SUDDIKSHANA KANNADA NEWS/ DAVANAGERE/ DATE:11-03-2024
ದಾವಣಗೆರೆ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನೂರಕ್ಕೆ ನೂರು ನನಗೆ ಇಲ್ಲವೇ ನನ್ನ ಕುಟುಂಬದವರಿಗೆ ಬಿಜೆಪಿ ಟಿಕೆಟ್ ಸಿಗುತ್ತದೆ ಎಂದು ಲೋಕಸಭಾ ಸದಸ್ಯ ಡಾ. ಜಿ. ಎಂ. ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದರು. ಈ ಮೂಲಕ ಹೊಸ ದಾಳ ಉರುಳಿಸಿದ್ದಾರೆ. ನನಗೆ ಇಲ್ಲವೇ ನನ್ನ ಕುಟುಂಬದ ಯಾರಿಗಾದರೂ ಒಬ್ಬ ಸದಸ್ಯರಿಗೆ ಟಿಕೆಟ್ ಘೋಷಣೆಯಾಗುತ್ತದೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು.
ನಗರದ ಜಯದೇವ ವೃತ್ತದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾನು ಟಿಕೆಟ್ ಘೋಷಣೆ ಆಗುವುದನ್ನು ಕಾಯುತ್ತಿದ್ದೇನೆ. ನಮ್ಮ ಕುಟುಂಬದವರಿಗೆ ಯಾರಿಗಾದರೂ ಕೊಡುತ್ತಾರೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ, ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ನೀಡುವ ತೀರ್ಪು. ಯಾರಿಗೆ ಟಿಕೆಟ್ ನೀಡಿದರೂ ಕೆಲಸ ಮಾಡುತ್ತೇನೆ. ನನಗೆ ಟಿಕೆಟ್ ಕೊಟ್ಟರೂ ಗೆಲುವಿಗೆ ಶ್ರಮಿಸುತ್ತೇನೆ. ಟಿಕೆಟ್ ನೀಡದಿದ್ದರೂ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಮತ್ತು ಅವರ ತಂಡವು ದೆಹಲಿ ಮಟ್ಟದಲ್ಲಿ ಟಿಕೆಟ್ ತಪ್ಪಿಸಲು ಲಾಬಿ ನಡೆಸುತ್ತಿರುವ ಕುರಿತಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಚರ್ಚೆ ಆಗುತ್ತಿರುವುದನ್ನು ಎಲ್ಲರೂ ನೋಡುತ್ತಿದ್ದಾರೆ. ಅವ್ರು ಹಾಗೆ ಹೇಳಬಾರದು ಎಂದು ಹೇಳಲು ಆಗಲ್ಲ. ನಾನು ಎಲ್ಲಿಯೂ ಹೋಗುವುದಿಲ್ಲ. ಜನರ ಬೆಂಬಲ ನನಗೆ ಇದೆ. ವಿಶ್ವಾಸವೂ ಇದೆ. ಸರ್ವೆ ಆದರೆ ನನ್ನ ಪರವಾಗಿಯೇ ವರದಿ ಬರುತ್ತದೆ. ಸಿದ್ದೇಶ್ವರ ಅವರೇ ಬೇಕು ಎಂದು ಕ್ಷೇತ್ರದ ಜನರು ಅಪೇಕ್ಷೆಪಡುತ್ತಿದ್ದಾರೆ. ಅವರು ಹೇಳುವುದು ಅವ್ರು ಹೇಳುತ್ತಾರೆ. ನಾನು ಹೇಳೋದು ಹೇಳ್ತೇನೆ. ಪದೇ ಪದೇ ಅದೇ ಪ್ರಶ್ನೆ ಕೇಳಬೇಡಿ ಎಂದು ತಿರುಗೇಟು ನೀಡಿದರು.