SUDDIKSHANA KANNADA NEWS/ DAVANAGERE/ DATE:25_07_2025
ಭೀಮಸಮುದ್ರ: ಈ ಶಾಲೆಗೀಗ 40 ವರ್ಷದ ಸಂಭ್ರಮ. ಈ ಶಾಲೆಯ ಸ್ಪೆಷಾಲಿಟಿ ಎಂದರೆ ಗ್ರಾಮಸ್ಥರೇ ಹುಟ್ಟುಹಾಕಿದ ಶಾಲೆಯು ಇಷ್ಟೊಂದು ದೀರ್ಘಾವಧಿಯವರೆಗೆ ನಡೆದುಕೊಂಡು ಬಂದಿರುವುದು ಅಪರೂಪ. ಗ್ರಾಮಸ್ಥರು ಶಿಕ್ಷಣಕ್ಕಾಗಿ ನೀಡಿದ ಕೊಡುಗೆ ಇಂದು ಹಲವು ಸಾಧಕರನ್ನು ಹುಟ್ಟುಹಾಕಿದೆ. ಇಲ್ಲಿ ಕಲಿತ ಎಷ್ಟೋ ಮಂದಿ ಉನ್ನತ ಹುದ್ದೆಯಲ್ಲಿದ್ದಾರೆ. ಗ್ರಾಮದ ಜನರು ಮನಸ್ಸು ಮಾಡಿದರೆ ಶಿಕ್ಷಣ ದೀರ್ಘ ಕಾಲ ನೀಡಬಹುದು ಎಂಬುದಕ್ಕೊಂದು ಉದಾಹರಣೆ.
40 ವರ್ಷ ಶಾಲೆ ಪೂರೈಸಿದ ಅಪರೂಪದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಗ್ರಾಮಸ್ಥರ ಪರಿಶ್ರಮದ ಫಲ ಈ ಶಾಲೆ. ಹಾಗಾಗಿ, ಈ ಶಾಲೆಯಲ್ಲಿ ನಡೆದ ಸಮಾರಂಭ ಎಲ್ಲರ ಸಂತೋಷಕ್ಕೂ ಕಾರಣವಾಯಿತು.
READ ALSO THIS STORY: ವರ್ಷಕ್ಕೆ ಜಸ್ಟ್ 436 ರೂ. ಪಾವತಿಸಿ: ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಯೋಜನೆಯಡಿ 2 ಲಕ್ಷ ರೂ. ಜೀವ ವಿಮಾ ರಕ್ಷಣೆ ಪಡೆಯಿರಿ!
ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರ ಗ್ರಾಮದ ತರಳಬಾಳು ಕಲ್ಯಾಣ ಮಂಟಪದಲ್ಲಿಶ್ರೀ ಭೀಮೇಶ್ವರ ಬಾಲ ವಿಕಾಸ ಹಿರಿಯ ಪ್ರಾಥಮಿಕ ಶಾಲೆಯ 40ನೇ ವರ್ಷದ ಪ್ರಯುಕ್ತ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಲೆಯಲ್ಲಿ ಪ್ರಥಮ ವರ್ಷ ಅಂದರೆ 40 ವರ್ಷ ಹಿಂದೆ ವ್ಯಾಸಂಗ ಮಾಡಿದ್ದ ವಿದ್ಯಾರ್ಥಿಗಳಿಗೆ ಆತ್ಮೀಯವಾಗಿ ಅಭಿನಂದಿಸಲಾಯಿತು.
1985 -1986 ರ ಸಾಲಿನಲ್ಲಿ ಈ ವಿದ್ಯಾ ಸಂಸ್ಥೆಯನ್ನು ಗ್ರಾಮದ ಹಲವು ಮುಖಂಡರ ಶ್ರಮದ ಫಲವಾಗಿ ಪ್ರಾರಂಭವಾಗಿತ್ತು. ಸುತ್ತಮುತ್ತಲಿನ ಅದೆಷ್ಟೋ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ. ಶಿಕ್ಷಣ ಕಲಿಸಿದ ಈ ಶಾಲೆಯಲ್ಲಿ
ಓದಿದ ಅನೇಕ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ವಿದ್ಯಾ ಸಂಸ್ಥೆ ಉದ್ದೇಶ ಗ್ರಾಮಾಂತರ ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಸಿಗಬೇಕೆಂಬುದು. ಅಕ್ಷರ ದಾಸೋಹ 40 ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಸಾರ್ಥಕತೆಯನ್ನೂ ಹೊಂದಿದೆ.
