ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Ticket Suspence: ಕಾಂಗ್ರೆಸ್ ನ ಈ ಮೂವರೊಳಗೆ ಒಬ್ಬರಿಗೆ ಟಿಕೆಟ್ ಫಿಕ್ಸ್…? ಹೈಕಮಾಂಡ್ ಲೆಕ್ಕಾಚಾರ ಏನಿದೆ…? ಹೇಗಿದೆ ಗೆಲುವಿಗೆ ರಣತಂತ್ರ…?

On: December 28, 2023 3:40 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:26-12-2023

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆ. ದಾವಣಗೆರೆ ಜಿಲ್ಲೆಯಾಗಿ ಘೋಷಣೆಯಾದ ಬಳಿಕ ನಡೆದಿರುವ ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಮಲ್ಲಿಕಾರ್ಜುನಪ್ಪ ಅವರು ಎರಡು ಬಾರಿ ಹಾಗೂ ಡಾ. ಜಿ. ಎಂ. ಸಿದ್ದೇಶ್ವರ ಅವರು ನಾಲ್ಕು ಬಾರಿ ಬಿಜೆಪಿಯಿಂದ ಕಣಕ್ಕಿಳಿದು ಜಯಭೇರಿ ಬಾರಿಸಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮಣಿಸಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ. ಮಾತ್ರವಲ್ಲ, ಈ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್ ಹೈಕಮಾಂಡ್ ಈ ಮೂವರಲ್ಲಿ ಒಬ್ಬರಿಗೆ ಟಿಕೆಟ್ (Ticket) ನೀಡುವುದು ಪಕ್ಕಾ ಇದೆ ಎಂದು ದೆಹಲಿ ಮೂಲಗಳು ತಿಳಿಸಿವೆ.

Read Also This Story:

ತೆಲಂಗಾಣ ಚುನಾವಣೆಯಲ್ಲಿ ದಾವಣಗೆರೆಯ ಕಾಂಗ್ರೆಸ್ ಯುವ ನಾಯಕ ಕಮಾಲ್ ಮಾಡಿದ್ದೇಗೆ? ಭರವಸೆ ಮೂಡಿಸಿರುವ ನೇತಾರನ ಯಶೋಗಾಥೆ

ಕಳೆದ ಸುಮಾರು 26 ವರ್ಷಗಳಿಂದಲೂ ಬಿಜೆಪಿ ಭದ್ರಕೋಟೆಯಾಗಿರುವ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಜಯದ ಸಿಹಿ ಸಿಕ್ಕೇ ಇಲ್ಲ. ಎಸ್. ಎಸ್. ಮಲ್ಲಿಕಾರ್ಜುನ್ ಅವರು ಕಡಿಮೆ ಅಂತರದಲ್ಲಿ ಪರಾಜಯಗೊಂಡಿದ್ದರೂ ಗೆಲುವು ಸಾಧಿಸಲು ಆಗಿಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮಣಿಸಲು ಕಾಂಗ್ರೆಸ್ ರಣವ್ಯೂಹ ರಚಿಸಿದೆ. ಹರಪನಹಳ್ಳಿ ಸೇರಿದಂತೆ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರನ್ನು ಹೊಂದಿದೆ. ಹರಿಹರದಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. ಹಾಗಾಗಿ, ಹೆಚ್ಚು ಶಾಸಕರಿರುವ ಕಾರಣಕ್ಕೆ ಗೆಲ್ಲಲೇಬೇಕು ಎಂಬ ಸೂಚನೆಯನ್ನು ಕಾಂಗ್ರೆಸ್ ಹೈಕಮಾಂಡ್ ಹೇಳಿದೆ.

