SUDDIKSHANA KANNADA NEWS/ DAVANAGERE/ DATE:31-10-2023
ದಾವಣಗೆರೆ: ಶಾಂತಿ ಸಾಗರದಿಂದ ಚನ್ನಗಿರಿ, ಸಂತೆಬೆನ್ನೂರು ಸೇರಿದಂತೆ 80 ಕ್ಕಿಂತ ಹೆಚ್ಚು ಗ್ರಾಮಗಳಿಗೆ, ಹೊಳಲ್ಕೆರೆ, ಚಿತ್ರದುರ್ಗ, ಜಗಳೂರಿಗೆ ಇಲ್ಲಿಂದಲೇ ನೀರು ಪೂರೈಕೆಯಾಗುತ್ತಿದೆ. ಒಂದು ಕಡೆ ಮಳೆ ಕೊರತೆಯಿಂದ ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹದ ಕೊರತೆ ಮತ್ತು ರೈತರ ಬೆಳೆಗಳಿಗೆ ನೀರು ಕೊಡಬೇಕಾಗಿದ್ದು ಅಧಿಕಾರಿಗಳು ಎರಡನ್ನು ಸರಿದೂಗಿಸಿ ಕೆಲಸ ಮಾಡುವಂತೆ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನರಿಗೆ ಬೇಸಿಗೆ ವೇಳೆ ಕುಡಿಯುವ ನೀರಿನ ಅಭಾವವಾಗದಂತೆ ನೋಡಿಕೊಳ್ಳಿ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ:
ಮಾತೃ ವಂದನಾ ಯೋಜನೆಯಡಿ ಮೊದಲು ಹುಟ್ಟಿದ ಮಗುವಿಗೆ ರೂ 5000 ಗಳನ್ನು 2 ಕಂತಿನಲ್ಲಿ ಮತ್ತು 2 ನೇ ಬಾರಿ ಹೆಣ್ಣು ಮಗು ಜನಿಸಿದರೆ ರೂ. 6000 ಗಳನ್ನು ನೀಡಲಾಗುತ್ತಿದ್ದು, ಯೋಜನೆಯ ಕುರಿತು ಅಂಗನವಾಡಿ ಆಶಾ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಂದ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು, ಅಲ್ಲದೇ ಮಕ್ಕಳು ಹಾಗೂ ತಾಯಂದಿರಿಗೆ ಪೌಷ್ಟಿಕಾಂಶಯುಕ್ತ ಆಹಾರ ಮತ್ತು ಗುಣಮಟ್ಟದ ಮೊಟ್ಟೆಗಳನ್ನು ವಿತರಣೆ ಮಾಡಬೇಕು ಎಂದರು.
ಪೌಷ್ಟಿಕಾಂಶದ ಭಾಗವಾಗಿ ಮೊಟ್ಟೆಯನ್ನು ನೀಡಲಾಗುತ್ತಿದ್ದು ಅದನ್ನು ಒಕ್ಕೂಟದಿಂದ ಪೂರೈಕೆ ಮಾಡಲಾಗುತ್ತಿತ್ತು. ಈ ತಿಂಗಳಿನಿಂದ ಆಯಾ ಅಂಗನವಾಡಿ ಕಾರ್ಯಕರ್ತೆಯ ಮೂಲಕ ಸ್ಥಳೀಯವಾಗಿ ಖರೀದಿ ಮಾಡಿ ನೀಡುವರು. ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾದ ಗರ್ಭಿಣಿ ಮತ್ತು ಬಾಣಂತಿಯರಿಗೆ ಆಹಾರ ಸಾಮಗ್ರಿಗಳನ್ನು 15 ದಿನಗಳಿಗೊಮ್ಮೆ ಯೋಜನೆಯ ಘಟಕ ವೆಚ್ಚ ರೂ. 21 ಗಳಂತೆ ಮನೆಗೆ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರು ಮಾಹಿತಿ ನೀಡಿದರು.
ಸ್ವಾಮಿತ್ವ ಯೋಜನೆ:
ಭೂ ಮಾಪನ ಇಲಾಖೆಯಿಂದ ಸ್ವಾಮಿತ್ವ ಯೋಜನೆಯಡಿ ಪ್ರಾಪರ್ಟಿ ಕಾರ್ಡುಗಳನ್ನು ಫಲಾನುಭವಿಗಳಿಗೆ ವಿತರಿಸುವಾಗ ಕಾರ್ಡುಗಳಲ್ಲಿ ಹೆಸರು, ತಂದೆ ಹೆಸರು ಯಾವುದೇ ಚಿಕ್ಕ ಪುಟ್ಟ ತಿದ್ದುಪಡಿ ಮಾಡಿಕೊಳ್ಳಲು 15 ದಿನಗಳ ಕಾಲಾವಕಾಶವಿರುತ್ತದೆ ಎಂದು ತಿಳಿಸಬೇಕು. ಒಂದು ವೇಳೆ ಮಾಹಿತಿಯ ಕೊರತೆಯಿಂದಾಗಿ ಫಲಾನುಭವಿಗಳು ತಡವಾಗಿ ಬಂದಾಗ ಅರ್ಜಿಗಳನ್ನು ಸ್ವೀಕರಿಸಿ ಶೀಘ್ರವಾಗಿ ತಿದ್ದುಪಡಿ ಕಾರ್ಯ ಪೂರ್ಣಗೊಳಿಸಿ ಪ್ರಾಪರ್ಟಿ ಕಾರ್ಡುಗಳನ್ನು ನೀಡಬೇಕು ಎಂದರು.
ಯೋಜನೆಯಡಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಒಳಗೊಂಡಂತೆ 144 ಗ್ರಾಮಗಳ 68459 ಆಸ್ತಿಗಳ ಪೈಕಿ 24391 ಕರಡು ಪ್ರತಿಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಭೂ ಮಾಪನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.