SUDDIKSHANA KANNADA NEWS/ DAVANAGERE/ DATE:22-02-2024
ದಾವಣಗೆರೆ: ಅಡಿಕೆ ಬೆಳೆ ದರ ದಿನ ಕಳೆದಂತೆ ಕುಸಿಯುತ್ತಿದೆ. ಕಳೆದ ಹದಿನೈದು ದಿನಗಳಲ್ಲಿ ಬರೋಬ್ಬರಿ 2300 ರೂಪಾಯಿ ಪ್ರತಿ ಕ್ವಿಂಟಲ್ ಗೆ ಕುಂಠಿತವಾಗಿದೆ. ಇದರಿಂದ ಅಡಿಕೆ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.
ಈ ಬಾರಿ ಬರಗಾಲ ತಲೆದೋರಿದೆ. ಒಂದೆಡೆ ನೀರಿಲ್ಲ. ಮತ್ತೊಂದೆಡೆ ತೋಟಗಳನ್ನು ಉಳಿಸಿಕೊಳ್ಳಲು ಅಡಿಕೆ ಬೆಳೆಗಾರರು ಪರದಾಡುತ್ತಿರುವ ದೃಶ್ಯ ಕಂಡು ಬರುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಂತೂ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಅಡಿಕೆ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಈ ನಡುವೆ ಅಡಿಕೆ ಧಾರಣೆ ಕುಸಿತಗೊಳ್ಳಲು ಅಕ್ರಮವಾಗಿ ಅಡಿಕೆ ಆಮದು ಮಾಡಿಕೊಳ್ಳುತ್ತಿರುವುದೇ ಕಾರಣ ಎಂಬ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ.
ಕರಾವಳಿ ಭಾಗದ ಕೃಷಿಕರ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ. ಅದೇ ರೀತಿಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿಯೂ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ. ಚನ್ನಗಿರಿ ಭಾಗದಲ್ಲಂತೂ ಯಥೇಚ್ಛವಾಗಿ ಬೆಳೆಯಲಾಗುತ್ತಿದೆ. ಇಲ್ಲಿನ ರೈತರಿಗೆ ಅಡಿಕೆಯೇ ಆಧಾರ. ಕಳೆದ ವರ್ಷ ಜುಲೈ ತಿಂಗಳಿನಲ್ಲಿ 57 ಸಾವಿರ ರೂಪಾಯಿ ಪ್ರತಿ ಕ್ವಿಂಟಲ್ ಅಡಿಕೆ ವಹಿವಾಟು ನಡೆದಿತ್ತು. ಆದ್ರೆ, ಈ ವರ್ಷ 47 ಸಾವಿರ ರೂಪಾಯಿ ಆಸುಪಾಸಿನಲ್ಲಿದೆ. ಬರೋಬ್ಬರಿ ಹತ್ತು ಸಾವಿರ ರೂಪಾಯಿ ಒಂದು ಕ್ವಿಂಟಲ್ ಅಡಿಕೆಗೆ ಕಡಿಮೆಯಾಗಿದೆ. ಇದರಿಂದಾಗಿ ಸಣ್ಣ, ಮಧ್ಯಮ ರೈತರು ನಷ್ಟ ಅನುಭವಿಸಿದ್ದಾರೆ. ಈ ಬಾರಿ ಅಡಿಕೆ ಇಳುವರಿ ಕಡಿಮೆ ಬಂದಿದೆ.
ಒಂದು ಎಕರೆಗೆ ಕೇವಲ ಐದು ಕ್ವಿಂಟಲ್ ಅಡಿಕೆ ಆಗಿದೆ. ಅಂದರೆ ಒಂದು ಎಕರೆ ಹೊಂದಿದವರು 50 ಸಾವಿರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಬೆಳೆಯೂ ಕಡಿಮೆ, ಧಾರಣೆಯೂ ಕುಸಿತ, ಅಡಿಕೆ ಗಿಡಗಳು ಒಣಗುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ರೈತರು ದುಬಾರಿ ಹಣ ಕೊಟ್ಟು, ಅಕ್ರಮವಾಗಿ ಪಂಪ್ ಸೆಟ್ ಹಾಕಿ ತೋಟಗಳಿಗೆ ನೀರುಣಿಸಬೇಕಾಗಿದೆ. ಜಿಲ್ಲಾಡಳಿತವು ಅಕ್ರಮವಾಗಿ ಪಂಪ್ ಸೆಟ್ ಅಳವಡಿಸಿರುವುದನ್ನು ತೆಗೆದು ಹಾಕಲಾಗುತ್ತಿದೆ. ಹಾಗಾಗಿ, ತೋಟ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ.
