SUDDIKSHANA KANNADA NEWS/ DAVANAGERE/ DATE:04-09-2023
ದಾವಣಗೆರೆ: ಯಾರೂ ಯಾರಿಗೂ ನಿರ್ಲಕ್ಷ್ಯ ಮಾಡುವ ಪ್ರಶ್ನೆಯೇ ಇಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಆದ ಗೌರವ ಇದ್ದೇ ಇರುತ್ತದೆ. ಎಲ್ಲರಿಗೂ ಗೌರವ ಕೊಡಲಾಗುತ್ತದೆ. ಯಾವ ಶಾಸಕರು ಅಸಮಾಧಾನಗೊಂಡಂಥ ವಾತಾವರಣ ಇಲ್ಲ. ಮಾಧ್ಯಮಗಳು ಉದ್ವೇಗದಲ್ಲಿ ಸೃಷ್ಟಿ ಮಾಡುತ್ತಿವೆ ಅಷ್ಟೇ ಎಂದು ಸಮಾಜ ಕಲ್ಯಾ.ಣ ಇಲಾಖೆ ಸಚಿವ ಹೆಚ್. ಸಿ. ಮಹಾದೇವಪ್ಪ (H. C. Mahadevappa) ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೆಲ ಶಾಸಕರಿಗೆ ಕ್ಷೇತ್ರದಲ್ಲಿ ತುರ್ತಾಗಿ ಕೆಲಸ ಆಗಬೇಕಿರುತ್ತದೆ. ಆಗ ಸಚಿವರು ತಕ್ಷಣ ಸಿಗುವುದಿಲ್ಲ. ಆಗ ಬೇಸರವಾಗಿರುತ್ತಾರೆ. ಅದನ್ನು ಬಿಟ್ಟರೆ ಎಲ್ಲವೂ ಸರಿಯಾಗಿಯೇ ಇದೆ ಎಂದು ಸ್ಪಷ್ಟನೆ ನೀಡಿದರು.
ಈ ಸುದ್ದಿಯನ್ನೂ ಓದಿ:
H. C. Mahadevappa: ಸನಾತನ ಧರ್ಮ ಶುದ್ಧೀಕರಣ ಆಗ್ಬೇಕು: ಉದಯ ನಿಧಿ ಸ್ಟಾಲಿನ್ ಹೇಳಿಕೆ ಸಮರ್ಥಿಸಿದ ಸಚಿವ ಹೆಚ್. ಸಿ. ಮಹಾದೇವಪ್ಪ…!
ಒಂದು ದೇಶ, ಒಂದು ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಕತ್ತು ಹಿಸುಕಿದಂತೆ. ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ನಾವು ಅಧಿಕಾರಕ್ಕೆ ಬಂದು ಒಂದು ವರ್ಷವಾಗುತ್ತದೆ. ಒಂದು ವರ್ಷಕ್ಕೆ ಚುನಾವಣೆಗೆ ಹೋಗಬೇಕಾ? ಇದು ಯಾವ ರೀತಿಯ
ರಾಜಕೀಯ ಎಂದು ಹೇಳಿದರು.
ನೂರು ವರ್ಷಗಳಿಂದಲೂ ಕಾವೇರಿ ವಿವಾದ ಇದೆ. ಬರ ಪರಿಸ್ಥಿತಿ ಬಂದಾಗ, ಡ್ಯಾಂನಲ್ಲಿ ನೀರು ಸಂಗ್ರಹವಾಗದಿರುವಾಗ ಯಾವ ರೀತಿಯಲ್ಲಿ ಹಂಚಿಕೆ ಮಾಡಬೇಕು ಎಂಬ ಬಗ್ಗೆ ಉಲ್ಲೇಖವಿಲ್ಲ. ಇದರಿಂದಾಗಿ ಬರ ಬಂದಾಗ ಸಮಸ್ಯೆ ಆಗುತ್ತಲೇ ಇದೆ.
ಡ್ಯಾಂನಲ್ಲಿ ನೀರಿಲ್ಲ. ನಮ್ಮ ರೈತರಿಗೆ ಬೆಳೆಗೆ ನೀರಿಲ್ಲ, ಕುಡಿಯಲು ನೀರಿಲ್ಲ. ನೀರು ಇಲ್ಲದ ಮೇಲೆ ಹೇಗೆ ಕೊಡುವುದು. ರೈತರಲ್ಲಿ ಆತಂಕ ಇದೆ. ನಾವು ರೈತರನ್ನು ರಕ್ಷಣೆ ಮಾಡುತ್ತೇವೆ. ನೀನು ಬದುಕು ಬೇರೆಯೊಬ್ಬರನ್ನೂ ಬದುಕಿಸು. ನಮ್ಮಲ್ಲಿ ನೀರು ಸಂಗ್ರಹ ಇದ್ದರೆ ನೀಡಬಹುದು. ಇಲ್ಲೇ ಖಾಲಿಯಾದರೆ ಏನು ಮಾಡೋದು. ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ಸಚಿವ ಮಹಾದೇವಪ್ಪ ತಿಳಿಸಿದರು.
ಉಚಿತ ಬಸ್ ಪ್ರಯಾಣದಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ. ಅಲ್ಲಿಯೂ ಆದಾಯ ಬರುತ್ತದೆ. ಎಷ್ಟೋ ಮಂದಿಗೆ ವಿದ್ಯುತ್ ಬಿಲ್ ಕಟ್ಟಲಾಗದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ನಾವು ಉಚಿತವಾಗಿ ನೀಡುತ್ತಿರುವುದರಿಂದ ಬಡವರ ಬದುಕು ಸ್ವಾವಲಂಬನೆಯತ್ತ ಸಾಗುತ್ತಿದೆ ಎಂದರು.