SUDDIKSHANA KANNADA NEWS/ DAVANAGERE/ DATE:13-08-2023
ದಾವಣಗೆರೆ: ಏಷ್ಯಾಖಂಡದ ಎರಡನೇ ಅತಿ ದೊಡ್ಡ ಕೆರೆ ಸೂಳೆಕೆರೆ (Sulekere). ಲಕ್ಷಾಂತರ ಹೆಕ್ಟೇರ್ ಗೆ ನೀರುಣಿಸುವ ಜೀವಸೆಲೆ. ಚನ್ನಗಿರಿ, ಚಿತ್ರದುರ್ಗ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಪೂರೈಸುವ ಜೀವಜಲ. ಆದ್ರೆ, ಈಗ ಕುಡಿಯಲು ಈ ನೀರು ಯೋಗ್ಯವಲ್ಲ ಎಂಬ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ. ಚನ್ನಗಿರಿ ತಾಲೂಕು ವೈದ್ಯಾಧಿಕಾರಿಗಳೇ ಇದನ್ನು ಸ್ಪಷ್ಟಪಡಿಸಿದ್ದಾರೆ. ಕುಡಿಯಲು ನೀರು ಯೋಗ್ಯವಲ್ಲ ಎಂಬ ಸತ್ಯ ಹೊರಬೀಳುತ್ತಲೇ ಲಕ್ಷಾಂತರ ಜೀವಚರ ಹಾಗೂ ಲಕ್ಷಾಂತರ ಹೆಕ್ಟೇರ್ ಪ್ರದೇಶಗಳಲ್ಲಿ ಈ ನೀರು ನಂಬಿರುವ ರೈತರ ಎದೆಯಲ್ಲಿ ಢವ ಢವ ಶುರುವಾಗಿದೆ.
ಸೂಳೆಕೆರೆ(Sulekere)ಯಲ್ಲಿ ಕೆಂಪು ಬಣ್ಣದ ಪಾಚಿ ಕಟ್ಟಿದೆ. ಹೂಳೆತ್ತುವ ಕಾರ್ಯ ಪರಿಣಾಮಕಾರಿ, ವೈಜ್ಞಾನಿಕವಾಗಿ ನಡೆಯದ ಈ ಕಾರಣ ಸಮಸ್ಯೆ ತಂದೊಡ್ಡಿದೆ. ಚನ್ನಗಿರಿ ಪಟ್ಟಣಕ್ಕೆ ಸೂಳೆಕೆ(Sulekere)ರೆಯಿಂದ ಸರಬರಾಜು ಆಗುತ್ತಿದ್ದ ನೀರು ಬಣ್ಣಕ್ಕೆ ತಿರುಗಿದೆ. ಇನ್ನು ವೈದ್ಯಾಧಿಕಾರಿಗಳೇ ಕುಡಿಯಲು ನೀರು ಯೋಗ್ಯವಾಗಿಲ್ಲ ಎಂದು ಪ್ರಮಾಣೀಕರಿಸುತ್ತಿದ್ದಂತೆ ಚನ್ನಗಿರಿ ಪಟ್ಟಣಕ್ಕೆ ಪೂರೈಸುತ್ತಿದ್ದ ನೀರು ಸ್ಥಗಿತಗೊಳಿಸಲು ಪುರಸಭೆ ನಿರ್ಧರಿಸಿದೆ.
ಎಷ್ಟು ಹಳ್ಳಿಗಳಿಗೆ ನೀರಾವರಿ ಸೌಲಭ್ಯ..?
ಸೂಳೆಕೆರೆ(Sulekere) ನಂಬಿಕೊಂಡು ಚನ್ನಗಿರಿ ಸೇರಿದಂತೆ ಸುಮಾರು 20 ಕ್ಕೂ ಹೆಚ್ಚು ಹಳ್ಳಿಗಳ ಕೃಷಿ ಭೂಮಿಯಲ್ಲಿ ಉಳುಮೆ ಮಾಡುತ್ತಾರೆ. ಅಡಿಕೆ, ಭತ್ತ, ಕಬ್ಬು ಸೇರಿದಂತೆ ಇತರೆ ಬೆಳೆಗಳನ್ನು ರೈತರು ಬೆಳೆಯುತ್ತಾರೆ. ಮಾತ್ರವಲ್ಲ, ಲಕ್ಷಕ್ಕೂ
ಅಧಿಕ ಮಂದಿ ಈ ಕೆರೆ ನಂಬಿಕೊಂಡು ಇಂದೂ ಸಹ ಜೀವನ ಸಾಗಿಸುತ್ತಿದ್ದಾರೆ.