ಡಾ. ಪ್ರಭಾ ಮಲ್ಲಿಕಾರ್ಜುನ್:

ಬಿಜೆಪಿ ಮಣಿಸಲು ಕಾಂಗ್ರೆಸ್ ನಿಂದ ಪ್ರಭಾ ಮಲ್ಲಿಕಾರ್ಜುನ್ ಸ್ಪರ್ಧೆ ಮಾಡಿದರೆ ತೀವ್ರ ಪೈಪೋಟಿ ನೀಡಬಹುದು ಎಂಬ ಲೆಕ್ಕಾಚಾರವೂ ಇದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಭಾ ಮಲ್ಲಿಕಾರ್ಜುನ್ ಅವರು ಪ್ರಚಾರ ನಡೆಸಿದ ರೀತಿ, ಜನರ ತಲುಪಿದ, ಮನವೊಲಿಸಿದ, ಕಾಂಗ್ರೆಸ್ ಪರ ಪ್ರಚಾರ ನಡೆಸಿದ ಬಗೆಯೂ ಗಮನ ಸೆಳೆದಿದೆ. ಸೌಮ್ಯ ಸ್ವಭಾವದ, ಜನರ ಕಷ್ಟಕ್ಕೆ ಸ್ಪಂದಿಸುವ ಮೂಲಕ ಜನರ ಮನದಲ್ಲಿ ನೆಲೆಸಿರುವ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮಾವ ಶಾಮನೂರು ಶಿವಶಂಕರಪ್ಪ ಹಾಗೂ ಪತಿ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಬೆಂಬಲ ಇದೆ. ಜೊತೆಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಂಘಟಿತರಾಗಿ ಕೆಲಸ ಮಾಡಿದರೆ ಗೆಲುವು ಕಷ್ಟವಾಗದು ಎಂಬ ಲೆಕ್ಕಾಚಾರವೂ ಅಡಗಿದೆ.

ಸಾಧು ಲಿಂಗಾಯತ ಸಮುದಾಯದವರಾಗಿರುವ ಕಾರಣ ಹಾಗೂ ಕಾಂಗ್ರೆಸ್ ನ ಸಾಂಪ್ರಾದಾಯಿಕ ಮತಗಳ ಜೊತೆ ಅಹಿಂದ ಮತಗಳೂ ಬಂದರೆ ಗೆಲುವು ಕಷ್ಟ ಸಾಧ್ಯವಾಗಲ್ಲ ಎಂಬುದು ಹೈಕಮಾಂಡ್ ಲೆಕ್ಕಾಚಾರ. ಹಾಗಾಗಿ, ಪ್ರಭಾ ಮಲ್ಲಿಕಾರ್ಜುನ್ ಇಲ್ಲವೇ ಎಸ್. ಎಸ್. ಮಲ್ಲಿಕಾರ್ಜುನ್ ಅವರನ್ನು ಕಣಕ್ಕಿಳಿಸಿ ಕ್ಷೇತ್ರ ಮತ್ತೆ ಕೈ ತೆಕ್ಕೆಗೆ ತೆಗೆದುಕೊಳ್ಳುವ ಪ್ಲ್ಯಾನ್ ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.

ವಿನಯ್ ಕುಮಾರ್:

ಇನ್ನು ಇನ್ ಸ್ಟ್ಯಾಟ್ ಐಎಎಸ್ ಕೋಚಿಂಗ್ ಸೆಂಟರ್ ಮೂಲಕ ಚಿರಪರಿಚಿತವಾಗಿರುವ ವಿನಯ್ ಕುಮಾರ್ ಅವರೂ ಸಹ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಕುರುಬ ಸಮುದಾಯದ ಜೊತೆಗೆ ಅಹಿಂದ ಮತಗಳು ಕಾಂಗ್ರೆಸ್ ಗೆ ಬಂದರೆ ಗೆಲುವು ಸಾಧ್ಯ ಎಂಬ ಲೆಕ್ಕಾಚಾರವೂ ಇದೆ. ಯುವ ನಾಯಕರಾಗಿ ಗುರುತಿಸಿಕೊಂಡಿರುವ ವಿನಯ್ ಕುಮಾರ್ ಅವರು ವಿದ್ಯಾವಂತರು, ವಿದ್ಯಾಸಂಸ್ಥೆ ಮೂಲಕ ಬಡವರು, ಹಿಂದುಳಿದವರು ಸೇರಿದಂತೆ ಎಲ್ಲಾ ವರ್ಗದವರಿಗೆ ನೆರವು ನೀಡುತ್ತಿದ್ದಾರೆ.
ವಿಕಲಚೇತನರಿಗೆ ಸೈಕಲ್, ವ್ಹೀಲ್ ಚೇರ್ ಗಳು, ಬಡವರ ಕಷ್ಟಕ್ಕೆ ಸ್ಪಂದಿಸುವ, ಶಾಲಾ ಮಕ್ಕಳಿಗೆ ನೆರವು, ವೈಯಕ್ತಿಕ ಹಾಗೂ ಸಂಸ್ಥೆಯಿಂದ ಆದಷ್ಟು ಸಹಾಯ ಮಾಡುವ ಮೂಲಕ ಯುವಕರ ಕಣ್ಮಣಿ ಎನಿಸಿಕೊಂಡಿದ್ದಾರೆ.

