SUDDIKSHANA KANNADA NEWS/ DAVANAGERE/ DATE:05-02-2024
ದಾವಣಗೆರೆ: ಹಣದಿಂದ ಎಲ್ಲವನ್ನೂ ಗಳಿಸಬಹುದು, ಆದರೆ ಹಣ ಮಾತ್ರವೇ ಬದುಕಿನ ಎಲ್ಲವೂ ಅಲ್ಲ. ಶ್ರೀಮಂತಿಕೆಗಿಂತ ಆರೋಗ್ಯ ಭಾಗ್ಯವೇ ಬದುಕಿನಲ್ಲಿ ಎಲ್ಲದಕ್ಕಿಂತ ಮುಖ್ಯ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಗ್ರಾಪಂ ಅಧ್ಯಕ್ಷ ಲೋಕೇಶಪ್ಪ ಹೇಳಿದರು.
ದಾವಣಗೆರೆ ತಾಲೂಕು ಆನಗೋಡು ಹೋಬಳಿಯ ಗುಮ್ಮನೂರಿನ ಚನ್ನಬಸವೇಶ್ವರ ಸಮುದಾಯ ಭವನದಲ್ಲಿ ಪ್ರೀತಿ ಆರೈಕೆ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 51ನೇ ಆರೋಗ್ಯ ಉಚಿತ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಕುಟುಂಬ, ಊರು, ದೇಶ ಇನ್ನಷ್ಟು ಅಭಿವೃದ್ಧಿ ಆಗಬೇಕು ಎಂದು ನಾವೆಲ್ಲರೂ ಬಯಸುತ್ತೇವೆ. ಆದರೆ, ಅಭಿವೃದ್ಧಿ ಮಾಡಬೇಕಾದ ನಾಗರೀಕರೇ ಹಾಸಿಗೆ ಹಿಡಿಯಬಾರದು ಎಂಬ ಸದುದ್ದೇಶದಿಂದ ಡಾ. ರವಿಕುಮಾರ್ ಮತ್ತವರ ತಂಡ ಜಿಲ್ಲಾದ್ಯಂತ ಶಿಬಿರ ಆಯೋಜನೆ ಮಾಡುವ ಮೂಲಕ ಸಾಮಾಜಿಕ ಕೈಂಕರ್ಯದಲ್ಲಿ ತೊಡಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಪಂ ಉಪಾಧ್ಯಕ್ಷೆ ಹನುಮಕ್ಕ ನಾಗರಾಜ್ ಮಾತನಾಡಿ, ಆರೋಗ್ಯ ತಪಾಸಣೆ ಶಿಬಿರ ದಾವಣಗೆರೆ ಜಿಲ್ಲಾದ್ಯಂತ ಅಪಾರ ಬೆಂಬಲ, ಪ್ರೋತ್ಸಾಹ, ಮೆಚ್ಚುಗೆ ದೊರೆತಿದೆ. ಆಸ್ಪತ್ರೆಗೆ ಹೋದರೂ ಉತ್ತಮ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಕೆಲವು ದೂರು ಮತ್ತು ಉದಾಹರಣೆಗಳು ಇವೆ. ಆದರೆ, ಇವೆಲ್ಲವನ್ನೂ ಮೀರಿ ನಾವು ಇದ್ದಲ್ಲಿಗೇ ಬಂದು ಉಚಿತವಾಗಿ ಆರೋಗ್ಯದ ತಪಾಸಣೆ ಶಿಬಿರ ಮಾಡುತ್ತಿರುವ ಪ್ರೀತಿ ಆರೈಕೆ ಟ್ರಸ್ಟ್ ಮತ್ತು ಡಾ. ರವಿಕುಮಾರ್ ಗ್ರಾಮಸ್ಥರ ಪರವಾಗಿ ಹೃದಯಪೂರ್ವಕ ಧನ್ಯವಾದಗಳು ತಿಳಿಸುತ್ತೇನೆ ಎಂದು ಹೇಳಿದರು.
ಶಿಬಿರಕ್ಕೆ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಮತ್ತು ಗ್ರಾಮಸ್ಥರು ಸಹಕಾರ ನೀಡಿದ್ದರು. ಶಿಬಿರದಲ್ಲಿ ಗ್ರಾಪಂ ಉಪಾಧ್ಯಕ್ಷರಾದ ಗೌಡ್ರಯ ನಾಗರಾಜಪ್ಪ, ಮುಖಂಡರಾದ ಗೌಡ್ರು ಮುರುಗೇಶಪ್ಪ, ಪಿಡಿಒ ರಾಘವೇಂದ್ರ ನಾಯಕ್, ಡಾ. ಮೊಹಮ್ಮದ್ ಶಾಹಿದ್, ಡಾ. ಚಂದನ, ಉಮೇಶ್ ಪಿ ಬಳ್ಳಾರಿ, ಮಂಜುನಾಥ್, ಮಂಜುನಾಥ್, ಕಲಾವತಿ ವಿಜಯ್, ಶಿಲ್ಪಾ, ಹನುಮಂತಪ್ಪ, ವಿನೋದ್ ಕುಮಾರ್, ಪ್ರದೀಪ್, ಸುದೀಪ್ ಭಾಗವಹಿಸಿದ್ದರು.