SUDDIKSHANA KANNADA NEWS/ DAVANAGERE/ DATE:03-02-2025
ದಾವಣಗೆರೆ: ದೇಶದ ಬೆನ್ನೆಲುಬು ಆಗಿರುವ ಯೋಧ ಹಾಗೂ ರೈತರ ಸೇವೆ ಅನನ್ಯ ರೈತರ ಹಿತವನ್ನು ಸದಾ ಕಾಯುವ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠವು ಪ್ರಾಣದ ಹಂಗು ತೊರೆದು, ಶತ್ರುಗಳೊಂದಿಗೆ ಹೋರಾಡಿ, ದೇಶವನ್ನು ರಕ್ಷಿಸಿ ಹುತಾತ್ಮರಾದ ವೀರ ಯೋಧರ ಕುಟುಂಬಗಳಿಗೆ ಅಭಿನಂದನೆಗಳೊಂದಿಗೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದಿಂದ ಒಂದು ಲಕ್ಷ ರೂಪಾಯಿಗಳ ಆರ್ಥಿಕ ನೆರವಿನ ಸಾಂತ್ವನವನ್ನು ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಹಲವಾರು ವರ್ಷಗಳಿಂದ ತರಳಬಾಳು ಹುಣ್ಣಿಮೆ ಮಹೋತ್ಸವದ ಕೊನೆಯ ದಿನ ನೀಡುತ್ತಾ ಬಂದಿದ್ದಾರೆ.
ಹಳೇಬೀಡು ತರಳಬಾಳು ಹುಣ್ಣಿಮೆ ಕೊನೆಯ ದಿನ ಸಂಜೆಯ ಸಮಾರಂಭದಲ್ಲಿ ಮನಮಿಡಿಯುವ ಪ್ರಸಂಗ ವೊಂದಕ್ಕೆ ಜನರು ಸಾಕ್ಷಿಯಾದರು.
ಅದು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಹುತಾತ್ಮ ಯೋಧರ ಕುಟುಂಬದವರಿಗೆ ಆರ್ಥಿಕ ನೆರವನ್ನು ನೀಡಿ ಗೌರವ ಸಲ್ಲಿಸಿದ ಸಂದರ್ಭ. ಕರ್ನಾಟಕದಲ್ಲಿನ ಅಂತಹ ಹತ್ತಾರು ವೀರಯೋಧರ ಕುಟುಂಬದವರನ್ನು ಗುರುತಿಸಿ ಕರೆಸಿ ವೇದಿಕೆಯಲ್ಲಿ ಗೌರವಿಸಿ ತಲಾ 50,000 ರೂ.ಗಳ ನಿಧಿಯನ್ನು ಅರ್ಪಿಸಿದಾಗ ನಮ್ಮ ಕಣ್ಣಾಲಿಗಳು ತೇವಗೊಂಡಿದ್ದವು. ಅವರ ತ್ಯಾಗ ದೊಡ್ಡದು. ಯುವ ವಯಸ್ಸಿನಲ್ಲಿಯೇ ವಿಧವೆಯರಾದ ಆ ವೀರವನಿತೆಯರು ಕೈಯಲ್ಲಿ ಹಸುಗೂಸುಗಳನ್ನು ಹಿಡಿದುಕೊಂಡು ವೇದಿಕೆಯ ಮೇಲೆ ಕಾಣಿಸಿಕೊಂಡಾಗ ಸಭಿಕರ ಮುಖದಲ್ಲಿ ಕಣ್ಣೀರು ಜಿನುಗುತ್ತಿತ್ತು. ಕ್ಷಣಕಾಲ ಸಭೆ ಸ್ತಂಭೀಭೂತವಾಯಿತು. ಸಭಾಮಂಟಪದ ಒಳ ಹೊರಗೆ ಸೇರಿದ್ದ ಜನ ಸಾಗರ ಭಾವಪರವಶರಾಗಿ ಅವರ ಗೌರವಾರ್ಥ ತಮ್ಮ
ಕೈಯಲ್ಲಿದ್ದ ಮೊಬೈಲುಗಳನ್ನು ಮೇಲೆ ಎತ್ತಿ ಹಿಡಿದು ಬೆಳಗಿಸಿದಾಗ ಹುತಾತ್ಮ ಯೋಧರ ಆತ್ಮಗಳ ಲಕ್ಷದೀಪೋತ್ಸವದಲ್ಲಿ ನೀರಾಜನಗಳು ಬೆಳಗಿದಂತೆ ಗೋಚರಿಸುತ್ತಿತ್ತು!
ದೇಶವನ್ನು ಸೈನಿಕರು ಪ್ರಾಣದ ಹಂಗು ತೊರೆದು ಕಾಯುತ್ತಿರುವುದರಿಂದಲೇ ನಾಡಿನಲ್ಲಿ ನಾವು ನೆಮ್ಮದಿಯಿಂದ ಬದುಕುವುದು ಸಾಧ್ಯವಾಗಿದೆ ಎಂಬ ಕೃತಜ್ಞತೆಯ ಭಾವ ಸಭೆಯಲ್ಲಿ ಮಡುಗಟ್ಟಿತ್ತು! ವೇದಿಕೆಯ ಮೇಲಿದ್ದ ಯಡಿಯೂರಪ್ಪನವರೂ ಮನಕರಗಿ ಆ ದುಃಖತಪ್ತ ಕುಟುಂಬ ದವರನ್ನು ಹತ್ತಿರ ಕರೆದು ವಿಚಾರಿಸಿ ಸರಕಾರದಿಂದ ಸಾಧ್ಯವಾದ ಎಲ್ಲ ನೆರವನ್ನು ನೀಡಲು ಅಧಿಕಾರಿಗಳಿಗೆ ಆದೇಶಿಸಿದರು! ಎಂದು ಶ್ರೀ ಜಗದ್ಗುರುಗಳವರು ಅಂಕಣ ಬರಹದಲ್ಲಿ ಹಂಚಿಕೊಂಡಿದ್ದರು