ತುಮಕೂರು: 40 ವರ್ಷದ ವಿವಾಹಿತ ಪುರುಷನನ್ನು ಪ್ರೀತಿಸಿ ಆತನೊಂದಿಗೆ ಪರಾರಿಯಾಗಿದ್ದ 20 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈಕೆಯೊಂದಿಗೆ ಆಕೆಯ ಪ್ರಿಯಕರನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಮ್ಮಿಬ್ಬರ ನಡುವೆ ವಯಸ್ಸಿನ ಅಂತರ ಹೆಚ್ಚಾಗಿರುವುದರಿಂದ ತಮ್ಮ ಪ್ರೀತಿಗೆ ಮನೆಯವರು ಒಪ್ಪುವುದಿಲ್ಲವೆಂದು ಭಯಗೊಂಡು ಇಬ್ಬರೂ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಮಾವತ್ತೂರು ಕೆರೆಯಲ್ಲಿ ಇವರಿಬ್ಬರ ಶವಗಳು ಪತ್ತೆಯಾಗಿವೆ. ಅನನ್ಯ (19) ಹಾಗೂ ರಂಗಶಾಮಣ್ಣ (40) ಆತ್ಮಹತ್ಯೆಗೆ ಶರಣಾದವರು.
ಮೃತ ವಿದ್ಯಾರ್ಥಿನಿ ಅನನ್ಯಾ ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ಲಕ್ಕಯ್ಯನಪಾಳ್ಯ ಗ್ರಾಮದವಳಾಗಿದ್ದು, ತುಮಕೂರಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಳು. ಬೈರಗೊಂಡ್ಲು ಗ್ರಾಮದ ರಂಗಶಾಮಣ್ಣ ವಿವಾಹಿತ ಪುರುಷನಾಗಿದ್ದು, ಈತನಿಗೆ ಮಡದಿ ಮತ್ತು ಮಕ್ಕಳೂ ಇದ್ದಾರೆ.
ಇಬ್ಬರೂ ನಾಪತ್ತೆಯಾಗಿ ಮೂರು ದಿನಗಳಾದರೂ ಪತ್ತೆ ಆಗಿರಲಿಲ್ಲ. ಆಗ ಅವರ ಮೊಬೈಲ್ ಟ್ರೇಸ್ ಮಾಡಿದಾಗ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಮಾವತ್ತೂರು ಕೆರೆಯ ಬಳಿ ಮೊಬೈಲ್ ಟ್ರೇಸ್ ಆಗಿದೆ.
ನಿನ್ನೆ ಮಾವತ್ತೂರು ಕೆರೆ ಬಳಿ ನಿಲ್ಲಿಸಿದ್ದ ರಂಗಶಾಮಣ್ಣನ ಕಾರಿನಲ್ಲಿ ಇಬ್ಬರ ಮೊಬೈಲ್‌ಗಳು, ಕೆರೆಯ ದಂಡೆಯಲ್ಲಿ ಇಬ್ಬರ ಚಪ್ಪಲಿಗಳು ಪತ್ತೆಯಾಗಿವೆ. ಆಗ ಇಬ್ಬರೂ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತಪಡಿಸಿದ ಪೊಲೀಸರು ನಿನ್ನೆ ಮಧ್ಯಾಹ್ನದಿಂದಲೇ ಅಗ್ನಿಶಾಮಕ ದಳದ ಸಹಾಯದಿಂದ ಶವ ಪತ್ತೆಗೆ ಮುಂದಾಗಿದ್ದರು.
ಶನಿವಾರ ತಡರಾತ್ರಿಯಾದ ಹಿನ್ನೆಲೆಯಲ್ಲಿ ಶವ ಪತ್ತೆ ಕಾರ್ಯವನ್ನು ಸ್ಥಗಿತಗೊಳಿಸಿ ಪುನಃ ಭಾನುವಾರ ಬೆಳಗ್ಗೆಯಿಂದ ಪುನಃ ಶವ ಹುಡುಕಾಟ ಕಾರ್ಯಾಚರಣೆ ಮುಂದುವರಿಸಿದ್ದರು. ಈ ವೇಳೆ ರಂಗಶಾಮಣ್ಣ ಹಾಗೂ ವಿದ್ಯಾರ್ಥಿನಿ ಅನನ್ಯಾ ಅವರ ಮೃತದೇಹಗಳು ಕೆರೆಯಲ್ಲಿ ಪತ್ತೆಯಾಗಿವೆ.
ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಇಬ್ಬರೂ ಪ್ರೇಮಿಗಳನ್ನು ಅವರ ಮನೆಯವರೇ ಕೊಲೆ ಮಾಡಿರಬಹುದು ಎಂಬ ಶಂಕೆಯನ್ನೂ ಪೊಲೀಸರು ವ್ಯಕ್ತಪಡಿಸಿದ್ದು, ಮರಣೋತ್ತರ ಪರೀಕ್ಷೆಯಿಂದ ಮಾಹಿತಿ ಲಭ್ಯವಾಗಲಿದೆ.