SUDDIKSHANA KANNADA NEWS/ DAVANAGERE/ DATE:17-09-2023
ದಾವಣಗೆರೆ (Davanagere): ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ನಿವಾಸಕ್ಕೆ ಮಾಜಿ ಶಾಸಕ ಎಂ. ಪಿ. ರೇಣುಕಾಚಾರ್ಯ ಭೇಟಿ ನೀಡಿದರು. ಸುಮಾರು ಹೊತ್ತು ಅಲ್ಲೇ ಇದ್ದ ರೇಣುಕಾಚಾರ್ಯ ಅವರು ಸಚಿವ ಮಲ್ಲಿಕಾರ್ಜುನ್ ಜೊತೆ ಕಾಲ ಕಳೆದರು. ಹೊನ್ನಾಳಿ ಭಾಗದಿಂದ ಬಂದಿದ್ದ ಅಡಿಕೆ ಬೆಳೆಗಾರರ ನಿಯೋಗದ ಜೊತೆ ಆಗಮಿಸಿದ್ದ ಮಾಜಿ ಸಚಿವರು, ಮಲ್ಲಿಕಾರ್ಜುನ್ ರ ಜೊತೆ ಚರ್ಚೆ ನಡೆಸಿದರು.
ಈ ತಿಂಗಳಿನಲ್ಲಿಯೇ ಎರಡನೇ ಬಾರಿ ಮಲ್ಲಿಕಾರ್ಜುನ್ ಅವರ ನಿವಾಸಕ್ಕೆ ಆಗಮಿಸುವ ಮೂಲಕ ಅಚ್ಚರಿ ಮೂಡಿಸಿದರು. ರೈತರ ಹೆಸರಿನಲ್ಲಿ ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿ ಮತ್ತೆ ಕಾಂಗ್ರೆಸ್ ಕದ ತಟ್ಟುವ ಪ್ರಯತ್ನ ಮಾಡುತ್ತಿದ್ದಾರಾ ಎಂಬ ಅನುಮಾನ ಕಾಡಲಾರಂಭಿಸಿದೆ. ಹೊನ್ನಾಳಿ – ನ್ಯಾಮತಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕೆಂಬ ಒತ್ತಾಯ ಮಾಡಲು ಭೇಟಿಯಾಗಿದ್ದೆ ಎಂದು ಈ ಹಿಂದೆ ಹೇಳಿದ್ದ ರೇಣುಕಾಚಾರ್ಯ ಈ ಬಾರಿ ಭದ್ರಾ ಜಲಾಶಯದಿಂದ ನೀರು ಹರಿಸಬೇಕು ಎಂಬ ಬೇಡಿಕೆ ಇಟ್ಟುಕೊಂಡು ಬಂದಿರುವುದಾಗಿ ತಿಳಿಸಿದ್ದಾರೆ.
ಇಂಟ್ರೆಸ್ಟಿಂಗ್ ವಿಚಾರ ಏನೆಂದರೆ ಈಗಾಗಲೇ ಭದ್ರಾ ಜಲಾಶಯದಿಂದ ಎಡದಂಡೆ ಹಾಗೂ ಬಲದಂಡೆ ನಾಲೆಯಲ್ಲಿ ಶನಿವಾರ ಮಧ್ಯರಾತ್ರಿಯಿಂದಲೇ ನೀರು ಹರಿಸಲಾಗುತ್ತಿದೆ. ನೀರಾವರಿ ಇಲಾಖೆ ಹಾಗೂ ಭದ್ರಾ ಜಲಾಶಯದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಮಲ್ಲಿಕಾರ್ಜುನ್ ಅವರು, ನೀರು ಹರಿಸುವಂತೆ ಸೂಚಿಸಿದ್ದರು. ಜಲಸಂಪನ್ಮೂಲ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ನೀರು ಹರಿಸುವಂತೆ ಸೂಚಿಸಿದ್ದರು. ಡಿ. ಕೆ. ಶಿವಕುಮಾರ್ ಜೊತೆಗೆ ಚರ್ಚೆ ನಡೆಸಲು ಸಾಧ್ಯವಾಗದಿದ್ರೂ ನೀರು ಅಂತೂ ಹರಿದಿದೆ. ಆದರೂ ರೇಣುಕಾಚಾರ್ಯರು ರೈತರ ಜೊತೆ ಮತ್ತೆ ಮಲ್ಲಿಕಾರ್ಜುನ್ ರ ಮನೆ ಕದ ತಟ್ಟಿರುವುದು ಅನುಮಾನ ಮತ್ತಷ್ಟು ಪುಷ್ಟೀಕರಿಸಿದೆ.
