SUDDIKSHANA KANNADA NEWS/ DAVANAGERE/DATE:12_08_2025
ದಾವಣಗೆರೆ: ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿ.ಕಡದಕಟ್ಟೆ, ಮರಿಗೊಂಡನಹಳ್ಳಿ, ಕೆಂಗಟ್ಟೆ, ಮಾಚಿಗೊಂಡನಹಳ್ಳಿ, ದೊಡ್ಡೇರಿ, ಕಂಕನಹಳ್ಳಿ ತಾಂಡ ಗ್ರಾಮಗಳಲ್ಲಿ ಸರಣಿ ಜಾನುವಾರುಗಳ ಕಳ್ಳತನಗಳು ನಡೆದಿದ್ದು, 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಪ್ರೀತಿ ಮಾಯೆ ಹುಷಾರು… ಮುಸ್ಲಿಂ ಯುವಕನ ಜೊತೆ ಮದುವೆಯಾಗ್ತೇನೆಂದು ಹೋದಾಕೆಗೆ ಮತಾಂತರಕ್ಕೆ ಪ್ರಯತ್ನ! ಮುಂದೇನಾಯ್ತು?
ನ್ಯಾಮತಿ ತಾಲೂಕಿನ ಕೋಟೆಹಾಳ್ ವೆಂಕಟೇಶ್ವರ ನಗರದ ವಾಸಿ ಮೋಹನ ಅಲಿಯಾಸ್ ಮನು (26), ಚಿ. ಕಡದಕಟ್ಟೆ ಗ್ರಾಮದ ನಾಗರಾಜ ನಾಯ್ಕ ಅಲಿಯಾಸ್ ನಾಗರಾಜ (28), ಚೀಲೂರು ಗ್ರಾಮದ ಮನ್ಸೂರ್ (35), ದೊಡ್ಡೇರಿ
ಗ್ರಾಮದ ಆಟೋ ಚಾಲಕ ಕುಶಾಲ್ (25), ದೊಡ್ಡೇರಿ ಗ್ರಾಮದ ಅಮಿತ್ (26), ಗಡೇಕಟ್ಟೆ ಗ್ರಾಮದ ಚಾಲಕ ಪ್ರವೀಣ್ (28) ಬಂಧಿತ ಆರೋಪಿಗಳು.
ಆರು ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆಗೆ ಒಳಪಡಿಸಿದಾಗ 2 ತಂಡ ರಚನೆ ಮಾಡಿಕೊಂಡು ತಮ್ಮ ಅಶೋಕ ಲೈಲ್ಯಾಂಡ್ ವಾಹನಗಳಲ್ಲಿ ಹೋಗಿ ಜಾನುವಾರುಗಳನ್ನು ಕಳ್ಳತನ ಮಾಡಿ ಅವುಗಳನ್ನು ಶಿವಮೊಗ್ಗ ನಗರದ ಮುಕ್ತಿಯಾರ್ ಎಂಬಾತನಿಗೆ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಮುಕ್ತಿಯಾರ್ ಈತ ತಲೆಮರೆಸಿಕೊಂಡಿದ್ದು, ಈತನನ್ನು ಬಂಧಿಸಬೇಕಿದೆ.
ಒಟ್ಟು 3 ಎತ್ತುಗಳು, 8 ಹಸುಗಳು, 2 ಕರುಗಳು ಸೇರಿ ಒಟ್ಟು 13 ಜಾನುವಾರುಗಳನ್ನು ಕಳ್ಳತನ ಮಾಡಿದ್ದ ಈ ಖದೀಮರ ವಿರುದ್ಧ ಪ್ರಕರಣ ದಾಖಲಾಗಿತ್ತು. ನ್ಯಾಮತಿ ಪೊಲೀಸ್ ಠಾಣೆಯಲ್ಲಿ 6 ಜಾನುವಾರು ಕಳ್ಳತನ ಪ್ರಕರಣಗಳು ವರದಿಯಾಗಿದ್ದವು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಪರಮೇಶ್ವರ ಹೆಗಡೆ ಮಾರ್ಗದರ್ಶನದಲ್ಲಿ ಚನ್ನಗಿರಿ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್ ಅವರ ಉಸ್ತುವಾರಿಯಲ್ಲಿ ಪ್ರಕರಣಗಳ ಪತ್ತೆ ಕಾರ್ಯಕ್ಕೆ ನ್ಯಾಮತಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಎನ್. ಎಸ್. ರವಿ ಅವರ ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿಗಳ ತಂಡವನ್ನು ರಚಿಸಲಾಗಿತ್ತು. ಈ ತಂಡವು ತನಿಖೆ ಕೈಗೊಂಡು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತ ಆರು ಆರೋಪಿಗಳಿಂದ ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಚಿ.ಕಡದಕಟ್ಟೆ, ಮರಿಗೊಂಡನಹಳ್ಳಿ, ಮಾಚಿಗೊಂಡನಹಳ್ಳಿ, ಕೆಂಗಟ್ಟೆ, ದೊಡ್ಡೇರಿ, ಕಂಕನಹಳ್ಳಿ ತಾಂಡ ಗ್ರಾಮದಲ್ಲಿನ ಒಟ್ಟು 6 ಜಾನುವಾರು ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ ಪ್ರಕರಣಗಳಿಗೆ ಸಂಬಂಧಿಸಿದ ಒಟ್ಟು 1,20,000 ರೂ ನಗದು ಮತ್ತು ಕೃತ್ಯಕ್ಕೆ ಬಳಸಿದ್ದ 2 ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನಗಳು ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಚನ್ನಗಿರಿ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್ ಅವರ ಉಸ್ತುವಾರಿಯಲ್ಲಿ ಸರಣಿ ಜಾನುವಾರು ಕಳ್ಳತನ ಪ್ರಕರಣಗಳಲ್ಲಿನ ಆರೋಪಿತರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ನ್ಯಾಮತಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರವಿ ಎನ್.ಎಸ್, ಪಿಎಸ್‌ಐ ಹೊಳಬಸಪ್ಪ ಹೋಳಿ ಮತ್ತು ಸಿಬ್ಬಂದಿಯವರಾದ ಎಎಸ್ಐ ಮಲ್ಲೇಶಪ್ಪ, ಮಂಜಪ್ಪ ಕೆ, ವಿಕ್ರಂ, ಶಿವರಾಜ್, ಮಹೇಶನಾಯ್ಕ, ಆನಂದ, ಸುನೀಲ್ ಕುಮಾರ್, ದೇವರಾಜ್, ಬಸವರಾಜ್, ಯಶವಂತಚಾರಿ, ಪ್ರವೀಣ್, ಪ್ರಶಾಂತ್, ಹೇಮರಾಜ್, ರಾಮಪ್ಪ, ಚನ್ನೇಶ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಅಭಿನಂದಿಸಿದ್ದಾರೆ.