ಜೀವಜಲಚರಗಳ ಪಾಡೇನು…?
ಇನ್ನು ಒಂದೂವರೆ ಲಕ್ಷಕ್ಕೂ ಅಧಿಕ ಮೀನಿನ ಮರಿಗಳನ್ನು ಸೂಳೆಕೆರೆ(Sulekere)ಗೆ ಮೀನುಗಾರಿಕೆ ಇಲಾಖೆಯು ಮೀನಿನ ಮರಿಗಳನ್ನು ಬಿಡುತ್ತದೆ. ಈಗ ಸೂಳೆಕೆರೆ (Sulekere)ನೀರು ಮನುಷ್ಯರಿಗೆ ಕುಡಿಯಲು ನೀರು ಯೋಗ್ಯವಲ್ಲ ಎಂದು ಹೇಳಿರುವುದರಿಂದ ಇವುಗಳ ಪಾಡೇನೂ ಎಂಬ ಆತಂಕ ನಿರ್ಮಾಣವಾಗಿದೆ. ಜೊತೆಗೆ ಕಪ್ಪೆಗಳು ಸೇರಿದಂತೆ ಬೇರೆ ಬೇರೆ ಜಲಚರಗಳು ಸಹ ಈ ಕೆರೆಯಲ್ಲಿದ್ದು, ನೀರು ಕುಡಿದು ಅಸ್ವಸ್ಥವಾಗುತ್ತವೆಯೋ, ಇದಾದರೆ ಚಿಕಿತ್ಸೆ ಕೊಡುವುದೇ ಹೇಗೆ ಎಂಬ ಪ್ರಶ್ನೆಯೂ ಕಾಡಲಾರಂಭಿಸಿದೆ.
ಮೀನು ತಿನ್ನಬಹುದೇ..?
ಸೂಳೆಕೆರೆ(Sulekere)ಯಲ್ಲಿ ಮೀನು ಹಿಡಿದು ಚನ್ನಗಿರಿ, ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಸೇರಿದಂತೆ ಹಲವು ಗ್ರಾಮಗಳ ಜನರು ಈ ಮೀನು ತೆಗೆದುಕೊಂಡು ಹೋಗಿ ಸೇವಿಸುತ್ತಿದ್ದರು. ಈಗ ಸೂಳೆಕೆರೆ ನೀರು ಕಲುಷಿತಗೊಂಡಿರುವ ಕಾರಣದಿಂದ ಮತ್ಸೋದ್ಯಮದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವುದು ಖಚಿತ. ಈ ಕೆರೆಯಲ್ಲಿನ ನೀರು ಸೇವಿಸುವ ಮೀನು ತಿಂದರೆ ಆರೋಗ್ಯವೂ ಹದಗೆಡುವ ಸಾಧ್ಯತೆ ಇದೆ. ಮೀನು ಪ್ರಿಯರು ಸಹ ಈ ನೀರಿನಲ್ಲಿ ಬೆಳೆದ ಮೀನುಗಳನ್ನು ತಿನ್ನಲು ಹಿಂದೂ ಮುಂದು ನೋಡುವಂಥ ಸ್ಥಿತಿ ನಿರ್ಮಾಣವಾಗಿದೆ.
ವೈದ್ಯಾಧಿಕಾರಿಗಳು ಏನು ಹೇಳುತ್ತಾರೆ..?
