ಭಾರತೀಯರಿಗೆ ಕಾಫಿ-ಚಹಾ ಇಲ್ಲದೆ (Tea Tips) ಬೆಳಗಾಗುವುದೇ ಇಲ್ಲ. ಆದರೆ ಅತಿಯಾಗಿ ಕೆಫೇನ್ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿ ಎಂಬುದು ಎಲ್ಲರಿಗೂ ತಿಳಿದೇ ಇದೆ. ಇದೀಗ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಈ ಬಗ್ಗೆ ವಿಸ್ತೃತವಾದ ನಿರ್ದೇಶನಗಳನ್ನು ನೀಡಿದ್ದು, ಕೆಫೇನ್ ಎಷ್ಟು ಸೇವಿಸಬಹುದು ಮತ್ತು ಯಾವಾಗ ಸೇವಿಸಬಹುದು ಎಂಬ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ನೀಡಿದೆ.
ಮಾತ್ರವಲ್ಲ, ಅತಿಯಾದ ಕೆಫೇನ್ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆಯೂ ಎಚ್ಚರಿಕೆ ನೀಡಿದೆ.
ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ (ಎನ್‌ಐಎನ್) ಜೊತೆಗೂಡಿ, 17 ಹೊಸ ಆಹಾರಕ್ರಮದ ನಿರ್ದೇಶನಗಳನ್ನು ಐಸಿಎಂಆರ್ ಬಿಡುಗಡೆ ಮಾಡಿದೆ. ಭಾರತೀಯರಿಗಾಗಿಯೇ ಬಿಡುಗಡೆ ಮಾಡಲಾಗಿರುವ ಈ ಮಾರ್ಗದರ್ಶಿ ಸೂತ್ರಗಳು ಆರೋಗ್ಯಕರ ಆಹಾರ ಕ್ರಮವನ್ನು ದೇಶದೆಲ್ಲೆಡೆ ಪ್ರಚುರಪಡಿಸುವ ಉದ್ದೇಶವನ್ನು ಹೊಂದಿವೆ. ಈ ನಿರ್ದೇಶನಗಳಲ್ಲಿ ಅತಿಯಾಗಿ ಕಾಫಿ-ಚಹಾ ಸೇವನೆಯ ಅಡ್ಡ ಪರಿಣಾಮಗಳನ್ನೂ ತಿಳಿಸಲಾಗಿದೆ.
ಹೆಚ್ಚಾದರೆ ಏನಾಗುತ್ತದೆ?
ಕಾಫಿ-ಚಹಾ ಹೆಚ್ಚು ಕುಡಿದರೆ ಏನಾಗುತ್ತದೆ ಎನ್ನುವುದಕ್ಕೆ ಸಂಸ್ಥೆ ಸ್ಪಷ್ಟ ಉತ್ತರ ನೀಡಿದೆ. ಚಹಾ, ಕಾಫಿ ಹೆಚ್ಚು ಕುಡಿಯುವುದರಿಂದ ಆಹಾರದಲ್ಲಿನ ಕಬ್ಬಿಣದ ಅಂಶವನ್ನು ಹೀರಿಕೊಳ್ಳಲು ದೇಹಕ್ಕೆ ತೊಡಕಾಗುತ್ತದೆ. ಕೆಫೇನ್ ಪೇಯಗಳಲ್ಲಿರುವ ಟ್ಯಾನಿನ್‌ಗಳು ಕಬ್ಬಿಣದಂಶ ಹೀರಿಕೊಳ್ಳಲು ಅಡ್ಡಿಪಡಿಸುತ್ತವೆ. ಇದರಿಂದ ಕಬ್ಬಿಣದಂಶದ ಕೊರತೆಯಾಗಿ ಅನೀಮಿಯ ಉಂಟಾಗಬಹುದು. ಜೊತೆಗೆ, ಕಾಫಿ-ಟೀ ಸೇವನೆ ಹೆಚ್ಚಾದರೆ ರಕ್ತದೊತ್ತಡ ಸ್ಥಿರವಾಗಿರದೆ, ಏರಿಳಿತ ಕಾಣಬಹುದು. ಹೃದಯದ ತೊಂದರೆಗಳು ಅಂಟಿಕೊಳ್ಳಬಹುದು.
ಯಾವಾಗ ಸೇವಿಸಬಹುದು?