ಇನ್ನು ಮಾಧ್ಯಮದವರ ಜೊತೆ ಮಾತನಾಡಿದ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು, ರೇಣುಕಾಚಾರ್ಯ ಅವರು ಬಿಜೆಪಿಯಲ್ಲಿ ರೋಸಿ ಹೋಗಿದ್ದಾರೆ. ಹಾಗಾಗಿ, ಎಲ್ಲರನ್ನೂ ಭೇಟಿ ಮಾಡುತ್ತಿದ್ದಾರೆ. ಅವರ ಮನಸ್ಸಿನಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ನಾವು ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಗೆಲ್ಲಬೇಕು ಎಂಬ ಉದ್ದೇಶ ಹೊಂದಿದ್ದೇವೆ. ಭದ್ರಾ ಡ್ಯಾಂನಿಂದ ನೀರು ಸ್ಥಗಿತಗೊಳಿಸಿದ ಕಾರಣಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದರು. ಇನ್ನು ಹೊನ್ನಾಳಿ – ನ್ಯಾಮತಿ ತಾಲೂಕಿನ ರೈತ ಮುಖಂಡರ ಜೊತೆ ಆಗಮಿಸಿದ್ದರು. ಮನೆಗೆ ಬರುವವರಿಗೆ ಬೇಡ ಎಂದು ಹೇಳಲು ಆಗದು. ಟೀ ಕುಡಿದರು. ಸಮಾಲೋಚನೆ ನಡೆಸಿದರು. ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಕೆಲ ವಿಚಾರಗಳನ್ನು ಮಾತನಾಡಿದರು ಎಂಬ ಮಾತು ಹೇಳಿರುವುದು ಅಚ್ಚರಿ ಮೂಡಿಸಿದೆ.
ಮತ್ತೊಂದೆಡೆ ಹೇಳಿದ್ದನ್ನೇ ಮತ್ತೆ ಹೇಳಿರುವ ಎಂ. ಪಿ. ರೇಣುಕಾಚಾರ್ಯ ಅವರು ನಾನು ಕಾಂಗ್ರೆಸ್ ಸೇರುವುದಿಲ್ಲ, ಬಿಜೆಪಿಯಲ್ಲಿಯೇ ಇದ್ದೇನೆ. ಭದ್ರಾಡ್ಯಾಂ ನೀರು ನಿಲುಗಡೆ ಮಾಡಿರುವುದರಿಂದ ಹೊನ್ನಾಳಿ – ನ್ಯಾಮತಿ ತಾಲೂಕಿನ ಅಡಿಕೆ
ಬೆಳೆಗಾರರು ಭಯಭೀತರಾಗಿದ್ದಾರೆ. ಅವರ ನೆರವಿಗೆ ಧಾವಿಸುವುದು ನನ್ನ ಕರ್ತವ್ಯ. ಅವರ ಜೊತೆ ಆಗಮಿಸಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ರ ಜೊತೆ ಚರ್ಚೆ ಮಾಡಿದ್ದೇನೆ. ಈಗಾಗಲೇ ನೀರು ಹರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದರಲ್ಲಿ ರಾಜಕೀಯವೇನೂ ಇಲ್ಲ ಎಂದು ಪುನರುಚ್ಚರಿಸಿದ್ದಾರೆ.
