SUDDIKSHANA KANNADA NEWS/ DAVANAGERE/ DATE:01-12-2023
ಬೆಂಗಳೂರು: ಬೆಂಗಳೂರಿನ 15 ಶಾಲೆಗಳಿಗೆ ಬಾಂಬ್ ಬೆದರಿಕೆ ವಿಚಾರ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಭಯದ ವಾತಾವರಣ ಸೃಷ್ಟಿ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
ನನಗೆ ಬಂದಿರುವ ಮಾಹಿತಿ ಪ್ರಕಾರ ಬೆಂಗಳೂರಿನ 15 ಶಾಲೆಗಳಿಗೆ ಇ-ಮೇಲ್ ಮೂಲಕ ಬೆದರಿಕೆ ಬಂದಿದೆ. ಯಾರೇ ತಪ್ಪು ಮಾಡಿದ್ದರೂ ಕಠಿಣ ಕ್ರಮ ಹಾಗೂ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಾಧ್ಯಮಗಳಲ್ಲಿ ಸುದ್ದಿ ನೋಡಿ ನನಗೂ ಆಘಾತವಾಗಿದೆ. ನಾನು ಸುಮ್ ಸುಮ್ನೆ ಹೇಳಲು ಆಗದು. ಮಕ್ಕಳ ಸುರಕ್ಷತೆ ಮುಖ್ಯ. ಯಾರು ಬೆದರಿಕೆ ಹಾಕಿದ್ದಾರೋ ಅವರಿಗೆ ಶಿಕ್ಷೆಗೊಳಪಡಿಸಬೇಕು. ಬೇರೆ ಬೇರೆ ಆಯಾಮಗಳಲ್ಲಿಯೂ ತನಿಖೆ ನಡೆಸಲಾಗುವುದು. ನನ್ನ ಜವಾಬ್ದಾರಿ ಮಕ್ಕಳ ರಕ್ಷಣೆ ಮಾಡುವುದು. ಈ ವಿಚಾರ ಕುರಿತಂತೆ ಜವಾಬ್ದಾರಿಯುತವಾಗಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಈ ರೀತಿಯ ಘಟನೆ ನಡೆಯಬಾರದು. ನಾನು ಸಹ ಬೆಂಗಳೂರು ಪೊಲೀಸ್ ಆಯುಕ್ತರು ಹಾಗೂ ಆಂತರಿಕ ಭದ್ರತೆ ವಿಭಾಗದ ಅಧಿಕಾರಿಗಳ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದೇನೆ. ಬೆದರಿಕೆ ಕರೆ ಬಂದಿರುವ ಶಾಲೆಗಳಿಗೆ ಶ್ವಾನದಳದೊಂದಿಗೆ
ಪೊಲೀಸರು ಹೋಗಿದ್ದಾರೆ. ಪರಿಶೀಲನೆ ನಡೆಸುತ್ತಿದ್ದಾರೆ. ಪೋಷಕರೂ ಹೆಚ್ಚಿನ ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದರು.
ಮಕ್ಕಳ ರಕ್ಷಣೆ ನಮಗೆ ತುಂಬಾನೇ ಮುಖ್ಯ. ಬೆಂಗಳೂರಿನಲ್ಲಿ ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಸಹ ಶಾಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ಮಾತ್ರವಲ್ಲ, ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಈ ವಿಚಾರ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ.
ಪೋಷಕರಿಗೂ ಆತಂಕ ಹೆಚ್ಚಾಗುತ್ತಿದೆ. ಪೋಷಕರ ಜೊತೆ ನಾವಿದ್ದೇವೆ. ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಧು ಬಂಗಾರಪ್ಪ ಹೇಳಿದರು.