ಹೊಟ್ಟೆ ತೀವ್ರವಾಗಿ ಹಸಿದಿದ್ದಾಗ, ಆಹಾರದ ಜೊತೆಗೆ ಅಥವಾ ಆಹಾರ ಸೇವಿಸಿದ ತಕ್ಷಣ ಕೆಫೇನ್ ಸೇವನೆ ಸರಿಯಲ್ಲ. ಬದಲಿಗೆ, ಆಹಾರ ಸೇವಿಸಿದ ಒಂದು ತಾಸಿನ ನಂತರ ಕಾಫಿ, ಚಹಾ ಕುಡಿಯಬಹುದು. ಇವುಗಳನ್ನು ಅತಿಯಾಗಿ ಕುಡಿಯುವುದು ಕೇಂದ್ರ ನರಮಂಡಲವನ್ನು ಪ್ರಚೋದಿಸುತ್ತದೆ. ಈ ಮೂಲಕ ವ್ಯಸನವನ್ನೂ ಉಂಟು ಮಾಡುತ್ತದೆ. ಹಾಗಾಗಿ ಇದನ್ನು ಮಿತಿಯಲ್ಲಿ ಇರಿಸಿಕೊಳ್ಳುವುದು ಸೂಕ್ತ.
ದಿನಕ್ಕೆ ಎಷ್ಟು?
ಇದರರ್ಥ ಕಾಫಿ-ಚಹಾ ಕುಡಿಯುವುದೇ ಬೇಡ ಎಂಬುದಲ್ಲ. ಬದಲಿಗೆ ಮಿತಿ ನಿಗದಿ ಮಾಡಿಕೊಳ್ಳಿ ಎನ್ನುತ್ತದೆ ಈ ನಿರ್ದೇಶನ. ದಿನಕ್ಕೆ 300 ಎಂ.ಜಿ.ಗಿಂತ ಹೆಚ್ಚು ಕೆಫೇನ್ ಸೇವನೆ ಸೂಕ್ತವಲ್ಲ. ಆದರೆ ಅದನ್ನು ಲೆಕ್ಕ ಹಾಕುವುದು ಹೇಗೆ? ತಾಜಾ ಡಿಕಾಕ್ಷನ್ ತೆಗೆದ 150 ಎಂ.ಎಲ್. ಕಾಫಿಯಲ್ಲಿ 80ರಿಂದ 120 ಎಂ.ಜಿ. ಕೆಫೇನ್ ಇರುತ್ತದೆ. ಅಷ್ಟೇ ಪ್ರಮಾಣದ ಇನ್‌ಸ್ಟಂಟ್ ಕಾಫಿಯಲ್ಲಿ 50ರಿಂದ 65 ಎಂ.ಜಿ. ಕೆಫೇನ್ ಇರುತ್ತದೆ. ಒಂದು ಸರ್ವಿಂಗ್ ಚಹಾದಲ್ಲಿ 30ರಿಂದ 65 ಎಂ.ಜಿ.ವರೆಗೂ ಕೆಫೇನ್ ದೇಹಕ್ಕೆ ದೊರೆಯುತ್ತದೆ. ಈ ಪ್ರಮಾಣಗಳನ್ನು ತಿಳಿದುಕೊಂಡರೆ, ಕೆಫೇನ್ ಎಷ್ಟು ಸೇವಿಸುತ್ತಿದ್ದೇವೆ ಎಂಬುದನ್ನು ಲೆಕ್ಕ ಹಾಕುವುದಕ್ಕೆ ಕಷ್ಟವಾಗುವುದಿಲ್ಲ.
ಹಾಲಿನ ಚಹಾ ಬೇಡ
ಭಾರತದಲ್ಲಿ ಚಹಾ ಎಂಬುದು ಪ್ರಾರಂಭವಾಗಿದ್ದು ಬ್ರಿಟೀಷರಿಂದ. ಇಂಗ್ಲಿಷ್ ಚಹಾ ಎಂದರೆ ಹಾಲು ಸೇರಿಸಿದ ಚಹಾ. ಬ್ಲ್ಯಾಕ್ ಟೀ, ಗ್ರೀನ್ ಟೀ, ಲೆಮೆನ್ ಟೀ ಇತ್ಯಾದಿಗಳೆಲ್ಲ ನಂತರದಲ್ಲಿ ಬಂದಿದ್ದು. ಆದರೆ ಹಾಲು ಬೆರೆಸಿದ ಚಹಾಗಿಂತ ಬ್ಲ್ಯಾಕ್ ಟೀ ಸೇವಿಸುವುದು ಒಳ್ಳೆಯದು ಎಂಬುದು ಐಸಿಎಂಆರ್ ಅಭಿಮತ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಬ್ಲ್ಯಾಕ್ ಟೀ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದರಿಂದ ಹೃದಯದ ಆರೋಗ್ಯ ಸುಧಾರಿಸುವ ಸಂಭವವಿದೆ. ಜೊತೆಗೆ, ಹೊಟ್ಟೆಯ ಕ್ಯಾನ್ಸರ್ ಭೀತಿಯನ್ನೂ ಕಡಿಮೆ ಮಾಡುತ್ತದೆ. ಹಾಗಾಗಿ ಹಾಲು ಬೆರೆಸಿದ ಚಹಾ ಸೇವನೆಯನ್ನು ಕಡಿಮೆ ಮಾಡಿ ಎಂಬುದು ಸಂಸ್ಥೆಯ ಕಿವಿಮಾತು.