ಅಡಿಕೆಗೆ ಮತ್ತೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಭೀತಿ ಎದುರಾಗಿದೆ. ವಿದೇಶಗಳಿಂದ ಅಕ್ರಮವಾಗಿ ಅಡಿಕೆ ಕರಾವಳಿ ಮಾರುಕಟ್ಟೆಗಳಿಗೆ ಆಗಮಿಸುತ್ತಿರುವುದೇ ಈ ಆತಂಕಕ್ಕೆ ಕಾರಣ. ಅತ್ಯಂತ ಹೆಚ್ಚು ಗುಣಮಟ್ಟದ ಅಡಿಕೆ ಬೆಳೆಯುವ ಪ್ರದೇಶವಾದ ಮಲೆನಾಡು, ಬಯಲಸೀಮೆ ಹಾಗೂ ಮಧ್ಯಕರ್ನಾಟಕ, ಕರಾವಳಿ ಭಾಗದ ಅಡಿಕೆಗೆ ಉತ್ತರ ಭಾರತದ ಹಲವೆಡೆ ಭಾರೀ ಬೇಡಿಕೆಯಿದೆ. ಈ ಬೇಡಿಕೆಗಳಿಗೆ ಅನುಗುಣವಾಗಿ ಕರಾವಳಿ ಭಾಗದ ಕೃಷಿಕರು ಅಡಿಕೆ ಬೆಳೆಯನ್ನು ಬೆಳೆಯುತ್ತಿದ್ದು, ಕೊರೊನಾ ಲಾಕ್ ಡೌನ್ ಬಳಿಕ ಅಡಿಕೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಧಾರಣೆ ಲಭಿಸುತ್ತಿತ್ತು. ಕೆಜಿ ಗೆ 500 ರೂಪಾಯಿ ಗಡಿದಾಟಿದ್ದ ಅಡಿಕೆ ಬೆಲೆ ಇದೀಗ ನಿಧಾನವಾಗಿ ಕುಸಿಯಲಾರಂಭಿಸುತ್ತಿದೆ.
ಹಳೆ ಅಡಿಕೆ ಬೆಲೆ ಕೆಜಿಗೆ 46ರಿಂದ 48 ರೂಪಾಯಿ ಆಸುಪಾಸಿನಲ್ಲಿದೆ. ಆದರೆ ಬರ್ಮಾ ಹಾಗೂ ಇತರ ಕಡೆಗಳಲ್ಲಿ ಇದೇ ರೀತಿಯ ಅಡಿಕೆಯನ್ನು ಬೆಳೆಯಲಾಗುತ್ತಿದ್ದು, ದೇಶೀ ಮಾರುಕಟ್ಟೆಗೆ ಹೋಲಿಸಿದರೆ, ಅದರ ಬೆಲೆ ತೀರ ಕಡಿಮೆಯಾಗಿದೆ. ಈ ಅಡಿಕೆಯನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲು ಹಲವು ನಿಬಂಧನೆಗಳಿದ್ದರೂ, ಹೆಚ್ಚಿನ ಲಾಭಗಳಿಸುವ ಉದ್ಧೇಶದಿಂದ ಅಡಿಕೆ ಖರೀದಿದಾರರು ವಿದೇಶಿ ಅಡಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದ್ದಾರೆ.
ಹೀಗೆ ಆಮದಾಗುವ ಅಡಿಕೆಗಳಲ್ಲಿ ಕೆಲವು ಮಾತ್ರ ತೆರಿಗೆ ಕಟ್ಟಿ ದೇಶಿ ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದು, ಅದಕ್ಕಿಂತ ದುಪ್ಪಟ್ಟು ಪ್ರಮಾಣದ ಅಡಿಕೆ ಅಕ್ರಮವಾಗಿ ಆಮದಾಗುತ್ತಿದೆ.ಈ ಅಡಿಕೆಯನ್ನು ದಕ್ಷಿಣ ಕನ್ನಡ ಭಾಗದಲ್ಲಿ ಬೆಳೆಯುವ ಉತ್ತಮ ಗುಣಮಟ್ಟದ ಅಡಿಕೆಯೊಂದಿಗೆ ಬೆರೆಸಿ ಉತ್ತರ ಭಾರತಕ್ಕೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ದಕ್ಷಿಣಕನ್ನಡ ಜಿಲ್ಲೆಯ ಅಡಿಕೆಯ ಗುಣಮಟ್ಟವೂ ಕುಸಿಯುವ ಜೊತೆಗೆ ಬೆಲೆಯೂ ಕುಸಿಯುವ ಆತಂಕವಿದೆ.
ಅಡಿಕೆ ಮಾರುಕಟ್ಟೆಯಲ್ಲಿ ಸಣ್ಣ ಬದಲಾವಣೆಗಳಾದರೂ, ಅದು ನೇರವಾಗಿ ಅಡಿಕೆ ಬೆಳೆಗಾರನ ಬದುಕಿನ ಮೇಲೆ ಪ್ರಭಾವ ಬೀರುತ್ತದೆ. ಅಲ್ಲದೆ ಜಿಲ್ಲೆಯ ಬಹುತೇಕ ವಹಿವಾಟುಗಳಲ್ಲಿ ಅಡಿಕೆಯ ಪಾತ್ರವೂ ಪ್ರಮುಖವಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಅಡಿಕೆ ಬೆಳೆಗಾರರ ಹಿತ ಕಾಯಬೇಕಿದೆ ಎಂದು ರೈತರು ಒತ್ತಾಯಿಸಿದ್ದಾರೆ.