SUDDIKSHANA KANNADA NEWS/ DAVANAGERE/ DATE:25-12-2024
ದಾವಣಗೆರೆ: ನಗರದ ಹದಡಿ ರಸ್ತೆಯಲ್ಲಿರುವ ಬೀದಿ ಬದಿ ವ್ಯಾಪಾರಸ್ಥರನ್ನು ಏಕಾಏಕಿಯಾಗಿ ತೆರವುಗೊಳಿಸಲಾಗಿದೆ, ಇದರಿಂದ ಅಲ್ಲಿರುವ ಸಣ್ಣ ಪುಟ್ಟ ಬೀದಿಬದಿ ವ್ಯಾಪಾರಸ್ಥರಿಗೆ ತೊಂದರೆಯಾಗಿದೆ ಎಂದು ಜಿಲ್ಲಾ ಬೀದಿಬದಿ ಸ್ಥಿರ ಮತ್ತು ಸಂಚಾರಿ ಚಿಲ್ಲರೆ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಎಸ್. ಇಸ್ಮಾಯಿಲ್ ಬೇಸರ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಹಾನಗರ ಪಾಲಿಕೆ ಗುರುತಿಸಿರುವಂತೆ 13,000 ಬೀದಿ ಬದಿ ವ್ಯಾಪಾರಿಗಳು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಬೀದಿ ಬದಿಯಲ್ಲಿ ತಮ್ಮ ಬದುಕನ್ನೇ ಕಟ್ಟಿಕೊಳ್ಳಲು ಕಷ್ಟಪಡುತ್ತಿರುವ ವ್ಯಾಪಾರಸ್ಥರ ಗೋಳನ್ನು ಕೇಳುವವರಿಲ್ಲ ಎಂದರು. ಡಿ. 21 ರಂದು ಹದಡಿ ರಸ್ತೆಯಲ್ಲಿರುವ ಬೀದಿ ಬದಿ ವ್ಯಾಪಾರಸ್ಥರನ್ನು ಏಕಾಏಕಿಯಾಗಿ ತೆರವುಗೊಳಿಸಿದೆ, ಇದರಿಂದ ಅಲ್ಲಿರುವ ಸಣ್ಣ ಪುಟ್ಟ ಬೀದಿಬದಿ ವ್ಯಾಪಾರಸ್ಥರಿಗೆ ತೊಂದರೆಯಾಗಿದೆ ಎಂದು ತಿಳಿಸಿದರು.
ತೆರವುಗೊಳಿಸಲು ಪಾಲಿಕೆಯು ಕೆಲ ಕಾರಣಗಳನ್ನು ನೀಡಿದೆ. ಹದಡಿ ರಸ್ತೆ, ಶಾಮನೂರು ರಸ್ತೆ ಹಾಗೂ ಡೆಂಟಲ್ ಕಾಲೇಜು ರಸ್ತೆಗೆ ಸಂಬಂಧಪಟ್ಟಂತೆ ಹೈಕೋರ್ಟ್‌ನ ಲೋಕಾಯುಕ್ತದಿಂದ ಪಾಲಿಕೆ ವಿರುದ್ಧ ಕೇಸ್ ದಾಖಲಾಗಿದ್ದು, ಇದಕ್ಕೆ ಅಲ್ಲಿರುವ ವ್ಯಾಪಾರಸ್ಥರನ್ನು ತೆರವುಗೊಳಿಸುವುದು ಅನಿವಾರ್ಯ ಎಂದಿದ್ದಾರೆ. ಆದರೆ ಈ ಕುರಿತಂತೆ ವ್ಯಾಪಾರಸ್ಥರಿಗೆ ಯಾವ ಮುನ್ಸೂಚನೆ ನೀಡದೆ ಹಾಗೂ ಬಹು ಮುಖ್ಯವಾಗಿ ಪಟ್ಟಣ ಮಾರಾಟ ಸಮಿತಿ ಸದಸ್ಯರಿಗೆ ಕನಿಷ್ಠ ಮಾಹಿತಿಯನ್ನು ನೀಡದೆ, ಏಕಾಏಕಿಯಾಗಿ ಈ ರೀತಿ ಒಕ್ಕಲಿಬ್ಬಿಸುವ ಕ್ರಮ ಕೈಗೊಳ್ಳಲಾಗಿದೆ ಎಂದರು.
