SUDDIKSHANA KANNADA NEWS/ DAVANAGERE/ DATE:26-08-2023
ದಾವಣಗೆರೆ(Davanagere) : ಅಮೆರಿಕಾದಲ್ಲಿ ಮೃತಪಟ್ಟ ಮೂವರ ಮೃತದೇಹಗಳನ್ನು ದಾವಣಗೆರೆ (Davanagere)ಗೆ ತರಲಾಗುತ್ತಿಲ್ಲ. ಮೇರಿ ಲ್ಯಾಂಡ್ ರಾಜ್ಯದ ಬಾಲ್ತಿಮೇರ್ ನಲ್ಲಿ ದುರಂತ ಸಾವು ಕಂಡ ಮೂವರ ಮೃತದೇಹಗಳ ಅಂತ್ಯಸಂಸ್ಕಾರ ಇಂದು ರಾತ್ರಿ 11.30ರಿಂದ 12 ಗಂಟೆಯ ಸುಮಾರಿಗೆ ಭಾರತೀಯ ಕಾಲಮಾನದ ಪ್ರಕಾರ ನೆರವೇರಲಿದೆ. ವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರ ಅಲ್ಲಿಯೇ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕಳೆದ ಆಗಸ್ಟ್ 15 ನೇ ತಾರೀಖಿನಂದು ಅಮೆರಿಕಾದ ಮೇರಿ ಲ್ಯಾಂಡ್ ರಾಜ್ಯದ ಬಾಲ್ತಿಮೇರ್ ನಲ್ಲಿ ದಾವಣಗೆರೆ (Davanagere) ಜಿಲ್ಲೆ ಜಗಳೂರು ತಾಲೂಕಿನ ಹೊನ್ನಾಳ ಗ್ರಾಮದ ಯೋಗೇಶ್ ಅವರು ಪತ್ನಿ ಪ್ರತಿಭಾ ಹೊನ್ನಾಳ ಹಾಗೂ ಪುತ್ರ ಯಶ್ ಹೊನ್ನಾಳನಿಗೆ ಶೂಟ್ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಅಲ್ಲಿನ ಪೊಲೀಸರು ಬಹಿರಂಗಪಡಿಸಿಲ್ಲ.
ಯೋಗೇಶ್ ಹೊನ್ನಾಳ ತಾಯಿ ಶೋಭಾ, ಸಹೋದರ ಹಾಗೂ ಪ್ರತಿಭಾ ಯೋಗೇಶ್ ಹೊನ್ನಾಳ ತಾಯಿ ಹಾಗೂ ಸಹೋದರ ಅಮೆರಿಕಾ ತಲುಪಿದ್ದಾರೆ. ಇವರ ಸಮ್ಮುಖದಲ್ಲಿ ಅಂತಿಮ ವಿಧಿವಿಧಾನಗಳು ನೆರವೇರಲಿವೆ. ಆದ್ರೆ, ಭಾರತಕ್ಕೆ ಮೂವರ ಮೃತದೇಹಗಳನ್ನು ತರುವುದಕ್ಕೆ ನಡೆಸಿದ ಪ್ರಯತ್ನ ಕೈಗೂಡಲಿಲ್ಲ. ಕೇಂದ್ರ ವಿದೇಶಾಂಗ ಇಲಾಖೆ, ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಂಸದ ಜಿ. ಎಂ. ಸಿದ್ದೇಶ್ವರ ಅವರು ಮೃತದೇಹಗಳನ್ನು ದಾವಣಗೆರೆ(Davanagere) ಗೆ ತೆಗೆದುಕೊಂಡು ಬರಲು ಎಲ್ಲಾ ರೀತಿಯ ಸಹಕಾರ ಕೊಟ್ಟಿದ್ದರು.
