SUDDIKSHANA KANNADA NEWS/ DAVANAGERE/ DATE-13-05-2025
ದಾವಣಗೆರೆ: ನಗರದ ಹಳೇ ಕುಂದುವಾಡದಲ್ಲಿ ದಾವಣಗೆರೆ ಹರಿಹರ ನಗರಾಭಿವೃದ್ದಿ ಪ್ರಾಧಿಕಾರದಿಂದ ನಿರ್ಮಾಣ ಮಾಡಲು ಹೊರಟ್ಟಿದ್ದ ವಸತಿ ಯೋಜನೆ ವಿಚಾರವಾಗಿ ರೈತರು-ದೂಡಾದ ಮಧ್ಯೆ ಜಟಾಪಟಿ ಮತ್ತೆ ಮುಂದುವರೆದಿದೆ.
ಜಮೀನು ಕೊಳ್ಳಲು ಧೀರ್ಘ ವಿಳಂಭ ಧೋರಣೆ ಅನುಸರಿಸಿದ ಕಾರಣ ರೈತರು ಜಮೀನು ನೀಡಲು ನಿರಾಕರಿಸಿದ್ದರು, ಈ ಹಿನ್ನಲೆ ಪ್ರಾಧಿಕಾರ, ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ವಸತಿ ಯೋಜನೆ ಕೈ ಬಿಡುವಂತೆ ನಗರಾಭಿವೃದ್ದಿ ಇಲಾಖೆಗೆ ಪತ್ರ ಬರೆದಿತ್ತು, ದೂಡಾಕ್ಕೆ ಅಲೆದಾಡಿ ಅಲೆದಾಡಿ ಸುಸ್ತಾಗಿದ್ದ ರೈತರು ಪತ್ರ ಬರೆದ ಹಿನ್ನಲೆ ನಿಟ್ಟುಸಿರು ಬಿಟ್ಟಿದ್ದರು, ಆದರೆ ನಗರಾಭಿವೃದ್ದಿ ಯೋಜನೆ ಕೈ ಬಿಡಲು ಅನುಮತಿ ನೀಡದೇ ಯೋಜನೆ ಮುಂದುವರೆಸುವಂತೆ ಸೂಚನೆ ನೀಡಿದೆ, ಈ ಹಿನ್ನಲೆ ಪ್ರಾಧಿಕಾರ ರೈತರಿಗೆ ನೋಟೀಸ್ ನೀಡಿದೆ, ನೋಟೀಸ್ ಹಿನ್ನಲೆ ರೈತರು ಅಡಕತ್ತರಿಗೆ ಸಿಲುಕಿಕೊಂಡಿದ್ದು, ಪ್ರಾಧಿಕಾರ-ರೈತರ ನಡುವೆ ಜಟಾಪಟೆ ಮುಂದುವರೆದಿದೆ.
ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಾಧಿಕಾರದ ಸಭೆಯಲ್ಲಿ ರೈತರು ಜಮೀನು ನೀಡಲು ಒಪ್ಪದ ಕಾರಣ ವಸತಿ ಯೋಜನೆ ಕೈ ಬಿಡುವಂತೆ ನಡಾವಳಿ ಮಾಡಿ ನಗರಾಭಿವೃದ್ದಿ ಇಲಾಖೆಗೆ ಪತ್ರ ಸಲ್ಲಿಸಲಾಗಿತ್ತು, ಆದರೆ ಯೋಜನೆ ಮುಂದುವರೆಸುವಂತೆ ನಗಾರಭಿವೃದ್ದಿ ಇಲಾಖೆ ದೂಡಾ ಮರು ಉತ್ತರ ನೀಡಿದೆ, ಈ ಹಿನ್ನಲೆ ಪ್ರಾಧಿಕಾರ, ಜಮೀನು ಖರೀದಿಗೆ ರೈತರಿಗೆ ನೋಟೀಸ್ ನೀಡಿದೆ, ರೈತರಿಗೆ ನೋಟೀಸ್ ನೀಡಿದ ಹಿನ್ನಲೆ ಹಳೇ ಕುಂದುವಾಡದ ರೈತರು ಇಂದು ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ಆಯುಕ್ತ ಹುಲ್ಮನಿ ತಿಮ್ಮಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಿ ವಸತಿ ಯೋಜನೆ ಪ್ರಕ್ರಿಯೆಯನ್ನು ಕೈ ಬಿಡುವಂತೆ ಮನವಿ ಸಲ್ಲಿಸಿ ಪಟ್ಟು ಹಿಡಿದರು.
ಈ ಹಿಂದೆ ಈಗಾಗಲೇ ಪ್ರಾಧಿಕಾರಕ್ಕೆ ಮನವಿ ಮಾಡಿರುವಂತೆ ಭೂ ಬೆಲೆ ನಿಗದಿ ಮಾಡಿ ಖರೀದಿ ಪ್ರಕ್ರಿಯೆ ವಿಳಂಭವಾಗಿರುವ ಕಾರಣ, ಹಳೇ ಕುಂದುವಾಡ ಗ್ರಾಮದಲ್ಲಿ ಭೂಮಿ ಬೆಲೆ ಹೆಚ್ಚಾಗಿರುವುದರಿಂದ ಹಾಗೂ ಚಾಲ್ತಿ ನೋಂದಣಿ ಕಛೇರಿ ದರಗಳು ಪರಿಷ್ಕರಣೆಯಾಗಿದೆ, ಹಾಗೂ ಈ ಹಿಂದೇ ನಾಲ್ಕುವರ ವರ್ಷಗಳ ಕಾಲ ಭೂಮಿ ತೆಗೆದುಕೊಳ್ಳದೇ ರೈತರನ್ನು ಅಲೆದಾಡಿಸಲಾಗಿದೆ, ಹೀಗಾಗಿ ರೈತರು ಜಮೀನುಗಳನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲು ನಿರ್ಧರಿಸಿದ ಕಾರಣದಿಂದ ಯೋಜನೆ ಕೈಬಿಡುವಂತೆ ಮನವಿ ಮಾಡಿದರು.
