SUDDIKSHANA KANNADA NEWS/DAVANAGERE/DATE:14_10_2025
ದಾವಣಗೆರೆ: ಪಕ್ಷದ ಮುತ್ಸದ್ದಿ ನಾಯಕರುಗಳು ಲೋಕಸಭಾ, ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಜೊತೆ ಶಾಮೀಲಾಗಿ ಬಿಜೆಪಿ ಸೋಲಿಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದು, ಈಗ ಕಾಂಗ್ರೆಸ್‌ನವರೊಂದಿಗೆ ಶಾಮೀಲಾಗಿಲ್ಲ ಎಂದು ಕಾರ್ಯಕರ್ತರನ್ನು ನಂಬಿಸುತ್ತಿರುವ ನಾಯಕರು ಬಿಜೆಪಿ ಕಾರ್ಯಾಲಯಕ್ಕೆ ಬಂದು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಮೇಲೆ ಆಣೆ ಮಾಡಿ ಕಾರ್ಯಕರ್ತರ ನಂಬಿಕೆಯನ್ನು ಉಳಿಸಿಕೊಳ್ಳಿರಿ ಎಂದು ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗವು ಆಹ್ವಾನ ನೀಡಿದೆ.
READ ALSO THIS STORY: ಬೀದಿ ಬದಿ ವ್ಯಾಪಾರಿಗಳಿಗೆ ಗುಡ್ ನ್ಯೂಸ್: ಆತ್ಮ ನಿರ್ಭರ್ ಯೋಜನೆಯಡಿ ವಿವಿಧ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಪಕ್ಷದ ಕಚೇರಿಗೆ ಬಂದು ಯಾವಾಗ ಆಣೆ ಮಾಡುತ್ತೀರಿ ಎಂಬುದನ್ನು ನೀವೇ ದಿನಾಂಕ ನಿಗದಿಪಡಿಸಿರಿ. ಹೊನ್ನಾಳಿಯ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ಹೀನಾಯವಾಗಿ ಸೋತು ಈಗ ಮಾನ ಮರ್ಯಾದೆ ಇಲ್ಲದೆ ಜಿಲ್ಲಾ ಮುಖಂಡವತ್ವವನ್ನು ವಹಿಸಿಕೊಳ್ಳಲು ಹವಣಿಸುತ್ತಿರುವ ನಾಯಕರುಗಳೇ ಮೊದಲು ನಿಮ್ಮ ಕ್ಷೇತ್ರವನ್ನು ಗಟ್ಟಿ ಮಾಡಿಕೊಳ್ಳಿ ಎಂದು ಪರೋಕ್ಷವಾಗಿ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯಗೆ ಬಳಗದ ಅಧ್ಯಕ್ಷ ಕೃಷ್ಣಮೂರ್ತಿ ಪವಾರ್ ಟಾಂಗ್ ಕೊಟ್ಟಿದ್ದಾರೆ.
ಪಕ್ಷಕ್ಕಾಗಿ, ಪಕ್ಷದ ಪುರೋಭಿವೃದ್ಧಿಗಾಗಿ ಹಗಲಿರುಳು ಮನೆ-ಮಠ ವ್ಯವಹಾರಗಳನ್ನು ತೊರೆದು ನಿಷ್ಠೆಯಿಂದ ಪ್ರಾಮಾಣಿಕವಾಗಿ ದುಡಿದ ಕಾರ್ಯಕರ್ತರುಗಳಿಗೆ ನಮ್ಮ ಜಿಲ್ಲೆಯ ಗುಂಪುಗಾರಿಕೆಯಿಂದಾಗಿ ಪಕ್ಷದ ವರ್ಚಸ್ಸಿಗೆ ಸಾಕಷ್ಟು ಹಾನಿಯಾಗಿದೆ. ಅದಲ್ಲದೆ ಇವರ ಗುಂಪುಗಾರಿಕೆಯಿಂದ ಪಕ್ಷದ ನಾಯಕರಾಗಿ ಹೊರಹೊಮ್ಮಬೇಕಾಗಿದ್ದ ಅನೇಕ ಕಾರ್ಯಕರ್ತರನ್ನು ಮೂಲೆಗುಂಪು ಮಾಡಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಗೆ ಬಂದು ಗುಂಪುಗಾರಿಕೆ ಮಾಡುವುದನ್ನು ಬಿಟ್ಟು ಪಕ್ಷದ ನಿಷ್ಠಾವಂತ ಕಾರ್ಯಕರ್ತರುಗಳನ್ನು ಒಳಗೊಂಡು ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡಿ, ಮುತ್ಸದ್ದಿ ರಾಜಕಾರಣಿ ಮಾಜಿ ಮುಖ್ಯ ಸಚೇತಕರು ಹಾಗೂ ಜಿಲ್ಲಾಧ್ಯಕ್ಷರು ಎರಡೂ ಗುಂಪುಗಳನ್ನು ಒಂದು ಮಾಡುವ ಜವಾಬ್ದಾರಿ ಇದ್ದರೂ ಈ ಕೆಲಸವನ್ನು ಯಾಕೆ ಮಾಡುತ್ತಿಲ್ಲ. ಮೊದಲು ಈ ಕೆಲಸವನ್ನು ಮಾಡಿರಿ ಎಂದು ಸಲಹೆ ನೀಡಿದ್ದಾರೆ.
ಜಿಲ್ಲಾಧ್ಯಕ್ಷರು ಎರಡು ಗುಂಪುಗಳನ್ನು ಒಂದು ಮಾಡುವ ಪ್ರಯತ್ನ ಮಾಡಿ. ನಾವು ಯಾವುದೇ ಗುಂಪಿನ ಅಭಿಮಾನಿಗಳಲ್ಲ, ನಾವು ಎಲ್ಲರೂ ಪಕ್ಷ ನಿಷ್ಠರು. ಹಾಗೂ ಮಾಡಿರುವ ತಪ್ಪಿಗೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿ. ಶಿಸ್ತು ಬದ್ಧ ಪಕ್ಷಕ್ಕೆ ಶಿಸ್ತನ್ನು ಮರಳಿ ತರುವ ಪ್ರಯತ್ನ ಮಾಡಿ ಎಂದು ಕೋರಿದ್ದಾರೆ.
ಬಳಗದ ಗೌರವಾಧ್ಯಕ್ಷರಾದ ಅವರಗೊಳ್ಳದ ಷಣ್ಮುಖಯ್ಯ, ಪ್ರಧಾನ – ಕಾರ್ಯದರ್ಶಿಗಳಾದ ಹೆಚ್.ಎಸ್.ಲಿಂಗರಾಜ್, ಉಪಾಧ್ಯಕ್ಷ ಗೌಳಿ ಲಿಂಗರಾಜ್ ಹಾಗೂ ಹಾಲೇಕಲ್ ಚಂದ್ರ ನಾಯಕ್, ಹೆಚ್.ಎನ್.ಶಿವಕುಮಾರ್, ಪಿ.ಎನ್. ಜಗದೀಶ್ ಕುಮಾರ ಪಿಸೆ ಸಹ ಈ ಬಗ್ಗೆ ಒತ್ತಾಯಿಸಿದ್ದಾರೆ.