ಸಮಾರಂಭದಲ್ಲಿ ಮಾತನಾಡಿದ ಅರೆಕಾ ಚೇಂಬರ್ಸ್ ಆಫ್ ಕಾಮರ್ಸ್ ಅಧ್ಯಕ್ಷ ಜಿ. ಎಂ. ಪ್ರಸನ್ನ ಕುಮಾರ್ ಅವರು, ಇತ್ತೀಚಿನ ದಿನಗಳಲ್ಲಿ ಇಂಗ್ಲೀಷ್ ವ್ಯಾಮೋಹ ಹೆಚ್ಚಾಗುತ್ತಿದೆ. ಅದರಲ್ಲೂ ಮೊಬೈಲ್ ಇಂಟರ್ನೆಟ್ ಯುಗ ಎಂದು ಕರೆಯುತ್ತೇವೆ. ಆದರೆ ಕನ್ನಡ ಭಾಷೆಯಲ್ಲಿ ಓದಿ ಇತರ ಭಾಷೆಯನ್ನು ಕಲಿಯುವುದು ಬಹಳ ಸುಲಭ. ಮಕ್ಕಳಿಗೆ ಮೊಬೈಲ್ ಹಾಗೂ ಟಿವಿ ಇಂಟರ್ನೆಟ್ ಕಡಿಮೆ ಉಪಯೋಗಿಸುವಂತೆ ಪೋಷಕರು ತಿಳಿಹೇಳಬೇಕು. ಪುಸ್ತಕಗಳನ್ನು
ಹೆಚ್ಚಾಗಿ ಓದುವಂತೆ ಪ್ರೇರೇಪಿಸಬೇಕು ಎಂದು ಕಿವಿಮಾತು ಹೇಳಿದರು.
ಮಕ್ಕಳು ಚೆನ್ನಾಗಿ ಓದಿ ಶಾಲೆಗೆ ಹಾಗೂ ತಂದೆ ತಾಯಿಗೆ ಒಳ್ಳೆಯ ಹೆಸರನ್ನು ತರುವಂತಾಗಲಿ. ಹಳೆ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಸನ್ಮಾನಿಸಿದ ಶಾಲೆಯ ಸಮಿತಿಯರು ಹಾಗೂ ಶಿಕ್ಷಕ ವೃಂದವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಜಿ. ಎಂ.
ಪ್ರಸನ್ನಕುಮಾರ್ ಹೇಳಿದರು,.
ಚಿತ್ರದುರ್ಗ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜಿ. ಎಸ್. ಮಂಜುನಾಥ್ ಮಾತನಾಡಿ ಸುಮಾರು 40 ವರ್ಷಗಳ ಹಿಂದೆ ಬಾಲ ವಿಕಾಸ ವಿದ್ಯಾ ಸಂಸ್ಥೆಯನ್ನು ಗ್ರಾಮದ ಎಲ್ಲಾ ಹಿರಿಯರು ಸ್ಥಾಪನೆ ಮಾಡಿದರು. ಸ್ಥಾಪನೆ ಮಾಡಿ 40 ವರ್ಷಗಳ ಕಳೆದು ಹೋಗಿದೆ. ವಿದ್ಯಾ ಸಂಸ್ಥೆ ಇಷ್ಟೊಂದು ಎತ್ತರಕ್ಕೆ ಕೊಂಡೊಯ್ದಿರುವುದು ಸಾಧಾರಣ ವಿಚಾರವೇನಲ್ಲ. ಈ ಶಾಲೆ ಇಂದಿಗೂ ಸುಸ್ಥಿತಿಯಲ್ಲಿರುವುದು ಸಂತಸದ ವಿಚಾರ. ಈ ಶಾಲೆಯಲ್ಲಿ ಓದಿದ ಮಕ್ಕಳು ಇಂಜಿನಿಯರ್, ಪೊಲೀಸ್, ವಕೀಲಿ ವೃತ್ತಿ ಸೇರಿದಂತೆ ವಿವಿಧ ಉನ್ನತ ಹುದ್ದೆಗೇರಿದ್ದಾರೆ. ಈಗ ಓದುತ್ತಿರುವ ಮಕ್ಕಳೂ ಭವಿಷ್ಯದಲ್ಲಿ ಅತ್ಯುತ್ತಮ ಸ್ಥಾನಕ್ಕೆ ಹೋಗುವಂತಾಗಬೇಕು ಎಂದು ಆಶಿಸಿದರು.
