ಬೆಂಗಳೂರು : ಮಾಡು ಇಲ್ಲವೇ ಮಡಿ ರಣ ರೋಚಕ ಪಂದ್ಯದಲ್ಲಿ RCB, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 218 ರನ್ ಗಳಿಸಿತು. ಇದಕ್ಕುತ್ತರವಾಗಿ ಚೆನ್ನೈ ಸೂಪರ್ ಕಿಂಗ್ಸ್ ಕೇವಲ 191 ರನ್ ಹೊಡೆಯಲಷ್ಟೇ ಸಾಧ್ಯವಾಯಿತು. ಈ ಮೂಲಕ RCB 27 ರನ್ ಅಂತರದ ಗೆಲುವು ಸಾಧಿಸಿದ್ದು, ಪ್ಲೇ ಆಫ್ ಗೂ ಎಂಟ್ರಿ ಕೊಟ್ಟಿದೆ. ನಮ್ಮ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ರುತುರಾಜ್ ಗಾಯಕ್ವಾಡ್ ಅವರು ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಬಳಿಕ, ವಿರಾಟ್ ಕೊಹ್ಲಿ (47) ಮತ್ತು ನಾಯಕ ಫಾಫ್ ಡು ಪ್ಲೆಸಿಸ್ (54) ಆರ್‌ಸಿಬಿಗೆ ಉತ್ತಮ ಆರಂಭ ನೀಡಿದರು. ಬಳಿಕ ರಜತ್ ಪಾಟಿದಾರ್ (41) ಮತ್ತು ಕ್ಯಾಮರೂನ್ ಗ್ರೀನ್ (38*) ತಂಡದ ರನ್ ವೇಗವನ್ನು ಹೆಚ್ಚಿಸುವುದನ್ನು ಮುಂದುವರಿಸಿದರು. ಇದರಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 200 ರನ್‌ಗಳ ಗಡಿಯನ್ನು ಮೀರಿ, ಜತೆಗೆ ಹೆಚ್ಚುವರಿ 18 ರನ್ ಬಾರಿಸಿ ಆ 18 ರ ನಂಟು ಇಲ್ಲೂ ಮುಂದುವರಿಯಿತು. ಇನ್ನು, ಸಿಎಸ್‌ಕೆ ಪರ ಶಾರ್ದೂಲ್ ಠಾಕೂರ್ 2 ವಿಕೆಟ್ ಪಡೆದರೆ, ತುಷಾರ್ ದೇಶಪಾಂಡೆ ಮತ್ತು ಮಿಚೆಲ್ ಸ್ಯಾಂಟ್ನರ್ ತಲಾ ಒಂದು ವಿಕೆಟ್ ಪಡೆದರು. ಇನ್ನೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 191 ರನ್ ಹೊಡೆದು 27 ರನ್ ಗಳ ಅಂತರದಿಂದ ಸೋಲು ಕಂಡಿತು. CSK 201 ರನ್ ಹೊಡೆದು RCB ವಿರುದ್ಧ ಸೋತರೂ ಪ್ಲೇ ಆಫ್ ಗೆ ಕ್ವಾಲಿಫೈ ಆಗುವ ಆತಂಕ RCB ಅಭಿಮಾನಿಗಳಿಗೆ ಇತ್ತು. ಆದರೆ ಉತ್ತಮ ಬೌಲಿಂಗ್ ಹಾಗೂ ಉತ್ತಮ ಫೀಲ್ಡಿಂಗ್ ಮಾಡಿದ ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡ 27 ರನ್ ಅಂತರದ ಗೆಲುವು ಸಾಧಿಸಿ ಪ್ಲೇ ಆಫ್ ಗೆ ಭರ್ಜರಿ ಎಂಟ್ರಿ ಕೊಟ್ಟಿದೆ.