SUDDIKSHANA KANNADA NEWS/ DAVANAGERE/ DATE: 26-05-2025
ದಾವಣಗೆರೆ (Davanagere): ಜನಸೇವೆಯ ಜನಪ್ರತಿನಿಧಿ. ಈ ಮಾತು ಎಲ್ಲರಿಗೂ ಒಪ್ಪುವುದಿಲ್ಲ. ಜನರ ಪ್ರೀತಿ ಸಂಪಾದನೆ ಮಾಡುವುದು ಅಷ್ಟು ಸುಲಭವಲ್ಲ. ಮನೆ ಮನೆಯಲ್ಲೂ ಮನೆ ಮಾತಾಗಿರುವ ಜನರೊಟ್ಟಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು, ಜನಸೇವೆಯೇ ಜನಾರ್ದನ ಸೇವೆ ಎಂಬಂತೆ ಅಭಿವೃದ್ಧಿ ಜೊತೆಗೆ ಜನರ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸಿ ಮಾದರಿ ಜನಪ್ರತಿನಿಧಿ ಎಂಬ ಹೆಗ್ಗಳಿಕೆ ಪಡೆದ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸದವರಿಲ್ಲ.
ಕರ್ನಾಟಕದ ಮಹಾನಗರ ಪಾಲಿಕೆಯ ಇತಿಹಾಸದಲ್ಲಿ ಮನೆ ಬಾಗಿಲಿಗೆ ನಿಮ್ಮ ಸೇವಕ ಎಂಬ ವಿಶಿಷ್ಟ ಅಭಿಯಾನ ಕೈಗೊಂಡು ರಾಜ್ಯದಲ್ಲಿ ಮನೆ ಮಾತಾದ ಎಂಸಿಸಿ ಬಿ ಬ್ಲಾಕ್ ನ ಕಾರ್ಪೊರೇಟರ್ ಆಗಿ ಮಾಡಿರುವ ಕೆಲಸ ಅಪಾರ. ಸ್ವಚ್ಛತೆಯಲ್ಲಿ ಈ ವಾರ್ಡ್ ಎಲ್ಲಾ ವಾರ್ಡ್ ಗಳಿಗೂ ಮಾದರಿ. ಈ ಮಾತು ಹೇಳುತ್ತಿರುವುದು ಈ ವಾರ್ಡ್ ಜನರು ಮಾತ್ರವಲ್ಲ, ಇಲ್ಲಿಗೆ ಭೇಟಿ ನೀಡಿದ ಎಲ್ಲರ ಅಭಿಪ್ರಾಯವೂ ಇದೆ.
ಯಾರು ಮಂಜುನಾಥ್ ಗಡಿಗುಡಾಳ್?
1977ರ ಮೇ 26ರಂದು ಜನಿಸಿದ ಮಂಜುನಾಥ್ ಗಡಿಗುಡಾಳ್ ಅವರು ಹರಪನಹಳ್ಳಿ ತಾಲೂಕಿನ ಗಡಿಗುಡಾಳ್ ಗ್ರಾಮದ ವರ್ತಕರಾದ ಸಿದ್ದೇಶ್ವರ ಗೌಡ್ರು ಮತ್ತು ಕುಸುಮಾ ದಂಪತಿಯ ಮೂವರು ಮಕ್ಕಳಲ್ಲಿ ಹಿರಿಯರು. ಸಹೋದರಿಯವರಾದ
ವಿದ್ಯಾ ಅವರು ಎಂಬಿಎ ಪೂರ್ಣಗೊಳಿಸಿ ದುಬೈನಲ್ಲಿ ನೆಲೆಸಿದ್ದರೆ, ಮತ್ತೋರ್ವ ಸಹೋದರಿ ಜಿ. ಎಸ್. ಶ್ರುತಿ ಅವರು ಯುಕೆಯಲ್ಲಿ ಡಾಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪುಣ್ಯ ಅವರು ಮಂಜುನಾಥ್ ಅವರ ಧರ್ಮಪತ್ನಿ. ಪ್ರೀತಿ ಪಾಟೀಲ್,
ಪ್ರಹಾಸ್ ಪಾಟೀಲ್ ಮಕ್ಕಳು.
READ ALSO THIS STORY: “ಕೊಂದು ಎಸೆಯಿರಿ”: ಪಾಕಿಸ್ತಾನದಲ್ಲಿ ಕುಟುಂಬದವರ ಮುಂದೆ ಬಲೂಚ್ ಪತ್ರಕರ್ತನ ಗುಂಡಿಕ್ಕಿ ಹತ್ಯೆ…!
