SUDDIKSHANA KANNADA NEWS/ DAVANAGERE/ DATE:02-09-2024
ದಾವಣಗೆರೆ: ನಾನು ಮಠದ ಹಣ, ಆಸ್ತಿ ಕಬಳಿಸಿಲ್ಲ. ದೊಡ್ಡ ಗುರುಗಳು ಇದ್ದಾಗ ಯಾರ್ಯಾರದ್ದೋ ಹೆಸರಿನಲ್ಲಿ ಅಕೌಂಟ್ ಗಳು ಇದ್ದವು. ಆ ಅಕೌಂಟ್ ಗಳೆಲ್ಲವನ್ನೂ ಸೇರಿಸಿದಾಗ ಹತ್ತು ಲಕ್ಷ ರೂಪಾಯಿ ಇತ್ತು. ಆದ್ರೆ, ಯಾವುದೇ ಹಗರಣ, ದುಡ್ಡು ಹೊಡೆಯುವ ಕೆಲಸ ಮಾಡಿಲ್ಲ. ಮಠದ ವಿರುದ್ಧ ಪಿತೂರಿ, ಷಡ್ಯಂತ್ರ ಇಲ್ಲಿಗೆ ನಿಲ್ಲಿಸಿ. ರೆಸಾರ್ಟ್, ಹೊಟೇಲ್ ಗಳಲ್ಲಿ ಇನ್ನು ಮುಂದೆ ಸಭೆ ನಡೆಸಬೇಡಿ ಎಂದು ಚಿತ್ರದುರ್ಗದ ಸಿರಿಗೆರೆ (Sirigere) ತರಳಬಾಳು ಬೃಹನ್ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಖಡಕ್ ಎಚ್ಚರಿಕೆ ನೀಡಿದರು.
ಚಿತ್ರದುರ್ಗದ ಸಿರಿಗೆರೆಯ ತರಳಬಾಳು ಬೃಹನ್ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಬೆಂಬಲಿಸಿ ಚಿತ್ರದುರ್ಗ ಜಿಲ್ಲೆಯ ಭರಮಸಾಗರದ ಹೋಬಳಿಯ ವಿವಿಧ ಗ್ರಾಮಗಳ ಗ್ರಾಮಸ್ಥರು ಬೃಹತ್ ಬೈಕ್ ರ್ಯಾಲಿ
ನಡೆಸಿ ಮಠಕ್ಕೆ ಆಗಮಿಸಿದ ಬಳಿಕ ಸಿರಿಗೆರೆ ಮಠದಲ್ಲಿ ನಡೆದ ಸಭೆಯಲ್ಲಿ ಶ್ರೀಗಳು, ಬಂಡವಾಳಶಾಹಿಗಳು, ಮಠದ ವಿರುದ್ಧ ಷಡ್ಯಂತ್ರ ನಡೆಸುತ್ತಿರುವವರ ವಿರುದ್ಧ ಗುಡುಗಿದರು.
ರೆಸಾರ್ಟ್, ಹೊಟೇಲ್ ಸಭೆ ನಿಲ್ಲಿಸಿ, ಮತ್ತೆ ನಡೆಸಬೇಡಿ:
ರೆಸಾರ್ಟ್ ನಲ್ಲಿ ಸಭೆ ನಡೆಸುವುದು, ಹೊಟೇಲ್ ನಲ್ಲಿ ಒಟ್ಟುಗೂಡಿ ಸುಳ್ಳು ಆರೋಪ ಮಾಡುವುದು ಇಲ್ಲಿಗೆ ನಿಲ್ಲಿಸಿ. ಮಠದ ನಿಜವಾದ ಸದ್ಭಕ್ತರು ದಿನಕಳೆದಂತೆ ಹತ್ತಿರವಾಗುತ್ತಿದ್ದಾರೆ. ಶ್ರೀಮಂತರು, ಬಂಡವಾಳಶಾಹಿಗಳು ದೂರವಾಗುತ್ತಿದ್ದಾರೆ. ಮಠ,
ಶಿಷ್ಯರ ನಡುವಿನ ಸಂಬಂಧ ಮುಂದುವರಿದುಕೊಂಡು ಹೋಗಬೇಕು. ನಮ್ಮಲ್ಲಿ ಒಗ್ಗಟ್ಟಿದ್ದರೆ ಯಾವುದೇ ಷಡ್ಯಂತ್ರ ಫಲಿಸಲ್ಲ ಎಂದು ತಿಳಿಸಿದರು.
