ ರೇಣುಕಾ ಮಂದಿರದಲ್ಲಿ ಪಂಚಪೀಠಾಧ್ಯಕ್ಷರು ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದಲ್ಲಿ ಮಾತನಾಡಿದ ವೀರಶೈವ ಲಿಂಗಾಯತ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿದರು. ಒಟ್ಟಾಗಿ ಮುನ್ನಡೆಯದಿದ್ದರೆ ಭವಿಷ್ಯದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಅಲ್ಲ. ಎರಡೂ ಒಂದೇ. ವೀರಶೈವ ಲಿಂಗಾಯತ ಸಮಾಜ ಒಡೆಯುವುದಕ್ಕೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಗುಡುಗಿದರು.
ಈ ಸುದ್ದಿಯನ್ನೂ ಓದಿ: ಮುಂಗಾರು ಬೆಳೆಗೆ Bhadra Damನಿಂದ ನಾಳೆಯಿಂದ 120 ದಿನಗಳ ಕಾಲ ಭದ್ರಾ ಬಲದಂಡೆಗೆ ನೀರು
ವೀರಶೈವ ಲಿಂಗಾಯತ ಸಮಾಜದ ಪಂಚಪೀಠಾಧ್ಯಕ್ಷರು ಮತ್ತು ಶಿವಾಚಾರ್ಯರ ಸಾನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಲ್ಲರೂ ಒಗ್ಗಟ್ಟಿನ ಬಗ್ಗೆಯೇ ಕೇಂದ್ರೀಕರಿಸಿ ಮಾತನಾಡಿದ್ದು ವಿಶೇಷವಾಗಿತ್ತು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸಚಿವರಾದ ಈಶ್ವರ್ ಖಂಡ್ರೆ, ಎಸ್. ಎಸ್. ಮಲ್ಲಿಕಾರ್ಜುನ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ, ಶಾಸಕ ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಎಲ್ಲಾ ಮುಖಂಡರು ಭಿನ್ನಾಭಿಪ್ರಾಯ ಬದಿಗೊತ್ತೋಣ. ಒಂದಾಗಿ ಮುನ್ನಡೆಯೋಣ. ಶ್ರೀಗಳ ಮಾರ್ಗದರ್ಶನದಲ್ಲಿ ಸಮಾಜ ಕಟ್ಟೋಣ ಎಂಬ ಸಂಕಲ್ಪ ಮಾಡಿದರು.
ಮುಖ್ಯಾಂಶಗಳು
– ಒಗ್ಗಟ್ಟಾಗಿದಿದ್ದರೆ ಭವಿಷ್ಯದಲ್ಲಿ ಅಪಾಯ
– ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ
– ರಾಜ್ಯ ಸರ್ಕಾರದ ಜಾತಿಗಣತಿ ಒಪ್ಪಲು ಸಾಧ್ಯವೇ ಇಲ್ಲ
– ವೀರಶೈವ ಲಿಂಗಾಯತ ಎಂದು ಜಾತಿಗಣತಿಯಲ್ಲಿ ನಮೂದಿಸಿ
– ವೀರಶೈವ ಲಿಂಗಾಯತ ಸಮಾಜ ಒಡೆಯುವವರ ಬಗ್ಗೆ ಎಚ್ಚರ ವಹಿಸಿ
– ರಾಜಕೀಯ ವೈಷಮ್ಯ ಬದಿಗಿಡಿ, ಸಮಾಜಕ್ಕಾಗಿ ಒಂದಾಗಿ
– ಸಮಾಜದ ರಕ್ಷಣೆಗೆ ಶ್ರೀಗಳ ಸಂದೇಶ ಪಾಲಿಸೋಣ
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮಾತನಾಡಿ 12 ವರ್ಷಗಳ ನಂತರ ದಾವಣಗೆರೆಯಲ್ಲಿ ಪಂಚ ಪೀಠಾಧ್ಯಕ್ಷರು, ಶಿವಾಚಾರ್ಯರನ್ನು ಒಂದೆಡೆ ನೋಡುವ ಸೌಭಾಗ್ಯ ನಮಗೆ ಸಿಕ್ಕಿದೆ. ಈ ವ್ಯವಸ್ಥೆ ಮಾಡಿದ ನಮ್ಮೆಲ್ಲರ ನಾಯಕರಾದ ಶಾಮನೂರು ಶಿವಶಂಕರಪ್ಪರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಶ್ರೀಗಳ ಆಶೀರ್ವಾದ ನಮ್ಮೆಲ್ಲರ ಮೇಲೆ ಸದಾ ಇರಲಿ. ಹಿರಿಯರು ಹೇಳಿದಂತೆ ಧರ್ಮ ಎಂದರೆ ಜೀವನದ ಶಿಸ್ತು, ಜೀವನ ಕ್ರಮ, ವ್ಯಕ್ತಿತ್ವದ ಹೆಗ್ಗುರುತು. ವೀರಶೈವ ಲಿಂಗಾಯತ ಧರ್ಮದವರೆಲ್ಲರೂ ಸೇರಿದ್ದೇವೆ. ನಮ್ಮ ಸಮಾಜ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಶ್ರೀಗಳ ನೇತೃತ್ವದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳು, ಉಜ್ಜಯನಿ ಸದ್ಧರ್ಮ ಪೀಠದ ಶ್ರೀ ಜಗದ್ಗುರುಗಳಾದ ಪರಮಪೂಜ್ಯ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಕೇದಾರ ಪೀಠದ ಜಗದ್ಗುರು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಶ್ರೀಗಳು, ಶ್ರೀ ಕಾಶಿ ಜ್ಞಾನ ಪೀಠ ಪೂಜ್ಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದ ಶ್ರೀಗಳು, ಶ್ರೀಶೈಲ ಮಹಾಸಂಸ್ಥಾನ ಪೀಠದ ಪರಮ ಪೂಜ್ಯರಾದ ಜಗದ್ಗುರು ಡಾ. ಶ್ರೀ ಚನ್ನಸಿದ್ಧರಾಮ ಶಿವಾಚಾರ್ಯ ಶ್ರೀಗಳು, ಪರಮಪೂಜ್ಯ ರೇಣುಕ ಶಿವಾಚಾರ್ಯ ಶ್ರೀಗಳು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ್ ಬಿದರಿ, ಸಚಿವರಾದ ಈಶ್ವರ್ ಖಂಡ್ರೆ, ಎಸ್.ಎಸ್. ಮಲ್ಲಿಕಾರ್ಜುನ್, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಶಾಸಕ ವಿಜಯಾನಂದ ಕಾಶಪ್ಪನವರ್, ವಿಧಾನ ಪರಿಷತ್ ವಿಧಾನ ಸದಸ್ಯ ಧನಂಜಯ ಸರ್ಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಶಿವಯೋಗಿ ಸ್ವಾಮಿ, ಸಂಸದರಾದ ಪ್ರಭಾ ಮಲ್ಲಿಕಾರ್ಜುನ್, ನಾಡಿನ ವಿವಿಧ ಮಠಗಳ ಪರಮಪೂಜ್ಯ ಶ್ರೀಗಳು, ಸಮಾಜದ ಪ್ರಮುಖರು, ಗಣ್ಯರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಮಾಜದ ಬಂಧುಗಳು ಉಪಸ್ಥಿತರಿದ್ದರು.