ಈಗಾಗಲೇ ಪಾದಯಾತ್ರೆ ನಡೆಸುತ್ತಿರುವ ವಿನಯ್ ಕುಮಾರ್ ಅವರು ಕಕ್ಕರಗೊಳ್ಳದವರು. ದಾವಣಗೆರೆಯವರೇ. ಹೊರಗಿನವರಲ್ಲ. ಚನ್ನಯ್ಯ ಒಡೆಯರ್ ನಂತರ ದಾವಣಗೆರೆ ಲೋಕಸಭೆ ಕ್ಷತ್ರದಲ್ಲಿ ಕಾಂಗ್ರೆಸ್ ಗೆದ್ದಿಲ್ಲ. ಸತತವಾಗಿ ಮೂರು ಬಾರಿ ಕಾಂಗ್ರೆಸ್ ನಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್ ಆಗಲೀ, ಬಿಜೆಪಿಯಾಗಲೀ ಚನ್ನಯ್ಯ ಒಡೆಯರ್ ಹೊರತುಪಡಿಸಿದರೆ ಉಳಿದಂತೆ ಲಿಂಗಾಯತ ಸಮುದಾಯವದರೇ ಜಯ ಗಳಿಸಿದ್ದಾರೆ. ಹಾಗಾಗಿ, ಈ ಬಾರಿ ವಿನಯ್ ಕುಮಾರ್ ಅವರಿಗೆ ಟಿಕೆಟ್ ನೀಡಿದರೆ ಯುವಕರಾಗಿದ್ದು, ಉತ್ಸಾಹಿಗಳಾಗಿದ್ದಾರೆ. ಭಾಷಾ ಜ್ಞಾನವೂ ಇದೆ. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿರುವ ವಿನಯ್ ಕುಮಾರ್ ಅವರು ಜನರಿಗಾಗಿ ಒಳಿತು ಮಾಡುತ್ತಾರೆ. ಕೇವಲ ಕುರುಬ ಸಮುದಾಯದ ಮಾತ್ರವಲ್ಲ, ಉಳಿದ ಎಲ್ಲಾ ಸಮುದಾಯಗಳ ವಿಶ್ವಾಸ ಗಳಿಸಿದ್ದೇ ಆದಲ್ಲಿ ಮತಗಳಾಗಿ ಪರಿವರ್ತನೆ
ಆಗುತ್ತವೆ. ಆರು ಬಾರಿ ದಾವಣಗೆರೆ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದ್ದರೂ ವಿನಯ್ ಕುಮಾರ್ ಗೆ ಟಿಕೆಟ್ ಕೊಟ್ಟರೆ ಯುವಕರು ಬೆಂಬಲಿಸುತ್ತಾರೆ. ಅವರ ಕಾರ್ಯಕ್ರಮಗಳು, ಆಲೋಚನೆಗಳು, ದಾವಣಗೆರೆ ಜಿಲ್ಲೆಯ ಅಭಿವೃದ್ಧಿ ಯೋಜಿಸಿರುವ ಯೋಜನೆಗಳು ಸೇರಿದಂತೆ ಅವರ ಕಾರ್ಯವೈಖರಿಯೂ ಎಲ್ಲರ ಗಮನ ಸೆಳೆಯುತ್ತಿದೆ.

