ಲಖನೌ/ರಾಂಪುರ: ಅನ್ಯ ಧರ್ಮೀಯರ ಭಾವನೆಗಳಿಗೆ ಧಕ್ಕೆ ತರುವಂತಹ ಗೋಹತ್ಯೆಯಂತಹ ಕೃತ್ಯಗಳಲ್ಲಿ ‘ನಿಜವಾದ ಮುಸ್ಲಿಂ’ ತೊಡಗಿಸಿಕೊಳ್ಳುವುದಿಲ್ಲ ಎಂಬ ಉತ್ತರ ಪ್ರದೇಶದ ರಾಂಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅನಿಲ್ ಕುಮಾರ್ ಸಿಂಗ್ ಸಿಸೋಡಿಯಾ ಅವರ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಬೆನ್ನಲ್ಲೇ, ಅಧಿಕಾರಿ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ಎಸ್‌ಪಿ ಹೇಳಿದ್ದೇನು?
ಶ್ರಾವಣ ಮಾಸದ ಹಿನ್ನೆಲೆಯಲ್ಲಿ ರಾಂಪುರದ ಗಂಜ್ ಮತ್ತು ಸ್ವಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗೋಹತ್ಯೆ ತಡೆಗೆ ಸಂಬಂಧಿಸಿದಂತೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಎಸ್‌ಪಿ ಸಿಸೋಡಿಯಾ, “ಇಸ್ಲಾಂ ಧರ್ಮದ ಪ್ರಕಾರ, ಇನ್ನೊಬ್ಬರ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ಪ್ರಾಣಿಯ ಮಾಂಸ ಸೇವನೆ ಹರಾಮ್ (ನಿಷಿದ್ಧ). ಒಬ್ಬ ನಿಜವಾದ ಮುಸ್ಲಿಂ ಎಂದಿಗೂ ಇಂತಹ ಕೃತ್ಯದಲ್ಲಿ ತೊಡಗುವುದಿಲ್ಲ. ಇದರಲ್ಲಿ ತೊಡಗಿರುವವರು ಮುಸ್ಲಿಮರಲ್ಲ ಅಥವಾ ಅತ್ಯಂತ ದುಷ್ಟರು. ಅಂತವರಿಗೆ ಪಾಠ ಕಲಿಸುವುದು ನನ್ನ ಕರ್ತವ್ಯ” ಎಂದು ಹೇಳಿದ್ದರು.
ಅಲ್ಲದೆ, ನಗರದ ಮಸೀದಿ ಧರ್ಮದರ್ಶಿಗಳು (ಮುತವಲ್ಲಿ) ಮತ್ತು ಮೌಲ್ವಿಗಳೊಂದಿಗೆ ಸಭೆ ನಡೆಸಿ ಜಾಗೃತಿ ಮೂಡಿಸಲಾಗುವುದು ಹಾಗೂ ಕಳೆದ 10 ವರ್ಷಗಳಲ್ಲಿ ಗೋಹತ್ಯೆ ಪ್ರಕರಣಗಳಲ್ಲಿ ಭಾಗಿಯಾದವರ ಪರಿಶೀಲನೆ ನಡೆಸಿ ‘ದೋಸಿಯರ್’ (ಮಾಹಿತಿ ಪಟ್ಟಿ) ಸಿದ್ಧಪಡಿಸಲಾಗುವುದು ಎಂದು ಘೋಷಿಸಿದ್ದರು.
ವಿವಾದದ ಬೆನ್ನಲ್ಲೇ ಸ್ಪಷ್ಟನೆ:
ಈ ಹೇಳಿಕೆ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ ಎಸ್‌ಪಿ, “ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ದಾರುಲ್ ಉಲೂಮ್ ದೇವಬಂದ್ ಸಂಸ್ಥೆಯು ಕೂಡ ಇತರ ಧರ್ಮೀಯರ ಭಾವನೆಗೆ ಧಕ್ಕೆ ತರುವ ಪ್ರಾಣಿ ವಧೆ ಸೂಕ್ತವಲ್ಲ ಎಂದು ಹಿಂದೆ ಹಲವು ಬಾರಿ ಹೇಳಿದೆ. ಶ್ರಾವಣ ಮಾಸದಲ್ಲಿ ಕೋಮು ಸೌಹಾರ್ದತೆ ಮತ್ತು ಶಾಂತಿ ಕಾಪಾಡುವ ಉದ್ದೇಶದಿಂದಷ್ಟೇ ನಾನು ಮನವಿ ಮಾಡಿದ್ದೆ. ಯಾರ ಧಾರ್ಮಿಕ ಭಾವನೆಗೂ ನೋವುಂಟು ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ” ಎಂದು ವಿವರಿಸಿದ್ದಾರೆ.
- Cow Slaughter Controversy
- Rampur Police Action
- Rampur SP Anil Kumar Singh Sisodia
- Shravan Cow Slaughter Ban UP
- True Muslim Cow Slaughter Statement
- UP Police Cow Slaughter Remarks
- ಅನಿಲ್ ಕುಮಾರ್ ಸಿಂಗ್ ಸಿಸೋಡಿಯಾ
- ಉತ್ತರ ಪ್ರದೇಶ ಸುದ್ದಿ
- ಗೋಹತ್ಯೆ ವಿವಾದ
- ದಾರುಲ್ ಉಲೂಮ್ ದೇವಬಂದ್
- ನಿಜವಾದ ಮುಸ್ಲಿಂ ಹೇಳಿಕೆ
- ರಾಂಪುರ ಎಸ್‌ಪಿ
- ಶ್ರಾವಣ ಮಾಸ ಗೋಹತ್ಯೆ ತಡೆ





Leave a comment