ಪ್ರಾಧಿಕಾರದಿಂದಲು ಸಹ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸಿ ಯೋಜನೆ ಕೈ ಬಿಡುವಂತೆ ಸರ್ಕಾರಕ್ಕೆ ಈ ಹಿಂದೆ ಮೂರು ಭಾರೀ ಪತ್ರವನ್ನೂ ಕಳುಹಿಸಲಾಗಿರುತ್ತದೆ. ಆದರೆ ಪುನ: ಯೋಜನೆ ಕೈಗೊಳ್ಳಲು ಮತ್ತೆ ನೋಟೀಸ್ ನೀಡಿರುತ್ತೀರಿ. ಈಗಲು ಸಹ ನಮಗೆ ಜಮೀನನ್ನು ನೇರ ಖರೀದಿಗಾಗಲೀ ಅಥವಾ ಶೇಕಡಾ 50:50 ರ ಅನುಪಾತದಲ್ಲಿ ಅಭಿವೃದ್ಧಿಗೆ ಜಮೀನು ನೀಡಲು ನಮ್ಮಗಳ ಒಪ್ಪಿಗೆ ಇರುವುದಿಲ್ಲ. ಸದರಿ ಜಮೀನನ್ನು ಉಳಿಸಿಕೊಳ್ಳಲು ಇಚ್ಛಿಸಿರುತ್ತೇವೆ. ಪ್ರಾಧಿಕಾರ ಯೋಜನೆ ಕೈ ಬಿಡಲು ಮನವಿ ಮಾಡಿದ್ದರು, ನಗರಾಭಿವೃದ್ದಿ ಇಲಾಖೆ ಯೋಜನೆ ಮುಂದುವರೆಸಲು ಹೇಳುತ್ತಿರುವುದು ಮರಣ ಶಾಸನ ಬರೆದಂತೆ ಆಗಿದೆ ಎಂದು ಹೇಳಿದರು.
ಈ ಆದೇಶದಿಂದ ನಮಗೆ ಜೀವನ ಮಾಡುವುದು ದುಸ್ಥರವಾಗಿದೆ, ಜಮೀನಿನಲ್ಲಿ ಕೆಲಸ ಬಿಟ್ಟು ಕಚೇರಿ ಅಲೆದಾಟ ಮಾಡಬೇಕಾದ ಪರಿಸ್ಥಿತಿ ಇದೆ, ಇದರಿಂದ ರೈತರು ಆತ್ಮಹತ್ಯೆ ದಾರಿ ಹಿಡಿಯುವ ಪರಿಸ್ಥಿತಿ ಎದುರಾಗಿದೆ, ಈ ಹಿನ್ನಲೆ ದಯಮಾಡಿ ಈ ಪ್ರಕ್ರಿಯೆ ಕೈ ಬಿಡುವಂತೆ ಹಾಗೂ ಎನ್ ಓಸಿ ನೀಡುವಂತೆ ಕೋರುತ್ತೇವೆ. ಸದರಿ ಜಮೀನುಗಳನ್ನು ವಹಿವಾಟು ಮಾಡದಂತೆ ತಮ್ಮ ಕಛೇರಿಯಿಂದ ದಾವಣಗೆರೆ ಉಪನೊಂದಣಾಧಿಕಾರಿಗಳಿಗೆ ಪತ್ರ ಬರೆದಿರುವುದು ನಮ್ಮ ಹಕ್ಕಿಗೆ ಭಂಗ ತರುವಂತಹ ಕ್ರಮವಾಗಿದೆ, ಪಾಲುವಿಭಾಗ, ಕ್ರಯ, ಪೌತಿ, ಸಾಲಕ್ಕಾಗಿ ಅಗ್ರಿಮೆಂಟ್ ಮಾಡಿಕೊಳ್ಳಲು ಪರದಾಡಬೇಕಾದ ಸ್ಥಿತಿ ಎದುರಾಗಿದೆ, ಸದರಿ ಪತ್ರವನ್ನು ಹಿಂಪಡೆಯಲು, ಯೋಜನೆ ಕೈಬಿಡಲು ಹಾಗೂ ನಮಗೆ ವಹಿವಾಟು ಮಾಡಲು ಅನುಕೂಲ ಮಾಡಿಕೊಡಬೇಕು ಇಲ್ಲದಿದ್ದರೆ ಮತ್ತೆ ಹೋರಾಟ ಮುಂದುವರೆಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರೈತರಾದ ನರಸಪ್ಪರ ಶಿವಪ್ಪ, ಮಿಟ್ಲಕಟ್ಟೆ ಚಂದ್ರಪ್ಪ, ರೇವಣ್ಣಪ್ಪ, ಆನಂದಪ್ಪ, ಭೀಮಪ್ಪ, ಈಶ್ವರಪ್ಪ, ರಾಮಪ್ಪ, ಹನುಮಂತ್, ಮಧುನಾಗರಾಜ್ ಸೇರಿದಂತೆ ಮತ್ತಿತರು ಇದ್ದರು.