ಆದ್ರೆ, ಬಾಲ್ತಿಮೇರ್ ನ ಆರೋಗ್ಯ ಇಲಾಖೆಯು ಮೃತದೇಹಗಳನ್ನು ವೈದ್ಯಕೀಯತೆ ಪ್ರಕಾರ ಕಳುಹಿಸಿಕೊಡಲು ಕಷ್ಟವಾಗುತ್ತದೆ ಎಂಬ ಕಾರಣ ನೀಡಿ ಅಲ್ಲಿಯೇ ಅಂತ್ಯಸಂಸ್ಕಾರ ನಡೆಸುವಂತೆ ಹೇಳಿದ್ದಾರೆ. ಆಗಸ್ಟ್ 15 ರಂದು
ಮೂರು ಮೃತದೇಹಗಳು ಪತ್ತೆಯಾಗಿದ್ದವು. ಘಟನೆ ನಡೆದು ಎರಡರಿಂದ ಮೂರು ದಿನಗಳ ಬಳಿಕ ಈ ವಿಚಾರ ಗೊತ್ತಾಗಿತ್ತು. ಅಷ್ಟೊತ್ತಿಗೆ ಮೃತದೇಹಗಳು ಕೊಳೆತು ಹೋಗಿದ್ದವು. ಇನ್ನು ಘಟನೆ ನಡೆದ ಬಳಿಕ ಮೃತದೇಹಗಳನ್ನು ಕೋಲ್ಡ್ ಸ್ಟೋರೇಜ್ ನಲ್ಲಿಟ್ಟಿದ್ದರೂ ಮೃತದೇಹಗಳು ಪೂರ್ತಿಯಾಗಿ ಕೊಳೆತು ಹೋಗಿವೆ. ಹಾಗಾಗಿ ಮೃತದೇಹಗಳನ್ನು ಕಳುಹಿಸಿಕೊಡಲು ಕಷ್ಟವಾಗುತ್ತದೆ ಎಂದು ಬಾಲ್ಟಿಮೋರ್ ಕೌಂಟಿ ಪೊಲೀಸರು ಹಾಗೂ ಅಲ್ಲಿನ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಅಂತ್ಯ ಸಂಸ್ಕಾರ ನಡೆಯುವುದು ಎಲ್ಲಿ…?
ಎಲ್ಲರಿಗೂ ನಮಸ್ಕಾರ, ಎರಡೂ ಕುಟುಂಬಗಳು ಅಮೆರಿಕಾ ಕಾಲಮಾನದ ಪ್ರಕಾರ ಸಂಜೆ 2ರಿಂದ 4ಗಂಟೆಯವರೆಗೆ ಸುಮಾರಿಗೆ IAD ಗೆ ಆಗಮಿಸಲಿರುವ ಕಾರಣ ಸೋಮವಾರಕ್ಕಿಂತ ಶನಿವಾರದಂದು ಅಂತ್ಯಕ್ರಿಯೆಯ ಸೇವೆಗಳನ್ನು ನಿರ್ವಹಿಸಲು ನಾವು ಎಲ್ಲಾ ಕಾರ್ಯಸಾಧ್ಯ ಆಯ್ಕೆಗಳನ್ನು ಪರಿಶೀಲಿಸಿದ್ದೇವೆ. ಈ ಮೂಲಕ ನಾವು ಶೋಕದ ಅವಧಿಯನ್ನು ಕಡಿಮೆ ಮಾಡಬಹುದು. ಕುಟುಂಬವು ಇತರ ಆದ್ಯತೆಗಳ ಮೇಲೆ ಕೇಂದ್ರೀಕರಿಸಬಹುದು, ಸ್ನೇಹಿತರು ಮತ್ತು ನೆರೆಹೊರೆಯವರು ಹಾಜರಾಗಬಹುದು ಎಂದು ಸೂಚಿಸಲಾಗಿದೆ.
ಈ ಸುದ್ದಿಯನ್ನೂ ಓದಿ:
Parrots Problem: ಘೀಳಿಟ್ಟು ಬರುತ್ತಿದೆ ಲಕ್ಷಾಂತರ ಗಿಳಿಗಳ ಹಿಂಡು: “ಈ ಪ್ರದೇಶಗಳಿಗೆ” ಬಂದು ಮೆಕ್ಕೆಜೋಳ ನಾಶಪಡಿಸುವುದ್ಯಾಕೆ..? ಕಾಳು ಕುಕ್ಕಿ ತಿನ್ನುವ ಗಿಳಿಗಳಿಂದ ಹಿಂಡುತ್ತಿದೆ ರೈತರ ಕರುಳು…!
ಎಷ್ಟು ಗಂಟೆಗೆ ಅಂತ್ಯಕ್ರಿಯೆ..?
