SUDDIKSHANA KANNADA NEWS/ DAVANAGERE/ DATE:20-07-2023
ದಾವಣಗೆರೆ Davanagere): ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಶಂಕಿತ ಉಗ್ರರು ಸೆರೆ ಸಿಕ್ಕ ಬೆನ್ನಲ್ಲೇ ದಾವಣಗೆರೆಯಲ್ಲಿಯೂ ಶಂಕಿತ ಉಗ್ರನೊಬ್ಬ ಸೆರೆ ಸಿಕ್ಕಿದ್ದಾನೆ. ಸಿಸಿಬಿ ಪೊಲೀಸರು ಬಂಧಿಸಿ ಈತನನ್ನು ಕರೆದುಕೊಂಡು ಹೋಗಿರುವುದಾಗಿ ಸಿಸಿಬಿ ಉನ್ನತ ಮೂಲಗಳು ದೃಢಪಡಿಸಿವೆ.
ಬೆಂಗಳೂರಿನ ಫಯಾಜ್ (32) ಬಂಧಿತ ಶಂಕಿತ ಉಗ್ರ. ದಾವಣಗೆರೆ ನಗರದ ಆಜಾದ್ ನಗರದಲ್ಲಿ ಈತನನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ಈತ ಬೆಂಗಳೂರು, ಚಿತ್ರದುರ್ಗದಲ್ಲಿ ವುಡ್ ವರ್ಕ್ ಪಾಲಿಶ್ ಮಾಡುವ ಕೆಲಸ ಮಾಡುತ್ತಿದ್ದ. ದಾವಣಗೆರೆಯಲ್ಲಿ ಈತನ ಎರಡನೇ ಪತ್ನಿ ಇದ್ದು, ಆಗಾಗ್ಗೆ ಇಲ್ಲಿಗೆ ಬಂದು ಹೋಗುತ್ತಿದ್ದ. ಈತ ಮೊದಲನೇ ಮದುವೆಯಾಗಿದ್ದರೂ ಆ ಬಳಿಕ ದಾವಣಗೆರೆಯಲ್ಲಿಯೂ ಮದುವೆಯಾಗಿ ಸಂಸಾರ ನಡೆಸುತ್ತಿದ್ದ ಎಂದು ತಿಳಿದು ಬಂದಿದ್ದು, ಮದುವೆಯಾಗಿರುವ ಕುರಿತಂತೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಇಲ್ಲಿನ ಮಹಿಳೆಯೊಂದಿಗೆ ಪತಿ – ಪತ್ನಿ ಸಂಬಂಧ ಹೊಂದಿದ್ದ ಎಂದು ಮೂಲಗಳು ಮಾಹಿತಿ ನೀಡಿವೆ.

ಹೆಚ್ಚಾಗಿ ಬೆಂಗಳೂರು ಹಾಗೂ ಚಿತ್ರದುರ್ಗದಲ್ಲಿ ಕೆಲಸ ಮಾಡುತ್ತಿದ್ದ. ಚಿತ್ರದುರ್ಗಕ್ಕೆ ವುಡ್ ವರ್ಕ್ ಪಾಲಿಶ್ ಕೆಲಸ ಸಿಕ್ಕಾಗ ಬರುತ್ತಿದ್ದ. ಆಗ ದಾವಣಗೆರೆಯಲ್ಲಿನ ತನ್ನ ಎರಡನೇ ಪತ್ನಿ ಮನೆಗೂ ಬಂದು ಹೋಗುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಈತ ಬೆಂಗಳೂರಿನಿಂದ ಬಂದರೂ ಆತನ ಬಗ್ಗೆ ಅಕ್ಕಪಕ್ಕದವರಿಗೆ ಹೆಚ್ಚಿನ ಮಾಹಿತಿ ಇಲ್ಲ. ಯಾಕೆಂದರೆ ಒಮ್ಮೊಮ್ಮೆ ಬಂದರೆ ಎರಡರಿಂದ ಮೂರು ದಿನ ಇರುತ್ತಿದ್ದ. ಮತ್ತೆ ಬಂದು ಹಾಗೆ ಹೋಗುತ್ತಿದ್ದ. ಹಾಗಾಗಿ, ಹೆಚ್ಚಾಗಿ ಸುತ್ತಮುತ್ತಲಿನ ಪ್ರದೇಶದವರಿಗೆ ಈತ ಪರಿಚಯ ಇದ್ದದ್ದು ಕಡಿಮೆ ಎಂದು ಹೇಳಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ:
M. P. Renukacharya: ಮುಗಿಯದ ಜಿಎಂಎಸ್ – ಎಂಪಿಆರ್ ಮಾತಿನ ವಾಗ್ಯುದ್ಧ: ಸಿದ್ದೇಶ್ವರರ “ಆ ಮಾತಿನಿಂದ” ಮನಸ್ಸಿಗೆ ತುಂಬಾ ನೋವಾಗಿದೆ ಎಂದಿದ್ಯಾಕೆ ರೇಣುಕಾಚಾರ್ಯ…?