ಯುವ ಮುಖಂಡ ಜಿ. ಎಸ್. ಅನಿತ್ ಕುಮಾರ್ ಮಾತನಾಡಿ ಗ್ರಾಮಾಂತರ ಮಟ್ಟದಲ್ಲಿ ಇಂಥ ಶಾಲೆ ಬೆಳೆಯುತ್ತಿರುವುದು ಬಹಳ ಸಂತೋಷಕರ ವಿಚಾರ. 40 ವರ್ಷ ಪೂರ್ಣಗೊಂಡಿರುವುದು ಅದರಲ್ಲೂ ಸಮಸ್ತ ಆಡಳಿತ ಮಂಡಳಿ ಬಹಳ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಅಭಿನಂದನೆ ಸಲ್ಲಿಸುತ್ತೇನೆ. ಶಿಕ್ಷಕರು ಬಹಳ ಶ್ರದ್ಧೆಯಿಂದ ಮಕ್ಕಳಿಗೆ ಬೋಧನೆ ಮಾಡುತ್ತಿದ್ದಾರೆ ಓದುತ್ತಿರುವ ಮಕ್ಕಳು ಕೂಡ ಚೆನ್ನಾಗಿ ಓದಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಾಲ ವಿಕಾಸ ಸಂಸ್ಥೆಯ ಅಧ್ಯಕ್ಷ ಎ. ಎಂ. ಧನ್ಯ ಕುಮಾರ್ ಅವರು, ಹಳೆಯ ವಿದ್ಯಾರ್ಥಿಗಳು ಶಾಲೆಯ ಸಂಪರ್ಕ ಕಳೆದುಕೊಳ್ಳಬೇಡಿ. ನಮ್ಮ ಜೊತೆಗೆ ಇರಿ. ನಾವು ಹಳೆಯ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಗೌರವಿಸುತ್ತಿರುವುದರಿಂದ ಈಗಿನ ವಿದ್ಯಾರ್ಥಿಗಳಿಗೆ ಹೊಸ ಅನುಭವ ನೀಡುವ ಜೊತೆಗೆ ನಿಮ್ಮ ಸಾಧನೆ ಅವರಿಗೆ ಪ್ರೇರಣೆ ಆಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರಾದ ಬಿ. ಟಿ. ಪುಟ್ಟಪ್ಪ, ಟಿ. ಎಸ್. ಪ್ರಭುದೇವ್, ತಿಪ್ಪೇಸ್ವಾಮಿ, ಮಂಜುನಾಥ್, ಟಿ. ಎಸ್. ರಾಜಶೇಖರಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಶರತ್ ಪಟೇಲ್, ಸುಮಾ, ಶೈಲೆಂದರ್ ಪಟೇಲ್, ಲೋಕೇಶ್, ಅಂಜಿನಪ್ಪ, ಶಿವಕುಮಾರ್, ಮಂಜುನಾಥ್ ಹಾಗೂ ಶಾಲೆಯ ಶಿಕ್ಷಕ ವೃಂದದವರು, ಮಕ್ಕಳು, ಪೋಷಕರು ಇದ್ದರು.