ವಿದ್ಯಾರ್ಹತೆ:
ಇನ್ನು ಜಿ. ಎಸ್. ಮಂಜುನಾಥ್ ಗಡಿಗುಡಾಳ್ ಅವರು ಓದಿದ್ದು ಬೆಳೆದಿದ್ದು ದಾವಣಗೆರೆಯಲ್ಲೇ. ತಂದೆ ವರ್ತಕರಾದ ಕಾರಣಕ್ಕೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಸಲುವಾಗಿ ದಾವಣಗೆರೆಗೆ ಕುಟುಂಬ ಸಮೇತರಾಗಿ ಬಂದರು. ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಇಲ್ಲೇ ಪೂರೈಸಿದರು. ಡಿಸಿಎಂ ಕಾಟನ್ ಮಿಲ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡಿದರು. ಎಆರ್ ಜಿ ಕಾಲೇಜಿನಲ್ಲಿ ಬಿ. ಕಾಂ ಪದವಿ ಓದಿದ್ದಾರೆ.
ರಾಜಕಾರಣಕ್ಕೆ ಬರಲು ಪ್ರೇರಣೆ? 
1998ರಲ್ಲಿ ರಾಜಕಾರಣಕ್ಕೆ ಧುಮುಕಿದ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ಅವರು ಆರಂಭದಲ್ಲಿ ಕಾರ್ಯಕರ್ತರಾಗಿ ದುಡಿದರು. 1999ರಲ್ಲಿ ಎಸ್. ಎಸ್. ಮಲ್ಲಿಕಾರ್ಜುನ್ ಅವರು ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಆಯ್ಕೆಯಾದರು. ಅಂದು ಎಸ್. ಎಸ್. ಮಲ್ಲಿಕಾರ್ಜುನ್ ಅವರ ಚುನಾವಣಾ ತಂತ್ರಗಾರಿಕೆ, ಅಭಿವೃದ್ಧಿ ಪರ ಕಾಳಜಿ, ದೂರದೃಷ್ಟಿತ್ವ ನಾಯಕತ್ವ ಮೆಚ್ಚಿ ರಾಜಕಾರಣ ಪ್ರವೇಶಿಸಿದ ಮಂಜುನಾಥ್ ಅವರು ಅಧಿಕಾರದಲ್ಲಿ ಇಲ್ಲದಿದ್ದರೂ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡರು.
ಕಾರ್ಪೊರೇಟರ್ ಆಗಿದ್ದು ಹೇಗೆ?
ಎಂಸಿಸಿ ಬಿ ಬ್ಲಾಕ್ ನಲ್ಲಿ ಕಾರ್ಪೊರೇಟರ್ ಆಗಿ ಐದು ವರ್ಷಗಳ ಕಾಲ ಜನರ ಸ್ಪಂದನೆ, ಅಭಿವೃದ್ಧಿಯ ಮಹಾಪೂರವನ್ನೇ ಹರಿಸಿರುವ ಮಂಜುನಾಥ್ ಅವರು ಪಾಲಿಕೆ ಸದಸ್ಯರಾಗಲು ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ. ಚುನಾವಣೆಗೆ ಸ್ಪರ್ಧಿಸುವ ಮುನ್ನ
ವಾರ್ಡ್ ನ ಜನರ ಪ್ರೀತಿ ಸಂಪಾದಿಸಿದರು. ಅವರೊಟ್ಟಿಗೆ ಬೆರೆತರು. ತಾನು ಏನು ಎಂಬುದನ್ನು ತೋರಿಸಿಕೊಟ್ಟರು. ಮನೆ ಮಗನಾಗಿ ಎಲ್ಲರ ಪ್ರೀತಿ ಸಂಪಾದಿಸಿದರು. ಪಾಲಿಕೆ ಚುನಾವಣೆಗೆ ಸ್ಪರ್ಧಿಸಿದ ಮೊದಲ ಪ್ರಯತ್ನದಲ್ಲೇ ವಿಜಯದ ನಗೆ ಬೀರಿದರು.
