SUDDIKSHANA KANNADA NEWS/ DAVANAGERE/ DATE:03-02-2025
ದಾವಣಗೆರೆ: ಕೆಟ್ಟ ವ್ಯವಸ್ಥೆ ವಿರುದ್ಧ ದಂಗೆ ಏಳುವುದು ಕ್ರಾಂತಿ ಅಲ್ಲ. ನಮ್ಮೊಳಗೆ ಧೈರ್ಯ, ಉತ್ತಮ ಗುಣಗಳು, ಗಟ್ಟಿ ನಿರ್ಧಾರ ತೆಗೆದುಕೊಳ್ಳುವ, ಸ್ವಾಭಿಮಾನಿಗಳಾಗಿ ಬದುಕುತ್ತೇವೆಂಬ ನಿಲುವು ಹೊಂದುವ ಕ್ರಾಂತಿ ಆಗಬೇಕು. ಅರಿವು ಮತ್ತು ಜಾಗೃತಿ ಬೆಳೆಸಿಕೊಳ್ಳುವ ಕ್ರಾಂತಿ ಆಗಬೇಕಿದೆ ಎಂದು ಇನ್ ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕರೂ ಆದ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಹೇಳಿದರು.
ಹೊನ್ನಾಳಿ ಪಟ್ಟಣದ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಸ್ವಾಭಿಮಾನಿ ಬಳಗವು ಶ್ರೀ ಚನ್ನಪ್ಪ ಸ್ವಾಮಿ ಜನಕಲ್ಯಾಣ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಪಿಯುಸಿ, ಡಿಗ್ರಿ, ಐಟಿಐ ಹಾಗೂ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ದಿಕ್ಸೂಚಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜ್ಞಾನದ ರೂಪದಲ್ಲಿ ಹೆಚ್ಚಾಗಿ ತಿಳಿದುಕೊಳ್ಳಿ. ಉತ್ತಮ ವ್ಯಕ್ತಿತ್ವ ಬೆಳೆಸಿಕೊಂಡು ಹತೋಟಿಯಲ್ಲಿಟ್ಟುಕೊಂಡಾಗ ಸಮಾಜದಲ್ಲಿರುವ ದೊಡ್ಡ ದೊಡ್ಡ ವ್ಯಕ್ತಿಗಳು, ಶ್ರೀಮಂತರು, ಖ್ಯಾತನಾಮರು, ಅಧಿಕಾರದಲ್ಲಿರುವವರು ನಿಮಗೆ ಅವಕಾಶ ಕಲ್ಪಿಸುತ್ತಾರೆ. ಬಡತನ ಇದೆ, ಬೆಂಬಲ ಇಲ್ಲ. ಹಣವಿಲ್ಲ ಎಂದು ಕೊರಗಬೇಡಿ. ನಿಮ್ಮೊಂದಿಗೆ ಯಾರಾದರೂ ಸಹಾಯಕ್ಕೆ ಬಂದೇ ಬರುತ್ತಾರೆ. ನೀವೆಲ್ಲರೂ ಮನಸ್ಸು ಭವಿಷ್ಯದಲ್ಲಿ ಅಂಬೇಡ್ಕರ್ ರಂತೆ ಸಾಧಕರಾಗಬಹುದು ಎಂದು ಕಿವಿಮಾತು ಹೇಳಿದರು.
ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅನುಭವಿಸಿದ ನೋವು, ಯಾತನೆ, ಅಸ್ಪೃಶ್ಯತೆ ಸೇರಿದಂತೆ ಎಲ್ಲಾ ವಿಚಾರಗಳು ಓದಿ ತಿಳಿದಿದ್ದೇವೆ. ಇಂದಿನ ದಿನಮಾನಗಳಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ಕರೂ ಅಂಬೇಡ್ಕರ್ ರಂಥ ಮಹನೀಯರು ಅನುಭವಿಸಿದ ಕಷ್ಟಗಳು ದೂರವಾಗಿಲ್ಲ ಎಂದೆನಿಸುತ್ತದೆ. ಸ್ವಾತಂತ್ರ್ಯ ಸಿಕ್ಕರೂ ಅಸಮಾನತೆ ಇಂದಿಗೂ ತಾಂಡವವಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ ಸೈಟ್ಸ್ ಐಎಎಸ್ ಸಂಸ್ಥೆಯು ಇಂದು ದೇಶದಲ್ಲಿ ಗುರುತಿಸಿಕೊಳ್ಳುವಂತೆ ಆಗಿದೆ. ದೆಹಲಿ, ಹೈದರಾಬಾದ್, ಜಮ್ಮು ಕಾಶ್ಮೀರದ ಶ್ರೀನಗರ, ಬೆಂಗಳೂರು ಹಾಗೂ ದಾವಣಗೆರೆಯಲ್ಲಿಯೂ ತನ್ನ ಶಾಖೆ ಹೊಂದಿದೆ. ಲಕ್ಷಾಂತರ ವಿದ್ಯಾರ್ಥಿಗಳೊಂದಿಗೆ ಒಡನಾಟ ಇದೆ. ಸಾವಿರಾರು ವಿದ್ಯಾರ್ಥಿಗಳು ಐಎಎಸ್ ಟಾಪರ್ ಆಗಿದ್ದಾರೆ. 2016ರಲ್ಲಿ ದೇಶಕ್ಕೆ ರ್ಯಾಂಕ್ ಬಂದ ಕೋಲಾರದ ನಂದಿನಿ ಈಗ ಮಂಡ್ಯ ಜಿಲ್ಲಾ ಪಂಚಾಯಿಸಿ ಸಿಇಒ ಆಗಿದ್ದಾರೆ. ಕಷ್ಟಪಟ್ಟು ಸಾಧಿಸಲೇಬೇಕೆಂಬ ಹಠ ತೊಟ್ಟರೆ ಯಾವುದೂ ಅಸಾಧ್ಯವಲ್ಲ ಎಂದು ಅಭಿಪ್ರಾಯಪಟ್ಟರು.
ಹೊನ್ನಾಳಿಯಲ್ಲಿ ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆ ಅಭಿಯಾನ ನಡೆಸಿದ್ದೇವೆ. 25ರಿಂದ 30 ಶಾಲೆಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ಪರಾಮರ್ಶಿಸಿ ಅಧ್ಯಯನ ಮಾಡಿದ್ದೇವೆ. ಪ್ರತಿಯೊಂದು ಶಾಲೆಗೆ ಹೋದಾಗ ಕಾರ್ಯನಿರತ ಗ್ರಂಥಾಲಯ, ಶೌಚಾಲಯಗಳು ಇಲ್ಲದಿರುವುದು ಕಂಡು ಬಂದಿದೆ. ನಾಲ್ಕೈದು ಶಾಲೆಗಳನ್ನು ಬಿಟ್ಟರೆ ಉಳಿದ ಶಾಲೆಗಳಲ್ಲಿ ಆಟದ ಮೈದಾನಗಳೇ ಇಲ್ಲ. ಕುಳಿತುಕೊಳ್ಳಲು ಡೆಸ್ಕ್ ಗಳಿಲ್ಲ. ಎಷ್ಟೋ ವಿದ್ಯಾರ್ಥಿಗಳ ಕಾಲಲ್ಲಿ ಚಪ್ಪಲಿ, ಶೂ ಇರಲಿಲ್ಲ. ಸಮವಸ್ತ್ರವೂ ಹರಿದು ಹೋಗಿತ್ತು. ಸರ್ಕಾರಿ ಶಾಲೆಗಳ ಪರಿಸ್ಥಿತಿ ಈ ಮಟ್ಟಕ್ಕೆ ಬಂದು ತಲುಪಿದೆ. ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಮೂರನೇ ತರಗತಿಯ ಇಂಗ್ಲೀಷ್ ಪಠ್ಯ ಓದಲು ಬರಲ್ಲ. ಏಳನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ ಓದಲು ಬರಲ್ಲ ಎಂಬ ವರದಿ ಬಂದಿದೆ. ಯಾವ ರೀತಿಯ ಶಿಕ್ಷಣ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಸಿಗುತ್ತಿದೆ ಎಂಬುದು ಜ್ವಲಂತ ಉದಾಹರಣೆ ಎಂದು ಹೇಳಿದರು.