ಹೈಕೋರ್ಟ್ ಪ್ರಕರಣ ತಿಳಿದ ಬಳಿಕ ಪಟ್ಟಣ ಮಾರಾಟ ಸಮಿತಿಯ ಸಭೆ ಕರೆದು ಈ ವಿಷಯದ ಕುರಿತು ನಿರ್ಧಾರ ಮಾಡಬೇಕಿತ್ತು. ಪಾಲಿಕೆಯು ಪಟ್ಟಣ ಮಾರಾಟ ಸಮಿತಿಯನ್ನು ನಾಮಕಾವಸ್ಥೆ ಎಂಬಂತೆ ಪರಿಗಣಿಸಿದಂತೆ. ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ವೆಂಡಿಂಗ್ ಜೋನ್ ಅನ್ನು ವ್ಯಾಪಾರಸ್ಥರು ಇರುವ ಜಾಗದಲ್ಲೇ ಮಾಡಬೇಕು. ತೊಂದರೆಯಿದ್ದರೆ ವ್ಯಾಪಾರಸ್ಥರ ಮನವೊಲಿಸಿ ಹೊಸ ವೆಂಡಿಂಗ್ ಜೋನ್ ನಲ್ಲಿ ಕೆಲಸೌಕರ್ಯಗಳನ್ನು ನಿಗದಿಗೊಳಿಸಿ ನಂತರ ಅವರನ್ನು ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.
ಹೊಸ ವೆಂಡಿಂಗ್ ಜೋನ್ ಜನನಿಬಿಡ ಪ್ರದೇಶದಲ್ಲೇ ಸ್ಥಾಪಿತವಾಗಿರಬೇಕು ಎಂದು ನಿಖರವಾಗಿ ಉಲ್ಲೇಖಿಸಿದೆ. ಈ ಯಾವ ಕ್ರಮಗಳನ್ನು ಅನುಸರಿಸದೇ ಇರುವುದು ದುರಂತ. ವರ್ಷಗಳೇ ಕಳೆದರೂ ಇಲ್ಲಿಯವರೆಗೂ ಸಭೆಯನ್ನು ಕರೆದಿಲ್ಲ.
ತುರ್ತಾಗಿ ಸಭೆ ಕರೆದು ಬೀದಿ ಬದಿ ವ್ಯಾಪಾರಸ್ಥರ ಕುಂದುಕೊರತೆಗಳನ್ನು ನಿವಾರಿಸಬೇಕು.ಎಸ್ ಎಸ್ ನಿಜಲಿಂಗಪ್ಪ ಬಡಾವಣೆಯಲ್ಲಿ ನಿರ್ಮಿಸಿರುವ ಮಾರುಕಟ್ಟೆಯನ್ನು ಪ್ರತಿ ಮಾರುಕಟ್ಟೆಗಳಲ್ಲಿ ಅದೇ ರೀತಿ ಸುಸಜ್ಜಿತವಾಗಿ ನಿರ್ಮಿಸಬೇಕು ಎಂದು ಹೇಳಿದರು.
ಮಹಾನಗರ ಪಾಲಿಕೆ ಆಯುಕ್ತರು ಈ ಕೂಡಲೇ ಈ ಎಲ್ಲಾ ಸಮಸ್ಯೆಯನ್ನು ಬಗೆಹರಿಸಲು ತುರ್ತಾಗಿ ಪಟ್ಟಣ ಮಾರಾಟ ಸಮಿತಿ ಸಭೆ ಕರೆದು ಸಭೆಯಲ್ಲಿ ನಿರ್ಧರಿಸಿದ ನಂತರವೇ ಕ್ರಮವಹಿಸಬೇಕು. ಇಲ್ಲವಾದಲ್ಲಿ ಡಿಸೆಂಬರ್ 30ರ ಒಳಗಾಗಿ ಸಭೆ
ಕರೆದು ಇತ್ಯರ್ಥಗೊಳಿಸದಿದ್ದರೆ, ದಾವಣಗೆರೆ ನಗರದ ಬೀದಿ ಬದಿ ವ್ಯಾಪಾರಸ್ಥರು ಅನಿರ್ದಿಷ್ಟಾವಧಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಎಸ್.ಕೆ ರಹಮತ್ ವುಲ್ಲಾ,ಕೆ.ಭಾರತಿ,ಡಿ.ಮಂಜುಳಾ,ಅಲ್ಲಾಭಕ್ಷಿ,ಧರ್ಮಣ್ಣ,ಮಂಜುನಾಥ್ ಕೈದಾಳೆ, ಕೆ. ಕೃಷ್ಣಮೂರ್ತಿ ಉಪಸ್ಥಿತರಿದ್ದರು.