ಸಮರ್ಥ ವಿಪಕ್ಷ ನಾಯಕ:
ಜಿ. ಎಸ್. ಮಂಜುನಾಥ್ ಗಡಿಗುಡಾಳ್ ಅವರು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾಗಿದ್ದ ಅವಧಿಯಲ್ಲಿ ಆಡಳಿತ ಪಕ್ಷದ ಹುಳುಕುಗಳು, ಭ್ರಷ್ಟಾಚಾರ, ಸ್ವಜನಪಕ್ಷಪಾತ ಸೇರಿದಂತೆ ವೈಫಲ್ಯಗಳನ್ನು ಜನರ ಮುಂದೆ ಸಮರ್ಥವಾಗಿ ಮುಂದಿಟ್ಟ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಎಸ್. ಎಸ್. ಮಲ್ಲಿಕಾರ್ಜುನ್, ಶಾಮನೂರು ಶಿವಶಂಕರಪ್ಪರ ಮಾರ್ಗದರ್ಶನದಲ್ಲಿ ಪಾಲಿಕೆಯಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಆಡಳಿತಕ್ಕೆ ಸಖತ್ತಾಗಿಯೇ ಠಕ್ಕರ್ ಕೊಟ್ಟ ವಿಪಕ್ಷ ನಾಯಕ ಎಂಬ ಹೆಗ್ಗಳಿಕೆ ಈಗಲೂ ಅವರಿಗಿದೆ.
ಅಭಿವೃದ್ಧಿಗೆ ಕಾರಣ:
ಶಾಮನೂರು ಶಿವಶಂಕರಪ್ಪ, ಎಸ್. ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಮಾರ್ಗದರ್ಶನದಲ್ಲಿ ವಾರ್ಡ್ ನ ಅಭಿವೃದ್ಧಿ, ಸ್ವಚ್ಛತೆಗೆ ಹೆಚ್ಚು ಮಹತ್ವ ನೀಡಿದರು. ಕಸ ವಿಂಗಡಣೆ, ಹಸಿ ಮತ್ತು ಒಣ ತ್ಯಾಜ್ಯ ನಿರ್ವಹಣೆಯಲ್ಲಿ ಎಲ್ಲಾ ವಾರ್ಡ್ ಗಳಿಗೂ ಮಾದರಿ ಆಗುವಂತೆ ಕೆಲಸ ನಿರ್ವಹಿಸಿದರು. ಜನರ ಮನವೊಲಿಸಿ, ಜನರಿಂದಲೇ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ ಬರುವ ಕಸದ ಗಾಡಿಗಳಿಗೆ ಹಾಕುವ ಮೂಲಕ ಸೈ ಎನಿಸಿಕೊಂಡ ಜನಪ್ರತಿನಿಧಿ.
ಜನಪ್ರಿಯತೆ ತಂದುಕೊಟ್ಟ ಮನೆ ಬಾಗಿಲಿಗೆ ನಿಮ್ಮ ಸೇವಕ!
ಇನ್ನು ಜಿ. ಎಸ್. ಮಂಜುನಾಥ್ ಅವರಿಗೆ ಮತ್ತಷ್ಟು ಜನಪ್ರಿಯತೆ ತಂದುಕೊಟ್ಟಿದ್ದೇ ಮನೆ ಬಾಗಿಲಿಗೆ ನಿಮ್ಮ ಸೇವಕ ಅಭಿಯಾನ. ತನ್ನ ವಾರ್ಡ್‌ನಲ್ಲಿ ಅಭಿವೃದ್ಧಿ ಕಾರ್ಯದ ಜೊತೆಗೆ ಒಂದು ಹೆಜ್ಜೆ ಮುಂದೆ ಹೋಗಿ ವಾರದಲ್ಲಿ ಒಂದು ದಿನ ಜನರ ಮನೆಗೆ ತೆರಳಿ ಸಂಕಷ್ಟ ಆಲಿಸುವ ಹೊಸ ಪರಿಕಲ್ಪನೆ ಹುಟ್ಟು ಹಾಕಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ದಾವಣಗೆರೆ ಮಹಾನಗರ ಪಾಲಿಕೆಯ 38ನೇ ವಾರ್ಡ್ ಎಂಸಿಸಿ ಬಿ ಬ್ಲಾಕ್‌ನ ಕಾರ್ಪೊರೇಟರ್ ಗಡಿಗುಡಾಳ್ ಮಂಜುನಾಥ್. ಪ್ರತಿ ಭಾನುವಾರ ತನ್ನ ವಾರ್ಡ್‌ನ ಪ್ರಮುಖ ರಸ್ತೆಯಲ್ಲಿ ಬರುವ ಮನೆಗಳಿಗೆ ಹೋಗಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವುದು. ಇದಕ್ಕೆ ‘ಮನೆ ಬಾಗಿಲಿಗೆ ನಿಮ್ಮ ಸೇವಕ’ ಎಂಬ ಘೋಷವಾಕ್ಯ ನೀಡಲಾಗಿತ್ತು. ಅಧಿಕಾರಾವಧಿ ಮುಗಿದಿದ್ದರೂ ಇಂದಿಗೂ ಮುಂದುವರಿಸಿರುವುದು ಮಂಜುನಾಥ್ ಅವರು ಜನರ ಬಗ್ಗೆ ಹೊಂದಿರುವ ಕಾಳಜಿಗೆ ಸಾಕ್ಷಿ.
