SUDDIKSHANA KANNADA NEWS/ DAVANAGERE/ DATE:31-01-2025
ದಾವಣಗೆರೆ: ಚನ್ನಗಿರಿ ಮೆಡಿಕ್ ಶಾಪ್ ಮಾಲೀಕ ಹಾಗೂ ದಾವಣಗೆರೆಯ ದೇವರಾಜ ಅರಸ್ ಲೇಔಟ್ ನ ವಾಸಿ ಕಾಮುಕ ಅಮ್ಜದ್ ವಿಡಿಯೋ ವೈರಲ್ ಬೆನ್ನಲ್ಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಎಚ್ಚರಿಕೆ ನೀಡಿದ್ದಾರೆ.
ಮಹಿಳೆಯರು, ಯುವತಿಯರ ಗೌರವ ಹಾಗೂ ಘನತೆಗೆ ಧಕ್ಕೆ ತರುವಂಥ ಯಾವುದೇ ವಿಡಿಯೋ ಶೇರ್ ಮಾಡಬೇಡಿ. ಶೇರ್ ಮಾಡಿದವರೂ ಅಪರಾಧಿಗಳಾಗುತ್ತಾರೆ. ಈ ಕಾರಣಕ್ಕೆ ಪೊಲೀಸರಿಗೆ ಮಾಹಿತಿ ನೀಡಿ, ವಿಡಿಯೋಗಳಿದ್ದರೆ ನೀಡಿ. ನಾವೂ ಕಾನೂನು ಕ್ರಮ ಜರುಗಿಸುತ್ತೇವೆ. ಮೊಬೈಲ್ ನಲ್ಲಿ ಸ್ಟೋರ್ ಮಾಡಿಕೊಳ್ಳುವುದು, ವ್ಯಾಟ್ಸಪ್ ಗ್ರೂಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಬಾರದು. ಮಾಡಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯಿದೆ, 2005 ಮತ್ತು ಸಂಬಂಧಿತ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಅಡಿಯಲ್ಲಿ, ಹೆಸರು, ವಯಸ್ಸು, ಧರ್ಮ, ವಿಳಾಸ ಮುಂತಾದ ಇತರ ಗುರುತಿಸುವ ಅಂಶಗಳನ್ನು ಒಳಗೊಂಡಂತೆ ಸಂತ್ರಸ್ತರ, ನೊಂದವರ ಗುರುತಿನ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಇದೇ ರೀತಿಯ ಸಂದೇಶಗಳು ಮತ್ತು ಸಂಭಾಷಣೆಗಳು ಸಹ ಶಿಕ್ಷಾರ್ಹವಾಗಿವೆ. ಇದಲ್ಲದೆ, ಮೊಬೈಲ್, ಇತರ ಸಾಧನಗಳಲ್ಲಿ ಮಕ್ಕಳ ಅಶ್ಲೀಲ ವಿಷಯವನ್ನು ಹೊಂದಿರುವ ವಿಡಿಯೊಗಳನ್ನು ಡೌನ್ಲೋಡ್ ಮಾಡುವುದು ಅಥವಾ ಸಂಗ್ರಹಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ಹೇಳಿದ್ದಾರೆ.