ಕೋಲ್ಕತ್ತಾ: ಪಶ್ಚಿಮ ಬಂಗಾಳದ ಸೋನಾರ್‌ಪುರದಲ್ಲಿ ಚುನಾವಣೋತ್ತರ ಹಿಂಸಾಚಾರದಿಂದ ಸಂತ್ರಸ್ತರಾದ ಕುಟುಂಬಗಳನ್ನು ಭೇಟಿ ಮಾಡಲು ತೆರಳಿದ್ದ ತೃಣಮೂಲ ಕಾಂಗ್ರೆಸ್ (TMC) ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಬೆಂಗಾವಲು ವಾಹನದ ಮೇಲೆ ಭೀಕರ ದಾಳಿ ನಡೆದಿದೆ. ಶನಿವಾರ ನಡೆದ ಈ ಘಟನೆಯಲ್ಲಿ ಪ್ರತಿಭಟನಾಕಾರರು ಮತ್ತು ಬಿಜೆಪಿ ಕಾರ್ಯಕರ್ತರು ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ಮೊಟ್ಟೆ ಹಾಗೂ ಕಲ್ಲುಗಳನ್ನು ಎಸೆದಿದ್ದಾರೆ ಎನ್ನಲಾಗಿದೆ.
ದಾಳಿಯ ಸಂದರ್ಭದಲ್ಲಿ ಪ್ರತಿಭಟನಾಕಾರರು ಸಂಸದರ ವಿರುದ್ಧ “ಚೋರ್ ಚೋರ್” (ಕಳ್ಳ) ಎಂಬ ಘೋಷಣೆಗಳನ್ನು ಕೂಗಿದ್ದಾರೆ. ದಾಳಿಯಿಂದಾಗಿ ತೀವ್ರ ಉದ್ವಿಗ್ನತೆ ಸೃಷ್ಟಿಯಾಗಿದ್ದು, ಭದ್ರತಾ ಸಿಬ್ಬಂದಿ ಅಭಿಷೇಕ್ ಬ್ಯಾನರ್ಜಿ ಅವರಿಗೆ ಹೆಲ್ಮೆಟ್ ಧರಿಸಿ ಅಲ್ಲಿಂದ ಸುರಕ್ಷಿತವಾಗಿ ಕರೆತಂದಿದ್ದಾರೆ. ದಾಳಿಯಲ್ಲಿ ಸಂಸದರ ಕನ್ನಡಕ ಮುರಿದಿದ್ದು, ಬಟ್ಟೆಗಳನ್ನು ಹರಿದು ಹಾಕಲಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ನಂತರ ತೀವ್ರ ಅಸ್ವಸ್ಥರಾದ ಅಭಿಷೇಕ್ ಬ್ಯಾನರ್ಜಿ ಅವರನ್ನು ಕೋಲ್ಕತ್ತಾದ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದಾರೆ.
ಬಿಜೆಪಿ ಪ್ರಾಯೋಜಿತ ದಾಳಿ – ಅಭಿಷೇಕ್ ಬ್ಯಾನರ್ಜಿ ಆರೋಪ:
“ಇದು ಸಂಪೂರ್ಣವಾಗಿ ಬಿಜೆಪಿ ಪ್ರಾಯೋಜಿತ ದಾಳಿಯಾಗಿದೆ. ನನ್ನನ್ನು ಕೊಲ್ಲುವ ಉದ್ದೇಶದಿಂದಲೇ ಈ ದಾಳಿ ನಡೆಸಲಾಗಿದೆ. ಅದೃಷ್ಟವಶಾತ್ ಹೆಲ್ಮೆಟ್ ಧರಿಸಿದ್ದರಿಂದ ನನ್ನ ತಲೆಗೆ ಪೆಟ್ಟಾಗಿಲ್ಲ. ಈ ಇಡೀ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನಾವು ಹೈಕೋರ್ಟ್ ಮತ್ತು ರಾಜ್ಯಪಾಲರ ಗಮನಕ್ಕೆ ತರಲಿದ್ದೇವೆ” ಎಂದು ಅಭಿಷೇಕ್ ಬ್ಯಾನರ್ಜಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಲ್ಲದೆ, ಸ್ಥಳದಲ್ಲಿ ಪೊಲೀಸರ ಗೈರುಹಾಜರಿಯ ಬಗ್ಗೆಯೂ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಸಿಎಂ ಮಮತಾ ಬ್ಯಾನರ್ಜಿ, ಎಕ್ಸ್ (ಟ್ವಿಟರ್) ಖಾತೆಯಲ್ಲಿ “ಆಡಳಿತಗಾರರೇ ಕೊಲೆಗಡುಕರಾಗಿದ್ದಾರೆ – ನಿಮಗೆ ನಾಚಿಕೆಯಾಗಬೇಕು ಬಿಜೆಪಿ” ಎಂದು ಬರೆದುಕೊಂಡಿದ್ದಾರೆ.
- Abhishek Banerjee attacked
- BJP workers protest
- Kolkata Apollo Hospital
- Mamata Banerjee
- Sonarpur attack
- TMC MP hospitalised
- TMC vs BJP West Bengal
- West Bengal post-poll violence
- ಅಭಿಷೇಕ್ ಬ್ಯಾನರ್ಜಿ ದಾಳಿ
- ಕೋಲ್ಕತ್ತಾ ಅಪೊಲೊ ಆಸ್ಪತ್ರೆ
- ಟಿಎಂಸಿ ಸಂಸದರ ಮೇಲೆ ದಾಳಿ
- ಪಶ್ಚಿಮ ಬಂಗಾಳ ರಾಜಕೀಯ
- ಬಿಜೆಪಿ ಟಿಎಂಸಿ ಸಂಘರ್ಷ
- ಮಮತಾ ಬ್ಯಾನರ್ಜಿ
- ಸೋನಾರ್ಪುರ ಹಿಂಸಾಚಾರ





Leave a comment