ಈತನ ಮೇಲಿವೆ ಐದು ಕೇಸ್ ಗಳು:
ಬೆಂಗಳೂರಿನವನಾದ ಫಯಾಜ್ ಈ ಹಿಂದೆಯೂ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪ ಕೇಳಿ ಬಂದಿದೆ. ಬೆಂಗಳೂರಿನಲ್ಲಿ ಡ್ರಗ್ಸ್, ಆಯುಧ ಮಾರಾಟ ಪ್ರಕರಣ ಸಂಬಂಧ ಐದು ಪ್ರಕರಣಗಳು ದಾಖಲಾಗಿವೆ. ಅಕ್ರಮ ಆಯುಧ ಮಾರಾಟ ಪ್ರಕರಣದಲ್ಲಿ ಜೈಲು ಸೇರಿದ್ದ ಈತ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆ ಆಗಿ ಬಂದಿದ್ದ ಎಂದು ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಅವರು ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಶಾಂತಿಯುತವಾಗಿದ್ದ ದಾವಣಗೆರೆಯಲ್ಲಿಯೂ
ಶಂಕಿತ ಉಗ್ರನ ಚಲನವಲನ ಕಂಡು ಬಂದಿದ್ದು ಆತಂಕಕ್ಕೆ ಕಾರಣವಾಗಿದೆ.
ಚಿತ್ರದುರ್ಗದಲ್ಲಿ ತಲಾಶ್:
ಇನ್ನು ಫಯಾಜ್ ಚಿತ್ರದುರ್ಗ ಜಿಲ್ಲೆಯ ಕೆಲವೆಡೆ ವುಡ್ ವರ್ಕ್ ಪಾಲಿಶ್ ಕೆಲಸ ಮಾಡಿದ್ದು, ಎಲ್ಲೆಲ್ಲಿ ಕೆಲಸ ಮಾಡಿದ್ದ, ಈತನಿಗೆ ಕೆಲಸ ಕೊಟ್ಟವರು ಯಾರು? ಯಾರ ಮೂಲಕ ಬಂದಿದ್ದ? ಚಿತ್ರದುರ್ಗದಲ್ಲಿ ಏನಾದರೂ ಈತನ ಸಹಚರರು ಇದ್ದಾರೆಯೇ ಎಂಬ ಕುರಿತಂತೆ ತನಿಖೆಯೂ ಮುಂದುವರಿದಿದೆ. ದಾವಣಗೆರೆಯಲ್ಲಿ ಬೇರೆ ಯಾರ ಜೊತೆಗೆಲ್ಲಾ ಸಂಪರ್ಕ ಹೊಂದಿರುವ ಕುರಿತಂತೆಯೂ ಮಾಹಿತಿ ಕಲೆ ಹಾಕುತ್ತಿದೆ. ಕೇವಲ ಪತ್ನಿ ಮನೆಗೆ ಮಾತ್ರ ಬಂದು ಹೋಗುತ್ತಿದ್ದನೋ ಅಥವಾ ಬೇರೆ ಯಾವುದಾದರೂ ಉದ್ದೇಶ ಇಟ್ಟುಕೊಂಡು ಬರುತ್ತಿದ್ದನೋ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಬೆಂಗಳೂರಿನಲ್ಲಿ ಸೆರೆ ಸಿಕ್ಕವರು ಕೊಟ್ಟರೇ ಮಾಹಿತಿ…?
ಫಯಾಜ್ ಬೆಂಗಳೂರಿನಲ್ಲಿ ಸೆರೆ ಸಿಕ್ಕ ಶಂಕಿತ ಉಗ್ರರ ಮಾಹಿತಿ ಆಧರಿಸಿ ಈತನನ್ನು ಕರೆದುಕೊಂಡು ಹೋಗಲಾಗಿದೆ ಎನ್ನಲಾಗಿದೆ. ಮಾತ್ರವಲ್ಲ, ಬೆಂಗಳೂರಿನಲ್ಲಿಯೂ ಈತ ವುಡ್ ವರ್ಕ್ ಪಾಲಿಶ್ ಮಾಡುತ್ತಿದ್ದ. ಹಾಗಾಗಿ, ಹೆಚ್ಚಿನ ಕಡೆಗಳಲ್ಲಿ ಓಡಾಡಿರುವ ಸಾಧ್ಯತೆಯೂ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಈತನನ್ನು ದಾವಣಗೆರೆಯಿಂದ ಕರೆದುಕೊಂಡು ಹೋಗಿದ್ದು, ತನಿಖೆಯಲ್ಲಿ ಸತ್ಯಾಸತ್ಯತೆ ತಿಳಿದು ಬರಬೇಕಿದೆ.
Davanagere News, Davanagere Suspect Terrorist Arrest, Davanagere News Updates, Davanagere Suddi, Davanagere