SUDDIKSHANA KANNADA NEWS/ DAVANAGERE/ DATE:12-03-2024
ದಾವಣಗೆರೆ: 2023ರ ಜುಲೈ ತಿಂಗಳಿನಲ್ಲಿ 57 ಸಾವಿರ ರೂಪಾಯಿ ಪ್ರತಿ ಕ್ವಿಂಟಲ್ ಅಡಿಕೆ ದಾಖಲಿಸಿತ್ತು. ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಮತ್ತೆ ದರ ಇಷ್ಟೊಂದು ಪ್ರಮಾಣದಲ್ಲಿ ಏರಿಕೆ ಆಗಲೇ ಇಲ್ಲ. ಈಗ ಅಡಿಕೆ ಧಾರಣೆ 50 ಸಾವಿರ ರೂಪಾಯಿ ಸನಿಹದಲ್ಲಿದ್ದು, ರೈತರಲ್ಲಿ ಹೊಸ ಆಶಾಭಾವ ಮೂಡಿದೆ. ಮಾರುಕಟ್ಟೆಯಲ್ಲಿ 48900 ರೂಪಾಯಿ ಪ್ರತಿ ಕ್ವಿಂಟಾಲ್ ರಾಶಿ ಅಡಿಕೆ ದಾಖಲಿಸಿದ್ದು, ಬೆಳೆಗಾರರಲ್ಲಿ ಸ್ವಲ್ಪ ನೆಮ್ಮದಿ ಬಿಡುವಂತಾಗಿದೆ.
ಈ ವರ್ಷದ ಆರಂಭದಲ್ಲಿ ಕೊಂಚ ಮಟ್ಟಿಗೆ ಹೆಚ್ಚಳವಾಗಿದ್ದ ಧಾರಣೆ ಫೆಬ್ರವರಿ ತಿಂಗಳಿನಲ್ಲಿ ಹಾವು ಏಣಿ ಆಟದಲ್ಲಿಯೇ ಧಾರಣೆ ಮುಕ್ತಾಯ ಕಂಡಿತು. ಮಾರ್ಚ್ ತಿಂಗಳ ಆರಂಭದಲ್ಲಿ ಸ್ವಲ್ಪ ಮಟ್ಟದಲ್ಲಿ ಹೆಚ್ಚಳ
ಕಂಡು ನಿರೀಕ್ಷೆ ಹುಟ್ಟು ಹಾಕಿತ್ತು. ಈಗ 800 ರೂಪಾಯಿ ಪ್ರತಿ ಕ್ವಿಂಟಲ್ ಗೆ ಏರಿಕೆಯಾಗಿದ್ದು, ಧಾರಣೆ ಚೇತರಿಕೆ ಕಾಣುತ್ತಿದೆ. ಸದ್ಯದಲ್ಲಿಯೇ 50 ಸಾವಿರ ರೂಪಾಯಿ ಗಡಿ ದಾಟುವ ನಿರೀಕ್ಷೆಯೂ ಇದೆ.
ಶ್ರೀಲಂಕಾದಿಂದ ಅಡಿಕೆ ಆಮದು ಹಿನ್ನೆಲೆಯಲ್ಲಿ ಮತ್ತೆ ಧಾರಣೆ ಕುಸಿಯುತ್ತೆ ಎಂದು ಭಾವಿಸಿದ್ದ ರೈತರಲ್ಲಿ ಧಾರಣೆ ಏರಿಕೆ ತುಸು ನೆಮ್ಮದಿ ತಂದಿದ್ದರೂ ಆತಂಕ ಮಾತ್ರ ದೂರವಾಗಿಲ್ಲ. ಕಳೆದ ಒಂದು ವಾರದ ಮಾರುಕಟ್ಟೆ ಧಾರಣೆಗೆ ಹೋಲಿಕೆ ಮಾಡಿದರೆ ಸುಮಾರು ಒಂದು ಸಾವಿರ ರೂಪಾಯಿ ಏರಿಕೆ ಕಂಡಿದೆ.
ರಾಶಿ ಅಡಿಕೆಯ ಕನಿಷ್ಠ ಬೆಲೆ 46,599 ರೂಪಾಯಿ ಆಗಿದ್ದು, ಇದು ಹೆಚ್ಚಳವಾಗುವ ಸಾಧ್ಯತೆ ಇದೆ. ಅಡಿಕೆ ಆಮದು ವಿಚಾರ ತಿಳಿಯುತ್ತಿದ್ದಂತೆ ಬೆಳೆಗಾರರು ಭಯಭೀತರಾಗಿದ್ದರು. ಮಾತ್ರವಲ್ಲ, 35 ರಿಂದ 40 ಸಾವಿರ ರೂ. ಪ್ರತಿ ಕ್ವಿಂಟಲ್ ಗೆ ಆದರೂ ಅಚ್ಚರಿಯೇನಿಲ್ಲ ಎಂದು ಹೇಳಲಾಗುತಿತ್ತು. ಸದ್ಯಕ್ಕೆ ಧಾರಣೆ ಏರಿಕೆ ಆಗಿದ್ದು, ಮುಂಬರುವ ದಿನಗಳಲ್ಲಿ ಏರಿಕೆಯಾಗುತ್ತೋ ಅಥವಾ ಇಲ್ಲವೋ ಎಂಬ ಕುತೂಹಲಕ್ಕೂ ಕಾರಣವಾಗಿದೆ.