ನಾವು ಅಂತ್ಯಕ್ರಿಯೆಯ ಮನೆಯ ಲಭ್ಯತೆ ಮತ್ತು ಪಾದ್ರಿಯನ್ನು ಹೊಂದಿದ್ದೇವೆ. ಆದ್ದರಿಂದ ಶನಿವಾರದಂದು ಮ್ಯಾಕ್ ನಾಬ್ ಫ್ಯೂನರಲ್ ಹೋಮ್ 301 ಫ್ರೆಡೆರಿಕ್ ರಸ್ತೆ, ಕ್ಯಾಟೊನ್ಸ್ವಿಲ್ಲೆ, MD 21228 ಇಲ್ಲಿ ನೆರವೇರಿಸಲು ನಿರ್ಧರಿಸಲಾಗಿದೆ. ಯಾರಾದರೂ ಬರಲು ಯೋಜಿಸುತ್ತಿದ್ದರೆ, ದಯವಿಟ್ಟು ಮಧ್ಯಾಹ್ನ 1.30 ಕ್ಕೆ ಸ್ಥಳದಲ್ಲಿರುವಂತೆ ಸೂಚಿಸಲಾಗಿದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 11 ಗಂಟೆಗೆ ಆರಂಭವಾಗುವ ಅಂತಿಮ ವಿಧಿ ವಿಧಾನ ಮಧ್ಯರಾತ್ರಿ ಸುಮಾರು ಒಂದೂವರೆಯಿಂದ 2 ಗಂಟೆಯೊಳಗೆ ನೆರವೇರುವ ಸಾಧ್ಯತೆ ಇದೆ.
ಎಲ್ಲಿ ನಡೆಯುತ್ತೆ…? ಎಷ್ಟು ಮಂದಿಗೆ ಅವಕಾಶ…?
ಯೋಗೇಶ್ ಹೊನ್ನಾಳ, ಪ್ರತಿಭಾ ಹೊನ್ನಾಳ ಹಾಗೂ ಪುತ್ರ ಯಶ್ ಹೊನ್ನಾಳ ಮೃತದೇಹಗಳನ್ನು ವೀರಶೈವ ಲಿಂಗಾಯತ ವಿಧಿವಿಧಾನಗಳ ಪ್ರಕಾರ ನೆರವೇರಿಸಲು ಅನುವು ಮಾಡಿಕೊಡಲಾಗಿದೆ. ಅಂತ್ಯಕ್ರಿಯೆ ನಡೆಯುವ ಸ್ಥಳದಲ್ಲಿ ಸುಮಾರು 80 ರಿಂದ 100 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಂದಿ ಸೇರುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.
ಯೋಗೇಶ್ ತಾಯಿ ಶೋಭಾ, ಸಹೋದರ ಪುನೀತ್ ಹಾಗೂ ಪ್ರತಿಭಾ ಹೊನ್ನಾಳರ ತಾಯಿ ಪ್ರೇಮಾ ಹಾಗೂ ಸಹೋದರ ಗಣೇಶ್ ಈಗಾಗಲೇ ಅಮೆರಿಕಾ ತಲುಪಿದ್ದಾರೆ. ಅಮೆರಿಕಾದಲ್ಲಿಯೇ ನೆಲೆಸಿದ್ದ ಸೋಮಶೇಖರ್ ಅವರು, ಏಳು ದಿನಗಳ
ಹಿಂದೆಯೇ ಘಟನಾ ಸ್ಥಳಕ್ಕೆ ತೆರಳಿದ್ದರು. ಆದ್ರೆ, ಅಲ್ಲಿನ ಪೊಲೀಸರು ಮೃತದೇಹ ನೋಡಲು ಅವಕಾಶ ಕಲ್ಪಿಸಿರಲಿಲ್ಲ. ಡೆತ್ ನೋಟ್ ಅನ್ನು ನೀಡಿರಲಿಲ್ಲ. ಯೋಗೇಶ್ ಕುಟುಂಬಸ್ಥರು ಹಾಗೂ ಪ್ರತಿಭಾ ಕುಟುಂಬಸ್ಥರಿಗೆ ಮಾತ್ರ ನೀಡುವುದಾಗಿ
ಹೇಳಿರುವ ಕಾರಣ ಸಾವಿಗೆ ಇನ್ನೂ ಕಾರಣ ನಿಗೂಢ.
ಶರಾವತಿ ಕನ್ನಡಿಗರ ಸಂಘದ ನೆರವು:
ಇನ್ನು ಅಮೆರಿಕಾದಲ್ಲಿ ನೆಲೆಸಿರುವ ಕನ್ನಡಿಗರು ಶರಾವತಿ ಕನ್ನಡಿಗರ ಸಂಘ ರಚಿಸಿಕೊಂಡಿದ್ದಾರೆ. ಈ ಸಂಘದ ಸದಸ್ಯರು ಯೋಗೇಶ್ ಹೊನ್ನಾಳ ಹಾಗೂ ಪ್ರತಿಭಾ ಹೊನ್ನಾಳ ಕುಟುಂಬದವರಿಗೆ ಎಲ್ಲಾ ರೀತಿಯ ನೆರವು ನೀಡಿದ್ದಾರೆ. ಹಾಗಾಗಿ,
ಅಂತ್ಯಕ್ರಿಯೆಗೆ ಎಲ್ಲಾ ರೀತಿಯ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಇಂದು ಮಧ್ಯರಾತ್ರಿಯ ಹೊತ್ತಿಗೆ ಅಂತ್ಯಕ್ರಿಯೆ ನೆರವೇರಲಿದೆ.
ಕುಟುಂಬಸ್ಥರ ಮನವೊಲಿಕೆ ಯಶಸ್ವಿ:
ಮೂರು ಮೃತದೇಹಗಳು ಕೊಳೆತು ಹೋಗಿದ್ದು, ಭಾರತಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗೋದಿಲ್ಲ. ಇಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಿದರೆ ಒಳ್ಳೆಯದು. ಅಂತ್ಯಸಂಸ್ಕಾರ ಇಲ್ಲಿಯೇ ನೆರವೇರಿಸಿದರೆ ಒಳ್ಳೆಯದು. ಇಷ್ಟೊಂದು ದೀರ್ಘ ಪ್ರಯಾಣ, ವೈದ್ಯಕೀಯವಾಗಿಯೂ ತೆಗೆದುಕೊಂಡು ಹೋಗುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ. ಕುಟುಂಬಸ್ಥರ ಮನವೊಲಿಸುವಲ್ಲಿ ಅಮೆರಿಕಾದ ಮೇರಿ ಲ್ಯಾಂಡ್ ರಾಜ್ಯದ ಬಾಲ್ತಿಮೇರ್ ಪೊಲೀಸರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿ ಆಗಿದ್ದಾರೆ. ಯೋಗೇಶ್ ಹೊನ್ನಾಳ ಹಾಗೂ ಪ್ರತಿಭಾ ಹೊನ್ನಾಳ ಕುಟುಂಬಸ್ಥರು ಸಹ ಇದಕ್ಕೆ ಸಹಮತಿ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯಲ್ಲಿರುವ ಯೋಗೇಶ್ ಹೊನ್ನಾಳ ಸಂಬಂಧಿಕರು, ಪ್ರತಿಭಾ ಹೊನ್ನಾಳ ತಂದೆ ಹಾಗೂ ಕುಟುಂಬಸ್ಥರು, ಸಂಬಂಧಿಕರ ಜೊತೆ ಈ ವಿಚಾರ ಕುರಿತಂತೆ ಅಮೆರಿಕಾಕ್ಕೆ ತೆರಳಿದ್ದ ಶೋಭಾ ಹಾಗೂ ಯೋಗೇಶ್ ಸಹೋದರ, ಪ್ರತಿಭಾ ತಾಯಿ ಹಾಗೂ ಸಹೋದರ ಚರ್ಚೆ ನಡೆಸಿ ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ. ಒಟ್ಟಿನಲ್ಲಿ ಸುಂದರ ಕುಟುಂಬದ ದುರಂತ ಅಂತ್ಯ ಕಂಡಿದೆ.
ದಾವಣಗೆರೆಗೆ ಮೃತದೇಹಗಳನ್ನು ತರಲು ಎಲ್ಲಾ ರೀತಿಯ ಪ್ರಯತ್ನ ನಡೆಸಿತಾದರೂ ತರಲಾಗಲಿಲ್ಲ. ಮುದ್ದಾದ ಕುಟುಂಬವೊಂದು ಅಮೆರಿಕಾದಲ್ಲಿಯೇ ದುರಂತ ಅಂತ್ಯ ಕಂಡಿದ್ದು ಮಾತ್ರ ನಿಜಕ್ಕೂ ದುರಂತ ಹಾಗೂ ನೋವಿನ ಸಂಗತಿಯೇ ಸರಿ.