ಕುಡಿಯಲು ನೀರು ಯೋಗ್ಯವಲ್ಲ ಎಂದಾದರೆ ಅಲ್ಲಿರುವಂಥ ಮೀನು ಸೇವಿಸಿದರೆ ಆರೋಗ್ಯ ಹದಗೆಡುವ ಸಾಧ್ಯತೆ ಇರುತ್ತದೆ. ಮಳೆಗಾಲದಲ್ಲಿ ಹಳ್ಳಕೊಳ್ಳಗಳಿಂದ ನೀರು ಬರುವುದು, ಮಳೆ ನೀರು ಹರಿದು ಬರುವುದರಿಂದ ತ್ಯಾಜ್ಯ ಹೆಚ್ಚಿರುತ್ತದೆ. ಹಾಗಾಗಿ,
ಮೀನು ಬಳಕೆ ಮಾಡುವವರು ಕಡಿಮೆ. ಆದ್ರೆ, ನೀರು ಕಲುಷಿತಗೊಂಡಿದ್ದರೆ ಮೀನು ಸೇವಿಸಿದ ಬಳಿಕ ಜ್ವರ, ಶೀತ, ಕೆಮ್ಮು, ಬೇಧಿ ಸೇರಿದಂತೆ ಕೆಲ ಆರೋಗ್ಯ ಸಂಬಂಧಿತ ಸಮಸ್ಯೆಗಳು ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮೀನುಗಾರಿಕೆ ಇಲಾಖೆಯ
ಅಧಿಕಾರಿಗಳು ಇಂಥ ಸೂಕ್ಷ್ಮ ಸಮಸ್ಯೆ ಎದುರಾದಾಗ ಕ್ರಮ ತೆಗೆದುಕೊಳ್ಳುತ್ತಾರೆ. ಇಂಥ ಮೀನು ಸೇವಿಸದಿದ್ದರೆ ಒಳ್ಳೆಯದು ಎನ್ನುವುದು ಆರೋಗ್ಯ ವೈದ್ಯಾಧಿಕಾರಿಗಳ ಸ್ಪಷ್ಟನೆ.
ಚನ್ನಗಿರಿ ತಾಲೂಕಿನ ಕೆಲವೆಡೆ ಬಣ್ಣದ ನೀರು ಪೂರೈಕೆಯಾಗುತ್ತಿದ್ದು, ಕಲುಷಿತಗೊಂಡಿರುವುದು ಗೊತ್ತಾಗಿದೆ. ಚನ್ನಗಿರಿ ತಾಲೂಕಿನ ಮುದಿಗೆರೆ ಗ್ರಾಮದಲ್ಲಿ ಸುಮಾರು ಹದಿನೈದು ದಿನಗಳಿಂದ ಈ ಸಮಸ್ಯೆ ಎದುರಾಗಿದೆ. ಆದ್ರೆ, ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ ಎಂಬ ಮಾತು ಕೇಳಿ ಬಂದಿದೆ. ಇದೇ ರೀತಿಯಲ್ಲಿ ಸೂಳೆಕೆರೆಯಿಂದ ನೀರು ಸರಬರಾಜಾಗುವ ಗ್ರಾಮಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಮಾಹಿತಿ ಸಿಕ್ಕಿದೆ.
ಈ ಸುದ್ದಿಯನ್ನೂ ಓದಿ:
Independence Day: ಸ್ವಾತಂತ್ರ್ಯ ದಿನಾಚರಣೆಯಂದು ಇರಬೇಕು ಶಾಲಾ ಮಕ್ಕಳ ಕಾಳಜಿ: ಡಿ. ಎಸ್. ಹೇಮಂತ್ ರು ಕೊಟ್ಟಿರುವ ಸಲಹೆ, ಮನವಿ ಏನು…?
ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ:
ಸೂಳೆಕೆರೆ ನೀರಿನ ಬದಲಿಗೆ ಚನ್ನಗಿರಿ ತಾಲೂಕಿನ ಹಿರೇಮಳಲಿ ಗ್ರಾಮದಲ್ಲಿನ ಪಂಪ್ ಹೌಸ್ ನಿಂದ ಭದ್ರಾ ನಾಲೆಯ ನೀರನ್ನು ಚನ್ನಗಿರಿ ಪಟ್ಟಣದ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ.
ಯಾಕಾಗಿ ಈ ಸಮಸ್ಯೆ…?
ಸೂಳೆಕೆರೆ(Sulekere)ಯ ನೀರು ಶುದ್ಧೀಕರಣ ಘಟಕದ ಸೂಕ್ತ ನಿರ್ವಹಣೆ ಇಲ್ಲದ ಕಾರಣ ಈ ಸಮಸ್ಯೆಯಾಗಿದೆ. ನೀರಿನ ಘಟಕವು ಸಂಪೂರ್ಣವಾಗಿ ತುಕ್ಕು ಹಿಡಿದಿದ್ದು, ಹಾಳಾಗಿದೆ. ಹೊಸದಾಗಿ ಫಿಲ್ಟರ್ ಅಳವಡಿಸುವ ಕೆಲಸವು ಜರೂರು ಆಗಬೇಕಿದೆ. ನೀರು ಸಂಸ್ಕರಣೆ ಸರಿಯಾದ ಕ್ರಮದಲ್ಲಿ ಆಗುತ್ತಿಲ್ಲ.
