ಉನ್ನಾವೋ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಉನ್ನಾವೋದಲ್ಲಿ ಭೀಕರ ಕೊಲೆ ಪ್ರಕರಣವೊಂದನ್ನು ಪೋಲಿಸರು ಕೇವಲ 12 ಗಂಟೆಗಳಲ್ಲಿ ಭೇದಿಸಿದ್ದಾರೆ.
ಹೆದ್ದಾರಿಯ ಬದಿಯಲ್ಲಿ ಬಾಕ್ಸ್ ಒಂದರಲ್ಲಿ ತುಂಬಿ ಎಸೆಯಲಾಗಿದ್ದ ವ್ಯಕ್ತಿಯ ಶವವನ್ನು ವಶಪಡಿಸಿಕೊಂಡ ಪೊಲೀಸರು, ಮೃತನ ಪತ್ನಿ, ಆಕೆಯ ನೆರೆಮನೆಯ ವ್ಯಕ್ತಿ ಹಾಗೂ ಅಪ್ರಾಪ್ತ ಬಾಲಕ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ಮತ್ತು ಲೋಡರ್ ವಾಹನದ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಅಚಲಗಂಜ್ ನಿವಾಸಿ ಸೋನು ಎಂಬವರೇ ಕೊಲೆಯಾದ ದುರದೃಷ್ಟಕರ ವ್ಯಕ್ತಿ. ಗಂಗಾಘಾಟ್ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಂಚನ್ ನಗರದ ಬಾಡಿಗೆ ಮನೆಯಲ್ಲಿ ಪತ್ನಿ ನೇಹಾ ಜೊತೆ ಸೋನು ವಾಸವಾಗಿದ್ದರು. ಘಟನೆಯ ದಿನದಂದು ಉನ್ನಾವೋ-ರಾಯ್‌ಬರೇಲಿ ಹೆದ್ದಾರಿಯಲ್ಲಿ ಪೆಟ್ಟಿಗೆಯೊಂದು ಪತ್ತೆಯಾಗಿದ್ದು, ಅದನ್ನು ಪರಿಶೀಲಿಸಿದಾಗ ಸೋನು ಅವರ ಮೃತದೇಹ ಪತ್ತೆಯಾಗಿತ್ತು.
ತನಿಖೆ ಕೈಗೆತ್ತಿಕೊಂಡ ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಲೋಡರ್ ವಾಹನವೊಂದು ಬಾಕ್ಸ್‌ನೊಂದಿಗೆ ತೆರಳಿ, ವಾಪಸ್ ಬರುವಾಗ ಖಾಲಿಯಾಗಿರುವುದು ಕಂಡುಬಂದಿದೆ. ವಾಹನದ ನಂಬರ್ ಪ್ಲೇಟ್ ಆಧರಿಸಿ ಚಾಲಕ ಮತ್ತು ಮಾಲೀಕರನ್ನು ವಿಚಾರಣೆಗೊಳಪಡಿಸಿದಾಗ ಪ್ರಕರಣದ ಅಸಲಿ ಸತ್ಯ ಹೊರಬಿದ್ದಿದೆ.
ಕೌಟುಂಬಿಕ ಕಲಹ ಮತ್ತು ಗಂಭೀರ ಆರೋಪ: ಪತಿ ಸೋನು ನಿತ್ಯ ಕುಡಿದು ಬಂದು ಹಲ್ಲೆ ನಡೆಸುತ್ತಿದ್ದ ಹಾಗೂ ಮನೆಗೆ ಇತರೆ ಮಹಿಳೆಯರನ್ನು ಕರೆತರುತ್ತಿದ್ದ ಎಂದು ವಿಚಾರಣೆ ವೇಳೆ ಪತ್ನಿ ನೇಹಾ ಹೇಳಿಕೆ ನೀಡಿದ್ದಾಳೆ.
ಪರಸ್ಪರ ವಿರುದ್ಧ ಹೇಳಿಕೆ: ನೆರೆಮನೆಯ ಜಿತೇಂದ್ರ ಸಿಂಗ್ ಅಲಿಯಾಸ್ ರಾಹುಲ್ ಎಂಬಾತನೇ ಸೋನು ಸತ್ತ ಬಳಿಕ ಶವ ವಿಲೇವಾರಿಗೆ ಲೋಡರ್ ವಾಹನ ವ್ಯವಸ್ಥೆ ಮಾಡಿದ್ದ ಎಂದು ನೇಹಾ ಆರೋಪಿಸಿದರೆ, ನೇಹಾ ಈಗಾಗಲೇ ಪತಿಯನ್ನು ಕೊಲೆ ಮಾಡಿದ್ದಳು, ನಾನು ಕೇವಲ ಮನೆ ಖಾಲಿ ಮಾಡಲು ವಾಹನ ಕಾಯ್ದಿರಿಸಲು ಸಹಾಯ ಮಾಡಿದೆ ಎಂದು ರಾಹುಲ್ ವಾದಿಸಿದ್ದಾನೆ.
ತನಿಖೆ ಪ್ರಗತಿಯಲ್ಲಿ: ಶವ ಸಾಗಿಸಲು ನೇಹಾ ೧,೨೦೦ ರೂಪಾಯಿ ನೀಡಿ ಲೋಡರ್ ಬಾಡಿಗೆಗೆ ಪಡೆದಿದ್ದಳು. ಶವ ವಿಲೇವಾರಿಗೆ ಹೆಚ್ಚುವರಿ ಹಣ ಕೇಳಿದ ಕಾರಣಕ್ಕೆ ಹೈವೇ ಬದಿಯಲ್ಲೇ ಪೆಟ್ಟಿಗೆಯನ್ನು ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು.
ನೇಹಾ ಮತ್ತು ಸೋನು ಕಳೆದ ೧೦ ವರ್ಷಗಳಿಂದ ಜೊತೆಯಾಗಿ ವಾಸಿಸುತ್ತಿದ್ದರು. ಪ್ರಸ್ತುತ ಐದು ಪೊಲೀಸ್ ತಂಡಗಳು ಪ್ರಕರಣದ ನಿಖರ ಕಾರಣ ಹಾಗೂ ಕೊಲೆಯಲ್ಲಿ ಪ್ರತಿಯೊಬ್ಬ ಆರೋಪಿಯ ಪಾತ್ರವೇನು ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಲಾಗಿದೆ.





Leave a comment