SUDDIKSHANA KANNADA NEWS/ DAVANAGERE/ DATE:30-10-2024
ದಾವಣಗೆರೆ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2024-25ನೇ ಸಾಲಿನಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ಶೇಂಗಾ ಉತ್ಪನ್ನವನ್ನು ಖರೀದಿಸಲು ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ರೈತರಿಂದ ಶೇಂಗಾ ಉತ್ಪನ್ನವನ್ನು ಪ್ರತಿ ಎಕರೆಗೆ ಮೂರು ಕ್ವಿಂಟಾಲ್ ಹಾಗೂ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಾಲ್ ಎಫ್.ಎ.ಕ್ಯೂ ಗುಣಮಟ್ಟದ ಶೇಂಗಾವನ್ನು ಪ್ರತಿ ಕ್ಚಿಂಟಾಲ್ ಗೆ ರೂ.6,783 ಗಳಂತೆ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುವುದು.
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಅನುಸಾರ ನ್ಯಾಫೆಡ್ ಸಂಸ್ಥೆಯನ್ನು ಖರೀದಿ ಏಜೆನ್ಸಿಯಾಗಿ ಹಾಗೂ ಕರ್ನಾಟಕ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳಿ ನಿಯಮಿತ, ಬೆಂಗಳೂರು ಇವರನ್ನು ರಾಜ್ಯ ಮಟ್ಟದ ಖರೀದಿ ಏಜೆನ್ಸಿಯನ್ನಾಗಿ ನೇಮಿಸಲಾಗಿದೆ.
ರೈತರ ನೋಂದಣಿ ಕಾಲಾವಧಿಯನ್ನು 45 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 90 ದಿನಗಳವರೆಗೆ ನಿಗಧಿಪಡಿಸಲಾಗಿದೆ. ರೈತರು ಫ್ರೂಟ್ಸ್ ಐ.ಡಿಯೊಂದಿಗೆ ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳ ನಿಯಮಿತ, ದಾವಣಗೆರೆ, ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳ ನಿಯಮಿತ, ಜಗಳೂರು ಈ ಸ್ಥಳಗಳಲ್ಲಿನ ಖರೀದಿ ಕೇಂದ್ರಗಳಲ್ಲಿ ನೊಂದಣಿ ಮಾಡಿಕೊಂಡು ಶೇಂಗಾ ಮಾರಾಟ ಮಾಡಬಹುದು.
ಜಿಲ್ಲೆಯಲ್ಲಿ ಖರೀದಿಸಿದ ಶೇಂಗಾ ಹುಟ್ಟುವಳಿಯನ್ನು ದಾಸ್ತಾನು ಮಾಡಲು ಜಿಲ್ಲೆಯಲ್ಲಿರುವ ರಾಜ್ಯ ಹಾಗೂ ಕೇಂದ್ರ ಉಗ್ರಾಣಗಳಲ್ಲಿ ಸ್ಥಳ ಕಾಯ್ದಿರಿಸಲು ಸೂಚಿಸಲಾಯಿತು.
ಶೇಂಗಾ ಮಾರಾಟ ಮಾಡಿದ ರೈತರಿಗೆ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಮಾರಾಟ ಮಾಡಿದ ರೈತರ ಹೆಸರಿನ ಅಧಾರ್ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಜಮಾ ಆಗುವಂತೆ ಪಾವತಿ ಮಾಡಲು ಪ್ರತಿನಿತ್ಯ ಖರೀದಿಸುವ ಪ್ರಗತಿಯ ವಿವರವನ್ನು ಸರ್ಕಾರಕ್ಕೆ ಹಾಗೂ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಗೆ ಇ-ಮೇಲ್ ಮೂಲಕ ಸಲ್ಲಿಸಲು ಸೂಚಿಸಲಾಯಿತು.
ಗುಣಮಟ್ಟ ಪರಿಶೀಲನೆಗಾಗಿ ಗ್ರೇಡರ್ ಗಳನ್ನು ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ನೇಮಕ ಮಾಡಲು ಹಾಗೂ ಸಿಬ್ಬಂದಿಗಳಿಗೆ ಎಫ್.ಎ.ಕ್ಯೂ ಗ್ರೇಡಿಂಗ್ ತರಬೇತಿ ನೀಡಲು ಸೂಚಿಸಲಾಯಿತು.