SUDDIKSHANA KANNADA NEWS/ DAVANAGERE/DATE:30_08_2025
ದಾವಣಗೆರೆ: ದಾವಣಗೆರೆ ಶಾಂತಿ ಪ್ರಿಯರ ಜಿಲ್ಲೆ. ಗಣೇಶ ಮೂರ್ತಿ ಮೆರವಣಿಗೆ ವೇಳೆ ಯಾವುದೇ ಕಾರಣಕ್ಕೂ ಗಲಾಟೆ ನಡೆಯಬಾರದು. ಎಲ್ಲರೂ ಸೌಹಾರ್ದತೆಯಿಂದ ಇರಬೇಕು. ಬೆಂಕಿ ಹಚ್ಚುವವರನ್ನು ಹತ್ತಿರವೂ ಬಿಟ್ಟುಕೊಳ್ಳಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಖಡಕ್ ಸೂಚನೆ ನೀಡಿದ್ದಾರೆ.
READ ALSO THIS STORY: ಸಾಲ ಮತ್ತು ಬಡ್ಡಿದರದ ಮೇಲೆ ಕ್ರೆಡಿಟ್ ಸ್ಕೋರ್ ಹೇಗೆ ಪರಿಣಾಮ ಬೀರುತ್ತದೆ ಗೊತ್ತಾ?
ಮಹಾನಗರ ಪಾಲಿಕೆ ಆವರಣದಲ್ಲಿ 14 ಕೋಟಿ ರೂಪಾಯಿ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ, ಇಂದಿರಾ ಕ್ಯಾಂಟೀನ್, ಮಾಜಿ ಮೇಯರ್ ಭಾವಚಿತ್ರಗಳ ಅನಾವರಣಗೊಳಿಸಿದ ಬಳಿಕ ಮಾತನಾಡಿದ ಅವರು, ಶಾಂತಿಪ್ರಿಯ ನಗರದಲ್ಲಿ ಯಾವುದೇ ಕಾರಣಕ್ಕೂ ಗಲಾಟೆ ಆಗಬಾರದು. ಗಣೇಶ ಹಬ್ಬದ ನೆಪದಲ್ಲಿ ಬೆಂಕಿ ಹಚ್ಚುವವರ ಬಗ್ಗೆ ಎಚ್ಚರ ವಹಿಸಿ ಎಂದು ಕಿವಿಮಾತು ಹೇಳಿದರು.
ರಾಜಕಾರಣಿಗಳಿಗೆ, ಶ್ರೀಮಂತರಿಗೆ ಗಲಾಟೆ ನಡೆದರೆ ತೊಂದರೆ ಆಗುವುದಿಲ್ಲ. ಕೂಲಿ ಕಾರ್ಮಿಕರು, ನಿತ್ಯ ಕೂಲಿ ಮಾಡುವವರು, ಬಡವರಿಗೆ ತುಂಬಾ ತೊಂದರೆಯಾಗುತ್ತದೆ. ಆದ್ದರಿಂದ ಎಲ್ಲರೂ ಸೌಹಾರ್ದತೆಯಿಂದ ಇರಿ. ಸೌಹಾರ್ದತೆ
ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ. ಗಣೇಶೋತ್ಸವ ಹಬ್ಬದ ಹೆಸರು ಹೇಳಿಕೊಂಡು ಬೆಂಕಿ ಹಚ್ಚುವವರನ್ನು ದೂರವಿಡಬೇಕು. ಸಹೋದರರಂತೆ ಬದುಕುವುದು ತುಂಬಾನೇ ಮುಖ್ಯ ಎಂದು ಸಚಿವ ಎಸ್. ಎಸ್. ಮಲ್ಲಿಕಾರ್ಜುನ್
ತಿಳಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ದಾವಣಗೆರೆ ನಗರದ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಪ್ರಮುಖ ರಸ್ತೆಗಳನ್ನು ಸಿಮೆಂಟ್ ರಸ್ತೆಗಳನ್ನಾಗಿ ಅಭಿವೃದ್ಧಿ ಮಾಡಲಾಗಿದೆ. ಸರ್ಕಾರ ಮಂಜೂರು ಮಾಡಿರುವ ಅನುದಾನದಲ್ಲಿ ಹದಡಿ ರಸ್ತೆ, ಬಸವಾಪುರ ರಸ್ತೆ, ನಗರದ ಪ್ರಮುಖ ವೃತ್ತಗಳ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದು ಹೇಳಿದರು.