2023ರ ಡಿಸೆಂಬರ್ ತಿಂಗಳಿನಲ್ಲಿ ಇಳಿಕೆಯಾಗಿದ್ದ ಅಡಿಕೆ ಧಾರಣೆಯು ಹೊಸ ವರ್ಷದ ಆರಂಭದಲ್ಲಿ ಏರಿಕೆಯತ್ತ ಸಾಗಿತ್ತು. ಫೆಬ್ರವರಿ ಮತ್ತೆ ಕುಸಿದಿತ್ತು. ಮಾರ್ಚ್ ತಿಂಗಳಿನಲ್ಲಿ ಏರುಮುಖದತ್ತ ಸಾಗುತ್ತಿರುವುದು ಉತ್ತಮ ಬೆಳವಣಿಗೆ.
ಇನ್ನು ಈ ವರ್ಷ ಬಿಸಿಲಿನ ಝಳವಂತೂ ಹೇಳತೀರದ್ದಾಗಿದೆ. ಶಿವರಾತ್ರಿ ಮುಗಿದ ಬಿಸಿಲಿನ ಧಗೆ ಹೆಚ್ಚಾಗಿದೆ. ಅಡಿಕೆ ಗಿಡಗಳನ್ನು ಉಳಿಸಿಕೊಳ್ಳುವ ಸವಾಲು ಹೆಚ್ಚಿನದ್ದಾಗಿದೆ. ಇನ್ನು ಮೂರ್ನಾಲ್ಕು ತಿಂಗಳು ಅಡಿಕೆ ಗಿಡಗಳನ್ನು ಉಳಿಸಿಕೊಂಡರೆ ಮುಂದಿನ ವರ್ಷ ಉತ್ತಮ ಫಸಲಿನ ಜೊತೆಗೆ ಒಳ್ಳೆಯ ಧಾರಣೆ ಸಿಗುತ್ತದೆ ಎಂಬ ವಿಶ್ವಾಸದಲ್ಲಿ ಅಡಿಕೆ ಬೆಳೆಗಾರರಿದ್ದಾರೆ.
ಟ್ಯಾಂಕರ್ ಗಳಿಗೆ ಹೆಚ್ಚಿನ ಹಣ ನೀಡಿ ನೀರು ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ಅಡಿಕೆ ಧಾರಣೆ ಹೆಚ್ಚಳ, ಮುಂಗಾರು ಮಳೆ ಉತ್ತಮವಾಗುತ್ತದೆ ಎಂಬ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿರುವುದರಿಂದ ರೈತರು ಖುಷಿಯಾಗಿದ್ದಾರೆ. ಆದ್ರೆ, ಮುಂಗಾರು ಮಳೆ ಕೈಕೊಟ್ಟರೆ ಪರಿಸ್ಥಿತಿ ಮತ್ತಷ್ಟು ಜಟಿಲವಾಗುವುದರಲ್ಲಿ ಎರಡು ಮಾತಿಲ್ಲ. ಈ ವರ್ಷ ಬಂದ ಹಣವೆಲ್ಲವೂ ಗಿಡಗಳನ್ನು ಉಳಿಸಿಕೊಳ್ಳುವುದರಲ್ಲಿ ಕಾಲ ನೂಕಬೇಕಾಗುತ್ತದೆ ಎನ್ನುತ್ತಾರೆ ರೈತರು.
ಕಳೆದ ಒಂದು ತಿಂಗಳಿನಲ್ಲಿ ಒಂದು ಸಾವಿರ ಏರಿಕೆಯಾಗಿದೆ. ಆದ್ರೆ, ಈ ವರ್ಷ 2300 ರೂಪಾಯಿ ಪ್ರತಿ ಕ್ವಿಂಟಲ್ ಗೆ ಕುಸಿದಿತ್ತು. ಮತ್ತೆ ಏರುಮುಖದಲ್ಲಿ ಸಾಗಿದರೆ ಸಾಕು. ಮಳೆರಾಯ ಕೃಪೆ ತೋರಿದರೆ ಸಮಸ್ಯೆ ಹೆಚ್ಚಾಗದು. ಬಾ ಬಾರೋ ಮಳೆರಾಯ ಅಂತಾನೂ ರೈತರು ಪ್ರಾರ್ಥಿಸುತ್ತಿದ್ದಾರೆ.
