SUDDIKSHANA KANNADA NEWS/ DAVANAGERE/ DATE:13-02-2025
ದಾವಣಗೆರೆ: ತಾಲೂಕಿನ ಆವರಗೊಳ್ಳದ ಶ್ರೀ ವೀರಭದ್ರೇಶ್ವರ ಮಹಾಸ್ವಾಮಿಯ ರಥೋತ್ಸವ ಫೆ. 17ರಂದು ವಿಜೃಂಭಣೆಯಿಂದ ನೆರವೇರಲಿದೆ. ಪುರವರ್ಗ ಹಿರೇಮಠದ ಪೀಠಾಧಿಪತಿ ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮೀಜಿ ಅವರ ಸಾನಿಧ್ಯದಲ್ಲಿ ಜರುಗಲಿದೆ. ಫೆ. 20ರವರೆಗೆ ವಿವಿಧ ಉತ್ಸವಾದಿಗಳನ್ನು ಆಯೋಜಿಸಲಾಗಿದೆ.
ಶ್ರೀ ವೀರಭದ್ರೇಶ್ವರ ಮಹಾಸ್ವಾಮಿ ಸೇವಾ ಸಂಘ ಹಾಗೂ ಆವರಗೊಳ್ಳ ಗ್ರಾಮದ ಸದ್ಭಕ್ತರು ಮತ್ತು ಮಠಸ್ಥರು, ಆಡಳಿತ ಮಂಡಳಿ ಸಂಯುಕ್ತಾಶ್ರಯದಲ್ಲಿ ಈ ರಥೋತ್ಸವ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ. ಎಂ. ಷಣ್ಮುಖಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಫೆ. 17ರ ಸಂಜೆ 6 ಗಂಟೆಗೆ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ ಅದ್ಧೂರಿಯಾಗಿ ನಡೆಯಲಿದ್ದು, ಸಾವಿರಾರು ಭಕ್ತರು ಸಾಕ್ಷಿಯಾಗಲಿದ್ದಾರೆ. ರಾತ್ರಿ ಉಯ್ಯಾಲೆ ಮಂಟಪದಲ್ಲಿ ಸ್ವಾಮಿ ಆಸೀನರಾಗಲಿದ್ದು, ನಂತರ ವೀರಗಾಸೆ ಸೇವೆ ಭಕ್ತರಿಂದ ನೆರವೇರಲಿದೆ. 18ರಂದು ಬೆಳಿಗ್ಗೆ 8ಗಂಟೆಗೆ ಶ್ರೀ ಸ್ವಾಮಿಯ ಗುಗ್ಗಳ ಸೇವೆ, ಭಕ್ತರಿಂದ ಅದೇ ದಿನ ರಾತ್ರಿ 10 ಗಂಟೆಗೆ ಓಕಳಿ ಸೇವೆ ಮತ್ತು ಗಂಗಾಪೂಜೆ ನಂತರ ಉಯ್ಯಾಲೆ ಮಂಟಪದಲ್ಲಿ ಸ್ವಾಮಿ ಆಸೀನರಾಗಲಿದ್ದು, ವೀರಗಾಸೆ ಸೇವೆಯನ್ನೂ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
19ರಂದು ಬೆಳಿಗ್ಗೆ 10 ಗಂಟೆಗೆ ಸಕಲ ಬಿರುದಾವಳಿಗಳೊಂದಿಗೆ ಉಯ್ಯಾಲೆ ಮಂಟಪದಿಂದ ಶ್ರೀ ಸ್ವಾಮಿಯು ಗುಗ್ಗಳಗಳೊಂದಿಗೆ ಶ್ರೀ ರೇವಣಸಿದ್ದೇಶ್ವರ, ಶ್ರೀ ಬೀರಲಿಂಗೇಶ್ವರ ಸ್ವಾಮಿಗಳೊಡಗೂಡಿ ದೇವಸ್ಥಾನಕ್ಕೆ ಬಿಜಯಂಗೈಯ್ಯುವುದು. 20ರಂದು ಕಂಕಣ ವಿಸರ್ಜನೆ ವೈಭವೋಪೇತವಾಗಿ ನಡೆಯಲಿದ್ದು, ಭಕ್ತರು ತನು, ಮನ, ಧನದೊಂದಿಗೆ ಸಹಕರಿಸುವಂತೆ ಆಡಳಿತ ಮಂಡಳಿಯು ಮನವಿ ಮಾಡಿದೆ ಎಂದು ತಿಳಿಸಿದರು.
ರಥೋತ್ಸವದಲ್ಲಿ ಅಂಗಡಿ ಹಾಕುವವರು ಸಂಘದ ಅನುಮತಿ ಪಡೆದಿರಬೇಕು. ಅಂಥವರಿಗೆ ಮಾತ್ರ ಅವಕಾಶ ನೀಡಲಾಗುವುದು. ಸಂಜೆ 5 ಗಂಟೆಯೊಳಗೆ ವೀರಭದ್ರೇಶ್ವರ ಸ್ವಾಮಿ ದರ್ಶನ ಪಡೆಯಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗುವುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಮಟಿಕಲ್ ವೀರಭದ್ರಸ್ವಾಮಿ ಮತ್ತಿತರರು ಹಾಜರಿದ್ದರು.