ಲಕ್ಷಾಂತರ ಕೋಟಿ ರೂಪಾಯಿ ಹೊಂದಿರುವ ಶ್ರೀಮಂತರು ಹಾಗೂ ಬಡವನು ಹಾಕುವ ವೋಟಿಗೆ ರಾಜಕೀಯದಲ್ಲಿ ಸಮಾನಾದ ಮೌಲ್ಯವಿದೆ. ಇದು ಭಾರತದ ಸಂವಿಧಾನ ನಮಗೆ ಕೊಟ್ಟಿರುವ ಹಕ್ಕು. ನಮ್ಮಿಂದ ಆರಿಸಿ ಹೋಗುವವರು ಕೊಟ್ಟ ಭರವಸೆ, ತಮ್ಮ ಕರ್ತವ್ಯ ಮರೆಯುತ್ತಿದ್ದಾರೆ. ಜನಪರ, ಶೈಕ್ಷಣಿಕವಾಗಿ ಕೆಲಸ ಮಾಡದೇ ಮರೆಯುತ್ತಿದ್ದಾರೆ. ಶ್ರೀಮಂತರಿಗೆ ಸಿಗುವ ಸೌಲಭ್ಯಗಳು ಬಡವರ ಮಕ್ಕಳಿಗೂ ಸಿಗುವಂತಾಗಬೇಕು ಎಂಬುದು ಅವರ ಮನಸ್ಸಿನಲ್ಲಿ ಬರಬೇಕು ಎಂದು ಅಭಿಪ್ರಾಯಪಟ್ಟರು.
ಹಿರೇಕಲ್ಮಠದ ಡಾ. ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸ್ವಾಭಿಮಾನಿ ಬಳಗದ ರಾಜ್ಯ ಉಪಾಧ್ಯಕ್ಷ ಶಿವಕುಮಾರ್ ಶೆಟ್ಟರ್, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಮೌರ್ಯ, ರಾಜ್ಯ ಸಂಘಟನಾ ಕಾರ್ಯದರ್ಶಿ ವಿರೂಪಾಕ್ಷಪ್ಪ ಪಂಡಿತ್, ರಾಜಣ್ಣ ಕನಗಣ್ಣನವರ್, ಹಿರಿಯರಾದ ಶಿವಕುಮಾರ್ ಸಂಬಳಿ, ರಾಜ್ಯ ಸಂಚಾಲಕ ಅಯ್ಯಣ್ಣ ಹುಲ್ಕಲ್, ಸ್ವಾಭಿಮಾನಿ ಬಳಗದ ಸದಸ್ಯರು, ಪದಾಧಿಕಾರಿಗಳಾದ ರಮೇಶ್ ಮೈಸೂರು, ಧನುಷ್ ಕತ್ತಲಗೆರೆ, ನಾಗರಾಜ್ ಹಲವರು ಉಪಸ್ಥಿತರಿದ್ದರು.
ದಿಕ್ಸೂಚಿ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಅರ್ಥಪೂರ್ಣ ಮಾಹಿತಿ ಹಾಗೂ ಸಂವಾದ ನಡೆಯಿತು. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಜಿ. ಬಿ. ವಿನಯ್ ಕುಮಾರ್ ಅವರು ಉತ್ತರಿಸಿದರು.