ಭದ್ರಾ ಜಲಾಶಯದಿಂದ ನೀರು ನಿಲ್ಲಿಸಲಾಗಿದೆ. ಮತ್ತೆ ನೀರು ಹರಿಸಿದರೆ ಗಿಡಗಳಿಗೆ ನೀರುಣಿಸಬಹುದು. ಜಿಲ್ಲಾಡಳಿತವು ಅಕ್ರಮ ಪಂಪ್ ಸೆಟ್ ಗಳ ತೆರವಿಗೆ ಬಿಗಿ ಕ್ರಮ ಕೈಗೊಂಡಿರುವುದರಿಂದ ಅಕ್ರಮವಾಗಿ ನೀರು ಪಡೆಯಲು ಆಗದು. ಟ್ಯಾಂಕರ್ ಗಳಿಗೆ ನೀರು ಬುಕ್ ಮಾಡಿದರೆ ತಕ್ಷಣವೇ ಬರುತ್ತಿಲ್ಲ. ಒಂದೆರಡು ದಿನ ತಡವಾಗಿ ಬರುತ್ತಿದೆ. ಮಾತ್ರವಲ್ಲ, ಲಾರಿಗಳಲ್ಲಿಯೂ ನೀರು ತರಿಸಲು ಯೋಜನೆ ಮಾಡಿರುವ ರೈತರು ಇಷ್ಟೊಂದು ದುಬಾರಿ ಹಣ ಎಲ್ಲಿಂದ ತರೋದು? ಬೆಳೆ ಕಡಿಮೆಯಾಗಿದೆ. ಫಸಲು ಉತ್ತಮವಾಗಿ ಬಂದಿಲ್ಲ. ಒಂದು ಎಕರೆಗೆ ಎಂಟು ಕ್ವಿಂಟಲ್ ಅಡಿಕೆ ಬರುತ್ತಿದ್ದದ್ದು ಕೇವಲ ಐದು ಕ್ವಿಂಟಲ್ ಆಗಿದೆ. ಮೂರು ಕ್ವಿಂಟಲ್ ನಷ್ಟ ಸಂಭವಿಸಿದೆ. ಇದರಿಂದ ಪ್ರತಿ ಎಕರೆಗೆ ಒಂದೂವರೆ ಲಕ್ಷ ರೂಪಾಯಿಗಿಂತಲೂ ಹೆಚ್ಚು ನಷ್ಟವನ್ನು ರೈತರು ಈ ಬಾರಿ ಅನುಭವಿಸಿದ್ದಾರೆ.
ಚನ್ನಗಿರಿ ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾಗಿದ್ದು, ಪ್ರತಿ ಕ್ವಿಂಟಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 46,599 ರೂ ಆಗಿದ್ದರೆ, ಗರಿಷ್ಠ ಬೆಲೆ 48,900 ದಾಖಲಿಸಿದೆ. ಸರಾಸರಿ ಬೆಲೆ 47,887 ರೂ.ಗೆ ಮಾರಾಟ ನಡೆಸಿದ್ದರೆ, ಬೆಟ್ಟೆ ಅಡಿಕೆ ಗರಿಷ್ಠ 34,009 ರೂ.ಗೆ ಮಾರಾಟವಾಗಿದೆ.
ಒಟ್ಟಿನಲ್ಲಿ ಬೇಸಿಗೆ ಬರುತ್ತಿದ್ದಂತೆ ಅಡಿಕೆ ಧಾರಣೆ ಹೆಚ್ಚಾಗುತ್ತಿದ್ದರೂ ಖುಷಿಪಡುವ ಪರಿಸ್ಥಿತಿಯಲ್ಲಿ ರೈತರಿಲ್ಲ. ಅಡಿಕೆ ಗಿಡಗಳು ಒಣಗಿ ಹೋಗುತ್ತಿರುವುದನ್ನು ನೋಡುತ್ತಿದ್ದರೆ ರೈತರ ಹೊಟ್ಟೆಯಲ್ಲಿ ಬೆಂಕಿ ಬೀಳುತ್ತಿದೆ. ಅಡಿಕೆ ಗಿಡಗಳ ಉಳಿಸಿಕೊಳ್ಳಲು ಹರಸಾಹಸಪಡುತ್ತಿದ್ದಾರೆ. ಮಳೆರಾಯ ಕೃಪೆ ತೋರಿದರೆ ಅಡಿಕೆ ಬೆಳೆಗಾರರ ಬದುಕು ಹಸನಾಗುತ್ತದೆ.