SUDDIKSHANA KANNADA NEWS/ DAVANAGERE/ DATE:11-03-2025
ಬೆಂಗಳೂರು: ಚಿತ್ರನಟಿ ರನ್ಯಾ ರಾವ್ ಅವರು ಶಿಷ್ಟಾಚಾರ ಸೌಲಭ್ಯದ ದುರ್ಬಳಕೆ ಮಾಡಿಕೊಂಡು ಚಿನ್ನದ ಅಕ್ರಮ ಸಾಗಾಣಿಕೆ ನಡೆಸಿರುವುದು ವರದಿಯಾಗಿದ್ದು, ಈ ಪ್ರಕರಣದಲ್ಲಿ ರನ್ಯಾ ರಾವ್ ಅವರ ತಂದೆ, ಐಪಿಎಸ್ ಅಧಿಕಾರಿಯೂ ಆಗಿರುವ ರಾಮಚಂದ್ರ ರಾವ್ ಅವರ ಪಾತ್ರದ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ.
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಐಎಎಸ್ ಅಧಿಕಾರಿ ಗೌರವ್ ಗುಪ್ತ ಅವರನ್ನು ನೇಮಿಸಿ ಆದೇಶಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ನಟಿ ರನ್ಯಾ ರಾವ್ ಅವರ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಹವಾಲಾ ನಂಟು ಬೆಸೆದುಕೊಂಡಿರುವ ಕುರಿತಂತೆ ಬಿಜೆಪಿಯು ಆರೋಪ ಮಾಡಿತ್ತು. ಆರೋಪಿ ರನ್ಯಾ ರಾವ್ ಬಂಧನದ ಸಂದರ್ಭದಲ್ಲಿ ಸಚಿವರೊಬ್ಬರನ್ನು
ಸಂಪರ್ಕಿಸಲು ಯತ್ನಿಸಿರುವುದು ಕಾಂಗ್ರೆಸ್ ಸರ್ಕಾರದ ಪ್ರಭಾವಿಗಳ ಕೈವಾಡ ಇರುವ ಬಗ್ಗೆ ಸ್ಪಷ್ಟ ಅನುಮಾನಗಳು ಮೂಡುತ್ತಿವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಗಂಭೀರ
ಆರೋಪ ಮಾಡಿದ್ದರು. ಸದನದಲ್ಲಿಯೂ ಈ ವಿಚಾರ ಪ್ರತಿಧ್ವನಿಸಿತ್ತು.
ಮಾತ್ರವಲ್ಲ, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯ ಪುತ್ರಿ ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಸರ್ಕಾರದಿಂದ ಯಾವ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿ ಆರೋಪಿಸಿತ್ತು. ಜೆಡಿಎಸ್ ಕೂಡ ಧ್ವನಿ ಎತ್ತಿತ್ತು. ಈಗ ರಾಜ್ಯ ಸರ್ಕಾರವು ಆಕೆ ತಂದೆ ವಿರುದ್ಧ ತನಿಖೆಗೆ ಆದೇಶಿಸುವ ಮೂಲಕ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.