ಬಿಜೆಪಿ ಕಾರ್ಯಕ್ರಮಕ್ಕೆ ಬರಲಿಲ್ಲ:
ದಾವಣಗೆರೆಗೆ ರೇಣುಕಾಚಾರ್ಯ ಆಗಮಿಸಿ ಸಚಿವ ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿದರು. ಆದ್ರೆ, ಜಿಲ್ಲಾ ಬಿಜೆಪಿಯು ನಗರದ ದುರ್ಗಾಂಬಿಕಾ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನುಮದಿನದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಸದ ಡಾ. ಜಿ. ಎಂ. ಸಿದ್ದೇಶ್ವರ, ಮಾಜಿ ಶಾಸಕ ಎಸ್. ಎ. ರವೀಂದ್ರನಾಥ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ಆಗಮಿಸಿದ್ದರು. ದಾವಣಗೆರೆಗೆ ಬಂದರೂ ರೇಣುಕಾಚಾರ್ಯ ಮಾತ್ರ ಬಿಜೆಪಿ ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ. ಬಿಜೆಪಿ ನಾಯಕರನ್ನು ಭೇಟಿ ಮಾಡದ ರೇಣುಕಾಚಾರ್ಯ ಮಲ್ಲಿಕಾರ್ಜುನ್ ಅವರನ್ನು ಪದೇ ಪದೇ ಭೇಟಿ ಮಾಡುತ್ತಿರುವುದರಿಂದ ಕಾಂಗ್ರೆಸ್ ಸೇರಲು ಸರ್ಕಸ್ ಮಾಡುತ್ತಿದ್ದಾರ ಎಂಬ ಅನುಮಾನವೂ ಕಾಡುತ್ತಿದೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದ ರೇಣುಕಾಚಾರ್ಯ, ಹೊನ್ನಾಳಿ – ನ್ಯಾಮತಿ ತಾಲೂಕನ್ನು ಬರಪೀಡಿತ ಎಂಬ ಘೋಷಣೆ ಮಾಡಿದ್ದಕ್ಕೆ ಧನ್ಯವಾದ ಸಲ್ಲಿಸಲು ಬಂದಿದ್ದೇನೆ ಎಂದಿದ್ದರು. ಈಗ ಮಲ್ಲಿಕಾರ್ಜುನ್ ನಿವಾಸಕ್ಕೆ ಆಗಮಿಸಿ ಭದ್ರಾ ಜಲಾಶಯದಿಂದ ನೀರು ಹರಿಸಬೇಕೆಂಬ ಒತ್ತಾಯ ಹೇರಲು ಬಂದಿದ್ದೆ ಎಂದು ಹೇಳಿರುವುದು ಕುತೂಹಲ ಮೂಡಿಸಿದೆ. ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ ಎಂಬ ಮಾತಿದೆ. ಒಂದೆಡೆ ಮಾಜಿ ಸಿಎಂ ಯಡಿಯೂರಪ್ಪ ಅವರು ಮತ್ತೆ ಪ್ರವಾಸ ಆರಂಭಿಸಿ, ಪಕ್ಷ ಬಲವರ್ಧನೆಗೆ ಶ್ರಮಿಸಲು ಚಾಲನೆ ನೀಡಿದ್ದರೆ, ಮತ್ತೊಂದೆಡೆ ಯಡಿಯೂರಪ್ಪರ ಆಪ್ತ ಬಳಗದ ರೇಣುಕಾಚಾರ್ಯ ಅವರು ಮಲ್ಲಿಕಾರ್ಜುನ್ ಮನೆಗೆ ಬಂದು ರೈತರ ಜೊತೆಗೆ ಬಂದಿದ್ದರಿಂದ ರೇಣುಕಾಚಾರ್ಯರ ನಡೆ ಯಾವ ಕಡೆ ಎಂಬ ಮಾತು ಬಿಜೆಪಿ ವಲಯದಲ್ಲಿಯೇ ಕೇಳಿ ಬರುತ್ತಿದೆ.