ಮೂರು ತಿಂಗಳಿನಿಂದಲೂ ಇದೆ ಈ ಸಮಸ್ಯೆ:
ಕಳೆದ ಮೂರು ತಿಂಗಳಿನಿಂದಲೂ ಈ ಸಮಸ್ಯೆ ತಲೆದೋರಿದೆ. ಆದರೂ ಚನ್ನಗಿರಿ ತಾಲೂಕು ಆಡಳಿತ ಎಚ್ಚೆತ್ತುಕೊಂಡಿಲ್ಲ. ಮಳೆಗಾಲ ಆದ ಕಾರಣ ಜನರೂ ಸಹ ಗಂಭೀರವಾಗಿ ಪರಿಗಣಿಸಿಲ್ಲ. ಆದ್ರೆ, ಮಳೆ ನಿಂತಲೂ ಕಲುಷಿತ ನೀರು ನಿಲ್ಲದ ಕಾರಣ ಆತಂಕಕ್ಕೆ ಒಳಗಾಗಿ ಮಾಹಿತಿ ನೀಡಿದ್ದಾರೆ. ಮನೆಗಳಲ್ಲಿನ ನಲ್ಲಿಗಳಲ್ಲಿಯೂ ಕಲುಷಿತ ನೀರು ಬರುತ್ತಿದೆ. ಜನರು ನೀರು ಉಪಯೋಗಿಸಲು ಆಗದ ರೀತಿಯಲ್ಲಿದೆ. ಚನ್ನಗಿರಿ ಪಟ್ಟಣಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದರೂ ಉಳಿದ ಗ್ರಾಮಗಳ ಸ್ಥಿತಿ ಏನು? ಚಿತ್ರದುರ್ಗ ಜಿಲ್ಲೆಯ ಜೀವಸೆಲೆಯಾಗಿರುವ ಈ ನೀರು ಬಳಕೆಗೆ ಯೋಗ್ಯವಲ್ಲದ ಕಾರಣ ಅಲ್ಲಿಯೂ ನೀರಿಗೆ ಹಾಹಾಕಾರ ಎದುರಾಗುವ ಆತಂಕವೂ ಹೆಚ್ಚಾಗುತ್ತಿದೆ.
ಕೃಷಿಗೆ ಆಗುತ್ತಾ ಸಮಸ್ಯೆ…?
ತಾಲೂಕು ವೈದ್ಯಾಧಿಕಾರಿಗಳು ಸದ್ಯಕ್ಕೆ ಕುಡಿಯಲು ನೀರು ಸೂಕ್ತವಲ್ಲ ಎಂಬ ಪ್ರಮಾಣೀಕರಿಸಿರುವುದರಿಂದ ಕೃಷಿ ಬಳಕೆಗೆ ಯೋಗ್ಯವೋ ಅಥವಾ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬುದು ರೈತರ ದುಗುಡ ಹೆಚ್ಚಾಗಲು ಕಾರಣವಾಗಿದೆ. ಕಳೆದ ಮೂರು ದಿನಗಳಿಂದ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ. ನೀರನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಎರಡನೇ ವರದಿ ಬರಬೇಕಿದೆ.
ಡಿಹೆಚ್ ಒ ಭೇಟಿ:
ಸೂಳೆಕೆರೆ (Sulekere)ನೀರು ಕುಡಿಯಲು ಯೋಗ್ಯವಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಡಿಹೆಚ್ ಒ ನಾಗರಾಜ್ ಸೇರಿದಂತೆ ಅಧಿಕಾರಿಗಳ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿತು. ಸೂಳೆಕೆರೆಯ ನೀರು ಶುದ್ಧೀಕರಣ ಘಟಕಕ್ಕೂ ಭೇಟಿ ನೀಡಿ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಮಾತ್ರವಲ್ಲ, ಕಲುಷಿತ ನೀರು ಇರುವುದರಿಂದ ಮತ್ತೊಮ್ಮೆ ನೀರಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ವರದಿ ಬಂದ ಬಳಿಕ ಈ ನೀರು ಎಷ್ಟರ ಮಟ್ಟಿಗೆ ಅಪಾಯಕಾರಿ ಎಂಬುದು ಗೊತ್ತಾಗುತ್ತದೆ.
ತರಕಾರಿ ಬೆಳೆಯಬಹುದೇ…?