ಸಿಎಂ ಸಿದ್ದರಾಮಯ್ಯರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ವಿನಯ್ ಕುಮಾರ್ ಅವರು, ಸಾಮಾಜಿಕ ಸೇವೆ ಮತ್ತು ಜನಸಂಪರ್ಕದ ಮೂಲಕ ಜಿಲ್ಲೆಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಕಾಂಗ್ರೆಸ್ ನ ಪ್ರಯೋಗದಲ್ಲಿ ವಿನಯ್ ಕುಮಾರ್ ಅವರ ಹೆಸರು ಮುಂಚೂಣಿಯಲ್ಲಿದೆ. ಯಾಕೆಂದರೆ ಯುವಕರನ್ನು ಸೆಳೆಯುತ್ತಿರುವ, ಜನರ ಬಳಿಗೆ ಹೋಗುತ್ತಿರುವ ರೀತಿ, ಜನರೊಟ್ಟಿಗೆ ಸ್ಪಂದಿಸುವ, ಸಹಾಯ ಮಾಡುವ ಗುಣವೂ ಇದಕ್ಕೆ ಕಾರಣ.

ಹೆಚ್. ಬಿ. ಮಂಜಪ್ಪ:

ಚನ್ನಯ್ಯ ಒಡೆಯರ್ ನಂತರ 2019ರಲ್ಲಿ ಕುರುಬ ಸಮುದಾಯದ ಹೆಚ್. ಬಿ. ಮಂಜಪ್ಪರಿಗೆ ಟಿಕೆಟ್ ನೀಡಿದ್ದರೂ ಒಂದೂವರೆ ಲಕ್ಷಕ್ಕೂ ಅಧಿಕ ಮತಗಳಿಂದ ಪರಾಭವಗೊಂಡರು. ಪ್ರಧಾನಿ ನರೇಂದ್ರ ಮೋದಿ ಅಲೆ, ಟಿಕೆಟ್ ತಡವಾಗಿ ಸಿಕ್ಕಿದ್ದು ಸೇರಿದಂತೆ ಹಲವು ಕಾರಣಗಳಿಂದ ಸೋಲು ಕಂಡರು. ಸಿಕ್ಕ ಅಲ್ಪ ಅವಧಿಯಲ್ಲಿ ನಾಲ್ಕೂವರೆ ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದು ತೀವ್ರ ಪೈಪೋಟಿ ನೀಡಿದ್ದರು.

ಹೆಚ್. ಬಿ. ಮಂಜಪ್ಪ ಅವರು ಲೋಕಸಭೆ ಚುನಾವಣೆ ಎದುರಿಸಿದ್ದಾರೆ. ಕುರುಬ ಸಮುದಾಯಕ್ಕೆ ಸೇರಿದವರು. ಹೊನ್ನಾಳಿ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ತ್ಯಾಗ ಮಾಡಿದರು. ಡಿ. ಜಿ. ಶಾಂತನಗೌಡರಿಗೆ ಟಿಕೆಟ್ ನೀಡಿದರೂ ಅವರ ಗೆಲುವಿಗೆ ಶ್ರಮಿಸಿದ್ದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರೂ ಹೌದು. ಶಾಮನೂರು ಶಿವಶಂಕರಪ್ಪ ಹಾಗೂ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಹೆಚ್. ಬಿ. ಮಂಜಪ್ಪ ಅವರೂ ಸಹ ಲೋಕಸಭೆ ಚುನಾವಣೆಗೆ ಟಿಕೆಟ್ ಸಿಕ್ಕರೆ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ.

ಅರ್ಜಿ ಸಲ್ಲಿಸಿರುವವರು ಯಾರು…?

ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ವಿನಯ್ ಕುಮಾರ್, ಹೆಚ್. ಬಿ. ಮಂಜಪ್ಪ, ಹರಿಹರ ಮಾಜಿ ಶಾಸಕ ಎಸ್. ರಾಮಪ್ಪ, ಜಗಳೂರಿನ ಕಲ್ಲೇಶ್ ರಾಜ್ ಪಾಟೀಲ್ ಸೇರಿದಂತೆ ಕೆಲವರು ಅರ್ಜಿ ಸಲ್ಲಿಸಿದ್ದಾರೆ. ಆದ್ರೆ, ಪ್ರಭಾ ಮಲ್ಲಿಕಾರ್ಜುನ್ ಅವರು ಸ್ಪರ್ಧೆ ಮಾಡುವ ಕುರಿತಂತೆ ದಾವಣಗೆರೆಗೆ ಬಂದಿದ್ದ ವೀಕ್ಷಕ ಈಶ್ವರ್ ಖಂಡ್ರೆಯವರಿಗೆ ಅರ್ಜಿ ಸಲ್ಲಿಸಿರುವ ಕುರಿತಂತೆ ಮಾಹಿತಿ ಇಲ್ಲ. ಹೈಕಮಾಂಡ್ ಗೆ ಅರ್ಜಿ ಸಲ್ಲಿಸಿರುವ ಕುರಿತಂತೆಯೂ ಸ್ಪಷ್ಟ ಮಾಹಿತಿ ಇಲ್ಲ. ಕೆಲವರು ಹೇಳುವ ಪ್ರಕಾರ ಅರ್ಜಿ ಸಲ್ಲಿಸಿದ್ದಾರೆ ಎಂಬುದು. ಮತ್ತೆ ಕೆಲವರು ಅರ್ಜಿ ಸಲ್ಲಿಸಿಲ್ಲ ಎನ್ನುತ್ತಾರೆ. ಹಾಗಾಗಿ, ಈ ವಿಚಾರದಲ್ಲಿ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಅಂತಿಮವಾಗಿ ಪ್ರಭಾ ಮಲ್ಲಿಕಾರ್ಜುನ್, ವಿನಯ್ ಕುಮಾರ್, ಹೆಚ್. ಬಿ. ಮಂಜಪ್ಪರ ಹೆಸರು ದೆಹಲಿ ಮಟ್ಟದಲ್ಲಿ ಚರ್ಚೆಯಾಗಿದೆ. ಎಸ್. ಎಸ್. ಮಲ್ಲಿಕಾರ್ಜುನ್ ಅವರು ಇಚ್ಚಿಸಿದ್ದಲ್ಲಿ ಹೈಕಮಾಂಡ್ ಟಿಕೆಟ್ ನೀಡಲಿದೆ. ಈಗಾಗಲೇ ಸಚಿವರಾಗಿರುವ ಕಾರಣ ಅವರು ಸ್ಪರ್ಧೆ ಇಳಿಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಆದರೂ ಹೈಕಮಾಂಡ್ ಹಠ ಹಿಡಿದರೆ, ಸ್ಪರ್ಧಿಸಲೇಬೇಕೆಂಬ ಸೂಚನೆ ನೀಡಿದರೆ ಅನಿವಾರ್ಯವಾಗಿ ಕಣಕ್ಕಿಳಿಯಬೇಕಾಗುತ್ತದೆ. ಒಟ್ಟಿನಲ್ಲಿ ಪ್ರಭಾ ಮಲ್ಲಿಕಾರ್ಜುನ್, ವಿನಯ್ ಕುಮಾರ್ ಹಾಗೂ ಹೆಚ್. ಬಿ. ಮಂಜಪ್ಪ ಅವರ ಹೆಸರು ಚರ್ಚೆಯ ಹಂತಕ್ಕೆ ಹೋಗಿರುವುದಂತೂ ನಿಜ. ಈ ಮೂವರಲ್ಲಿ ಒಬ್ಬರಿಗೆ ಟಿಕೆಟ್ ಸಿಗಲಿದೆ ಎಂದು ದೆಹಲಿಯ ಕಾಂಗ್ರೆಸ್ ಮೂಲಗಳು ತಿಳಿಸಿದ್ದು, ಬೇರೆ ಯಾರಿಗಾದರೆ ಟಿಕೆಟ್ ಸಿಕ್ಕರೆ ಪವಾಡವೇ ಸರಿ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment