SUDDIKSHANA KANNADA NEWS/ DAVANAGERE/ DATE:24-12-2023
ದಾವಣಗೆರೆ: ಕಳೆದ ವಿಧಾನಸಭೆ ಚುನಾವಣೆ ಬಳಿಕ ರಾಜ್ಯ ಬಿಜೆಪಿ ಹಾಗೂ ಕಾರ್ಯಕರ್ತರಲ್ಲಿ ಮಂಕು ಕವಿದಿತ್ತು. ಈಗ ಪುಟಿದೇಳುವ ಕಾಲ ಬಂದಿದೆ. ಲೋಕಸಭೆ ಚುನಾವಣೆಯ ಫಲಿತಾಂಶ ಇತಿಹಾಸದ ಪುಟಗಳಲ್ಲಿ ಬರೆದಿಡುವಂತೆ ಬರಲಿದೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಕೆ. ಬಿ. ಬಡಾವಣೆಯಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದ ವೇಳೆ ಕಾರ್ಯಕರ್ತರು ಹಾಗೂ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸಾಕಷ್ಟು ಹಿನ್ನೆಡೆ ಆಗಿದೆ. ಇದು ನಿಜ. ಆದ್ರೆ,
ಕಾಂಗ್ರೆಸ್ ಸರ್ಕಾರ ಬಹುಮತ ಬಂದಿದೆ ಎಂದು ದುರಂಹಕಾರದಿಂದ ವರ್ತಿಸುತ್ತಿದೆ. ಸಿಎಂ ಸಿದ್ದರಾಮಯ್ಯ, ಸಚಿವರು, ಶಾಸಕರು ದುರಹಂಕಾರದ ವರ್ತನೆ ಬಿಡಬೇಕು ಎಂದು ಸಲಹೆ ನೀಡಿದರು.
ಕಾಂಗ್ರೆಸ್ ನವರು ಅಧಿಕಾರ ಶಾಶ್ವತ ಎಂಬ ಭ್ರಮೆಯಲ್ಲಿದ್ದಾರೆ. ಅದು ಎಷ್ಟು ದಿನಗಳು ಇರುತ್ತವೆ ಎಂಬುದನ್ನು ನೋಡೋಣ. ಯಾವುದೋ ಒಂದು ಧರ್ಮದಿಂದ ಅಧಿಕಾರಕ್ಕೆ ಕಾಂಗ್ರೆಸ್ ಬಂದಿಲ್ಲ. ಎಲ್ಲಾ ವರ್ಗದವರ ಸಹಕಾರದಿಂದ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ರಾಜ್ಯದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. 500 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಆದ್ರೆ, ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರಿಗೆ ಹತ್ತು ಸಾವಿರ ಕೋಟಿ ರೂಪಾಯಿ ಕೊಡುತ್ತೇನೆ ಎನ್ನುವ ಮೂಲಕ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದ್ದಾರೆ. ಹಿಂದೂ ಮಹಿಳೆಯರು ಪರೀಕ್ಷೆ ಬರೆಯಲು ಹೋದಾಗ ತಾಳಿ ಕಿತ್ತಿಡಿಸಿದ್ದಾರೆ. ಹಿಜಾಬ್ ಧರಿಸಲು ಅವಕಾಶ ನೀಡುತ್ತೇವೆ ಎನ್ನುವ ಮೂಲಕ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದಲ್ಲಿ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದಿರಬಹುದು. ಬಡವರು, ರೈತರು ಮಹಿಳೆಯರ ವಿರೋಧಿಯಂತೆ ವರ್ತಿಸುತ್ತಿರುವ ಕಾಂಗ್ರೆಸ್ ಗೆ ಲೋಕಸಭೆ ಚುನಾವಣೆಯಲ್ಲಿ ಉತ್ತರ ಕೊಡುವುದು ಖಚಿತ. ನಮ್ಮಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿವೆ. ಭಿನ್ನಾಭಿಪ್ರಾಯ, ಅಸಮಾಧಾನ ಬದಿಗಿಟ್ಟು, ಎಲ್ಲವನ್ನೂ ಮರೆತು ವೀರಯೋಧರಂತೆ ಲೋಕಸಭೆ ಚುನಾವಣೆಯಲ್ಲಿ ಕೆಲಸ ಮಾಡೋಣ. ವೀರ ಸೇನಾನಿಗಳಾಗಿ ಪಕ್ಷಕ್ಕೆ ಶಕ್ತಿ ತುಂಬೋಣ. 28 ಕ್ಷೇತ್ರ ಗೆಲ್ಲಿಸೋಣ. ಭ್ರಷ್ಟ ಕಾಂಗ್ರೆಸ್ ಗೆ ಕೊಡುವ ಉತ್ತರ ಇದಾಗಿರಬೇಕು ಎಂದು ಸಲಹೆ ನೀಡಿದರು.
ನಮಗೆ ವ್ಯವಹಾರ, ಕುಟುಂಬದ ಬಗ್ಗೆ ಯೋಚನೆ ಮಾಡಲು ಅವಕಾಶ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಪುಣ್ಯಾತ್ಮ. ತಪಸ್ಸಿನಂತೆ ದೇಶ ಕಟ್ಟಲು, ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿದ್ದಾರೆ. ಮೋದಿ ಅವರಂಥ ಪುಣ್ಯಾತ್ಮರು ಪ್ರಧಾನಿ ಆಗಿರುವ ಪಕ್ಷದಲ್ಲಿ ನಾವೆಲ್ಲಾ ಕಾರ್ಯಕರ್ತರಾಗಿರುವುದು ನಮ್ಮ ಹೆಮ್ಮೆ. ಸ್ಥಾನಮಾನ ಕಾರ್ಯಕರ್ತರು ಬಯಸುತ್ತಿಲ್ಲ. ಬಿಜೆಪಿ ಗೆಲ್ಲಬೇಕೆಂದು ಕೆಲಸ ಮಾಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದಾವಣಗೆರೆ ಲೋಕಸಭೆ ಕ್ಷೇತ್ರವು ಬಿಜೆಪಿ ಭದ್ರಕೋಟೆ. ಶಿವಮೊಗ್ಗದಲ್ಲಿಯೂ ಬಿಜೆಪಿ ಭದ್ರಕೋಟೆಯಂತಾಗಿದೆ. ಇದೇ ಮಾದರಿಯಲ್ಲಿಯೇ ದಾವಣಗೆರೆಯು ಬಿಜೆಪಿ ಭದ್ರಕೋಟೆಯಾಗಿ ಮುಂದುವರಿಯಬೇಕು. ಬಿಜೆಪಿ ಅಭ್ಯರ್ಥಿಯನ್ನು ದೊಡ್ಡ ಅಂತರದಲ್ಲಿ ಗೆಲ್ಲಿಸಲು ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಾಧಿವೇಶನಕ್ಕೆ ಬಂದಿದ್ದೇನೆ. ಮತ್ತೆ ದಾವಣಗೆರೆಗೆ ಬರುತ್ತೇನೆ. ದೊಡ್ಡ ಸಮಾವೇಶ ಮಾಡೋಣ. ನಾನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನಾದ ಬಳಿಕ ಮೊದಲ ಕೆಲಸ ಮಾಡಿದ್ದು ಬೆಂಗಳೂರಿನ ಗಾಂಧಿನಗರದ ವಾರ್ಡ್ ಅಧ್ಯಕ್ಷರ ಮನೆಗೆ ಹೋಗಿದ್ದೇನೆ. ಪಕ್ಷ ರಾಷ್ಟ್ರದಲ್ಲಿ ಸದೃಢವಾಗಿ ಬೆಳೆಯಲು ಕಾರ್ಯಕರ್ತರೇ ಕಾರಣ. ರಾಷ್ಟ್ರೀಯ ಅಧ್ಯಕ್ಷರಿಗೆ ನೀಡುವ ಗೌರವವನ್ನು ಬೂತ್ ಅಧ್ಯಕ್ಷರಿಗೂ ನೀಡ್ತೇವೆ. ಇದು ಬಿಜೆಪಿ ವಿಶೇಷ ಎಂದರು.
ಸಂಸದ ಜಿ. ಎಂ. ಸಿದ್ದೇಶ್ವರ ಮಾತನಾಡಿ, ಬಿ. ವೈ. ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಯುವಕರು ಮಿಂಚಿನಂತೆ ಪುಟಿದೆದ್ದಿದ್ದಾರೆ. ಪ್ರಧಾನಿ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿಸಲು ಉತ್ಸಾಹದಿಂದ ಇದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಪ್ರತಿಯೊಬ್ಬರೂ ಶ್ರಮಿಸೋಣ ಎಂದು ಹೇಳಿದರು.
ಹರಿಹರ ಶಾಸಕ ಬಿ. ಪಿ. ಹರೀಶ್, ಮುಂಬರುವ ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲಿಸಲು ನಾವೆಲ್ಲರೂ ಕಟಿಬದ್ಧರಾಗೋಣ. ವಿಧಾನಸಭೆ ಚುನಾವಣೆಯಲ್ಲಿ ಕಳೆದ ಬಾರಿ ಬಿಜೆಪಿ ಜಿಲ್ಲೆಯಲ್ಲಿ ಹಿನ್ನೆಡೆ ಅನುಭವಿಸಿದೆ. ಮುಂದೆ ಜಿಲ್ಲೆಯ 8 ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವಂತೆ ಕೆಲಸ ನಿರ್ವಹಿಸೋಣ. ವಿಜಯೇಂದ್ರ ಅವರ ಕೈ ಬಲಪಡಿಸೋಣ ಎಂದರು.
ವೇದಿಕೆಯಲ್ಲಿ ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ಮಾಜಿ ಶಾಸಕರಾದ ಎಂ. ಪಿ. ರೇಣುಕಾಚಾರ್ಯ, ಎಸ್. ವಿ. ರಾಮಚಂದ್ರಪ್ಪ, ಪ್ರೊ. ಎನ್. ಲಿಂಗಣ್ಣ, ಬಸವರಾಜ್ ನಾಯ್ಕ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಬಿ. ಎಸ್. ಜಗದೀಶ್, ಜಿಲ್ಲಾ ಮಾಧ್ಯಮ ಪ್ರಮುಖ ಹೆಚ್. ಪಿ. ವಿಶ್ವಾಸ್, ಬಿಜೆಪಿ ಯುವ ಮುಖಂಡ ಜಿ. ಎಸ್. ಶ್ಯಾಮ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಪಾಟೀಲ್, ಮಾಜಿ ಮೇಯರ್ ಎಸ್. ಟಿ. ವೀರೇಶ್ ಸೇರಿದಂತೆ ಮುಖಂಡರು ಹಾಜರಿದ್ದರು.