ಸ್ವಚ್ಛತೆಯಲ್ಲಿ ನಂಬರ್ ಒನ್:
ಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ನಾವೇನೂ ದೊಡ್ಡವರಲ್ಲ. ಜನರ ಸಂಕಷ್ಟ, ಸಮಸ್ಯೆ ಆಲಿಸುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯ. ಹಾಗಾಗಿ ಮನೆಯ ಬಾಗಿಲಿಗೆ ನಿಮ್ಮ ಸೇವಕ ಎಂಬ ಶಿರೋನಾಮೆ ನೀಡಿ ಕೆಲಸ ಮಾಡುತ್ತಿದ್ದೇನೆ. ಜನರು ಸಹ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ನಾನು ಏನೇ ಮಾಡಿದ್ದರೂ ಇದಕ್ಕೆಲ್ಲಾ ಕಾರಣ ಶಾಮನೂರು ಶಿವಶಂಕರಪ್ಪ, ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಆಶೀರ್ವಾದ ಹಾಗೂ ಸಹಕಾರವೇ ಕಾರಣ ಎಂದು ಮಂಜುನಾಥ್ ಸ್ಮರಿಸುತ್ತಾರೆ.
ವಿವಿಧ ಸಂಸ್ಥೆಗಳಲ್ಲೂ ಹೆಜ್ಜೆ ಗುರುತು:
ಬಾಸ್ಕೆಟ್ ಬಾಲ್ ಎಸ್. ಎಸ್. ಎಂ. ಕ್ಲಬ್ ಅಧ್ಯಕ್ಷರಾಗಿ, ದಾವಣಗೆರೆ ರೌಂಡ್ ಟೇಬಲ್ ಚೇರ್ಮನ್ ಆಗಿ, ಸ್ಕೌಟ್ಸ್ ಅಂಡ್ ಗೈಡ್ಸ್ ಉಪಾಧ್ಯಕ್ಷ ಹುದ್ದೆಯೂ ಸೇರಿದಂತೆ ತನಗೆ ಸಿಕ್ಕ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ಮಂಜುನಾಥ್ ಅವರನ್ನು ಮಾದರಿ ಕಾರ್ಪೊರೇಟರ್ ಅಂತಾನೇ ಎಲ್ಲರೂ ಕರೆಯುತ್ತಾರೆ.
ಮಂಜುನಾಥ್ ಏನು ಹೇಳುತ್ತಾರೆ?
ನನಗೆ ಅಧಿಕಾರ ಇರಲಿ, ಬಿಡಲಿ. ಜನಸೇವೆಯೇ ನನ್ನ ಧ್ಯೇಯ. ಜನರ ಸಂಕಷ್ಟಗಳಿಗೆ ಪರಿಹರಿಸುವ ಸ್ಪಂದಿಸುವ ಕೆಲಸ ನಿಲ್ಲದು. ದಾವಣಗೆರೆಯನ್ನು ಇಡೀ ವಿಶ್ವದಲ್ಲೇ ಪರಿಚಯಿಸಿದ ಶಾಮನೂರು ಶಿವಶಂಕರಪ್ಪ, ಎಸ್. ಎಸ್. ಮಲ್ಲಿಕಾರ್ಜುನ್, ಪ್ರಭಾ ಮಲ್ಲಿಕಾರ್ಜುನ್ ಅವರ ನಾಯಕತ್ವದಲ್ಲಿ ಮುನ್ನಡೆಯುವ ಆಸೆ ಎಂದು ಮಂಜುನಾಥ್ ಗಡಿಗುಡಾಳ್ ಹೇಳುತ್ತಾರೆ.
ಜನಸೇವೆಯ ಜನಪ್ರತಿನಿಧಿ ಎಂಬ ಹೆಗ್ಗಳಿಕೆ ಪಡೆದಿರುವ ಮಂಜುನಾಥ್ ಗಡಿಗುಡಾಳ್ ಅವರು ಅಂದುಕೊಂಡಿರುವ ಆಸೆಗಳು ಈಡೇರಲಿ. ರಾಜಕಾರಣದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ. ಇಂಥ ಜನಸೇವಕನಿಗೆ ಭವಿಷ್ಯದಲ್ಲಿ ಅತ್ಯುತ್ತಮ ಅವಕಾಶಗಳು ಸಿಗುವಂತಾಗಲಿ ಎಂದು ಅಭಿಮಾನಿಗಳು, ಕುಟುಂಬದವರು, ಸ್ನೇಹಿತರು ಹಾರೈಸಿದ್ದಾರೆ.