ದಾವಣಗೆರೆ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಸಿಲುಕಿಸಲು ಯತ್ನಿಸಿದ್ದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಬಿಜೆಪಿಗೆ ಮುಖಭಂಗವಾಗಿದೆ. ಸಿದ್ದರಾಮಯ್ಯರ ಪತ್ನಿ ಪಾರ್ವತಿ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ವಿರುದ್ಧ ಇಡಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದ್ದು ಸತ್ಯಕ್ಕೆ ಸಂದ ಜಯ ಎಂದು ಜವಾಹರ್ ಬಾಲ್ ಮಂಚ್ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಬಣ್ಣಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಮುಡಾ ಕೇಸ್ ನಲ್ಲಿ ನನ್ನ ಕುಟುಂಬ, ನಾನು ಅನುಭವಿಸಿದ ಮಾನಸಿಕ ಕಿರುಕುಳ ಎಂದಿಗೂ ಮರೆಯಲಾರೆ: ಸಿಎಂ ಸಿದ್ದರಾಮಯ್ಯ!
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಜೊತೆಗೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ರಾಜ್ಯದ ಜನರು, ಮತದಾರರ ಹಿತ ಕಾಪಾಡುತ್ತಿದೆ. ಇದನ್ನು ಸಹಿಸದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಬಿಜೆಪಿಯು ಮುಡಾ
ಪ್ರಕರಣ ಬಳಸಿಕೊಂಡು ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ನಡೆಸಿತ್ತು. ಮಾತ್ರವಲ್ಲ, ಸಿದ್ದರಾಮಯ್ಯರ ಹೆಸರು ತಳುಕು ಹಾಕಿ ಜನಪ್ರಿಯತೆ ಕುಂದಿಸುವ ಕಾರ್ಯಕ್ಕೆ ಮುಂದಾಗಿತ್ತು. ಸುಪ್ರೀಂಕೋರ್ಟ್ ಈಗ ಇಡಿ ಮೇಲ್ಮನವಿ ವಜಾಗೊಳಿಸಿದ್ದು,
ಬಿಜೆಪಿಗೆ ಮುಖಭಂಗ ಆಗಿದೆ ಎಂದು ಹೇಳಿದ್ದಾರೆ.
ಪಾರ್ವತಿ ಸಿದ್ದರಾಮಯ್ಯ ಹಾಗೂ ಬೈರತಿ ಸುರೇಶ್ ವಿರುದ್ಧದ ಮುಡಾ ಕೇಸ್ ಸಂಬಂಧ ಹೈಕೋರ್ಟ್ ಇಡಿ ಅರ್ಜಿ ರದ್ದುಗೊಳಿಸಿತ್ತು. ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದ ಇಡಿಗೆ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್ ರಾಜಕೀಯ ಕಾರಣಕ್ಕೆ ಈ ರೀತಿ ಕ್ರಮ ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದು, ಇದು ಪ್ರಜಾಪ್ರಭುತ್ವಕ್ಕೆ ಸಿಕ್ಕ ಗೆಲುವು. ಸಾವಿರ ಸುಳ್ಳು ಹೇಳಿ ಸತ್ಯ ಮಾಡಲು ಹೋಗುತ್ತಿದ್ದ ಬಿಜೆಪಿಗೆ ಈ ಆದೇಶವು ನುಂಗಲಾರದ ತುಪ್ಪದಂತಾಗಿರುವುದಂತೂ ಸತ್ಯ. ಸಿದ್ದರಾಮಯ್ಯರ ಆಡಳಿತ ಪಾರದರ್ಶಕ ಮತ್ತು ಜನರ ಪರವಾಗಿದ್ದು, ಇದನ್ನು ಸಹಿಸದೇ ಕುತಂತ್ರ ನಡೆಸುವುದನ್ನು ಬಿಜೆಪಿ ನಾಯಕರು ಇನ್ನು ಮುಂದಾದರೂ ಬಿಡಬೇಕು ಎಂದು ಮೊಹಮ್ಮದ್ ಜಿಕ್ರಿಯಾ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.