ಈ ನೀರು ಆಧರಿಸಿ ತರಕಾರಿ ಬೆಳೆಯುತ್ತಿರುವವರು ಗೊಂದಲಕ್ಕೀಡಾಗಿದ್ದಾರೆ. ಈ ನೀರು ಜಮೀನುಗಳಿಗೆ ಬಳಕೆ ಮಾಡಬೇಕೋ ಅಥವಾ ಬೇಡವೋ ಎಂಬ ಜಿಜ್ಞಾಸೆಗೆ ಒಳಗಾಗಿದ್ದಾರೆ. ಮತ್ತೊಂದು ಆಘಾತಕಾರಿ ವಿಚಾರ ಎಂದರೆ ಈ ನೀರಿನಲ್ಲಿ ಬೆಳೆದ ತರಕಾರಿ ಸೇವಿಸಿ ಯಾರಾದರೂ ಅಸ್ವಸ್ಥಗೊಂಡರೆ ಎಂಬುದು.
ಒಟ್ಟಿನಲ್ಲಿ ಚಿತ್ರದುರ್ಗ, ಚನ್ನಗಿರಿ ಜನರಿಗೆ ಜೀವಜಲವಾಗಿದ್ದ ಸೂಳೆಕೆರ ನೀರು ಈಗ ಕುಡಿಯಲು ಕಂಟಕವಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ಹದಿನೈದು ದಿನಗಳಿಂದಲೂ ಈ ಸಮಸ್ಯೆ ತಲೆದೋರಿದ್ದರೂ ಆರೋಗ್ಯ ಇಲಾಖೆ, ತಾಲೂಕು ಆಡಳಿತ ಯಾಕೆ ಕ್ರಮ ಕೈಗೊಂಡಿಲ್ಲ. ಕೆಲವೆಡೆ ಗಮನಕ್ಕೆ ತಂದಿದ್ದರೂ ಯಾಕೆ ಗಂಭೀರವಾಗಿ ಪರಿಗಣಿಸಿಲ್ಲ. ಈಗ ಸಮಸ್ಯೆ ತೀವ್ರವಾದ ಬಳಿಕ ಎಚ್ಚೆತ್ತುಕೊಳ್ಳುವುದಕ್ಕಿಂತ ಹದಿನೈದು ದಿನಗಳ ಹಿಂದೆಯೇ ಗಂಭೀರವಾಗಿ ಪರಿಗಣಿಸಿದ್ದರೆ ಈ ಸಮಸ್ಯೆ ತಲೆದೋರುತ್ತಿರಲಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುತ್ತಳತೆ ಎಷ್ಟು..?
ಇನ್ನು ಸೂಳೆಕೆರೆ ಸಾಕಷ್ಟು ವಿಸ್ತಾರ ಹೊಂದಿದೆ. ಹಿರೇಹಳ್ಳಕ್ಕೆ ಎರಡು ಗುಡ್ಡಗಳ ಮಧ್ಯೆ ಬೃಹತ್ ಒಡ್ಡು ಹಾಕಿ ನೀರು ನಿಲ್ಲಿಸಿರುವ ಈ ಕೆರೆ ಸುತ್ತಳತೆ 65 ಕಿಲೋಮೀಟರ್. ಅಚ್ಚುಕಟ್ಟು ಪ್ರದೇಶ ಎರಡು ಸಾವಿರ ಹೆಕ್ಟೇರ್. ಈ ವಿಸ್ತಾರದ ಕೆರೆ ನೋಡುಗರ ಕಣ್ಣಿಗೆ ಸಾಗರದಂತೆ ಕಾಣುತ್ತದೆ. ಎರಡು ಬೆಟ್ಟಗಳ ನಡುವೆ ಸುಮಾರು 950 ಅಡಿ ಉದ್ದದ ಏರಿಯನ್ನು ನಿರ್ಮಾಣ ಮಾಡಿ ನೀರು ನಿಲ್ಲಿಸಲಾಗಿದೆ. ಏರಿಯ ಅಗಲ ಒಂದೆಡೆ 60 ಅಡಿಯಾದ್ರೆ, ಇನ್ನೊಂದೆಡೆ 80 ಅಡಿಗಳಷ್ಟಿದೆ. ವಿಸ್ತಾರವಾದ ಬೆಟ್ಟ ಸಾಲುಗಳ ಪ್ರದೇಶದಲ್ಲಿ ಕೆರೆ ಇದೆ. ಸುತ್ತಲಿನ ನೂರಾರು ಹಳ್ಳಿಗಳಲ್ಲಿ ಬೀಳುವ ಮಳೆ ನೀರು ಈ ಕೆರೆಗೆ ಬಂದು ಸೇರುತ್ತದೆ.