ತಾಳ್ಮೆ ಕಳೆದುಕೊಳ್ಳಬೇಡಿ:
ಭಕ್ತರು ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬಾರದು. ಯಾರಿಗೂ ಬೈಯ್ಯಬಾರದು. ಅವಾಚ್ಯ ಶಬ್ದಗಳಿಂದ ನಿಂದಿಸಬಾರದು. ಸುಮ್ಮನಿರಿ. ಎಷ್ಟೇ ಷಡ್ಯಂತ್ರ, ಪಿತೂರಿ ನಡೆಸಿದರೂ ನನ್ನ ಹಾಗೂ ಶಿಷ್ಯರ ನಡುವಿನ ಸಂಬಂಧ ಹಾಳುಗೆಡವಲು ಸಾಧ್ಯವಿಲ್ಲ. ಆರೋಪಗಳು ಬಂದಷ್ಟು ನಮ್ಮ ನಿಮ್ಮ ನಡುವಿನ ಸಂಬಂಧ ಗಟ್ಟಿಯಾಗುತ್ತದೆ ಎಂದು ಪ್ರತಿಪಾದಿಸಿದರು.
ಕೇಸ್ ಇತ್ಯರ್ಥದ ಬಳಿಕ ಉತ್ತರಾಧಿಕಾರಿ ನೇಮಕ:
ಉತ್ತರಾಧಿಕಾರಿ ನೇಮಕ ಸಂಬಂಧ ಚಿತ್ರದುರ್ಗ ಕೋರ್ಟ್ ನಲ್ಲಿ ಪ್ರಕರಣ ದಾಖಲಿಸಲಾಗಿದೆ. ಅದೇ ರೀತಿಯಲ್ಲಿ ಮಠದ ಟ್ರಸ್ಟ್ ಡೀಡ್ ಬಗ್ಗೆಯೂ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಇದು ಮುಗಿಯುವವರೆಗೆ ಉತ್ತರಾಧಿಕಾರಿ ನೇಮಕ ಮಾಡಲು ಸಾಧ್ಯವಾಗುವುದಿಲ್ಲ. ಕೇಸ್ ಬಗೆಹರಿದ ಬಳಿಕ ಭಕ್ತರ ಸಮ್ಮುಖದಲ್ಲಿ ತೀರ್ಮಾನವಾಗಲಿ. ಉತ್ತರಾಧಿಕಾರಿ ನೇಮಕ ವಿಚಾರದಲ್ಲಿ ತಮ್ಮದೇನೂ ವಿರೋಧ ಇಲ್ಲ. ಕೋರ್ಟ್ ನಲ್ಲಿ ಕೇಸ್ ಇರುವ ಕಾರಣಕ್ಕೆ ಮುಂದೂಡಲಾಗಿದೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.
ಬೈಲಾ ತಿದ್ದುಪಡಿ ಮಾಡಿಲ್ಲ, ಹೊಸದಾಗಿ ಟ್ರಸ್ಟ್ ಡೀಡ್ ಮಾಡಿಲ್ಲ. ಹಿರಿಯ ಗುರುಗಳು ಮಾಡಿದಂತೆಯೇ ನಡೆದುಕೊಂಡು ಹೋಗುತ್ತಿದೆ. ಬೈಲಾ ಅನ್ನೂ ಸಹ ಹಿರಿಯ ಗುರುಗಳೇ ಮಾಡಿದ್ದರು. ಅದರಂತೆ ಮುಂದುವರಿಸಿಕೊಂಡು ಬಂದಿದ್ದೇವೆ. ಭಕ್ತರು ಯಾವುದೇ ಕಾರಣಕ್ಕೂ ಸಿಟ್ಟಿಗೇಳಬಾರದು. ಈ ಹಿಂದೆ ಇದ್ದ ಕಾನೂನೇ ಬೇರೆ, ಈಗಿನ ಕಾನೂನೇ ಬೇರೆ. ತಾಳ್ಮೆ ವಹಿಸಿ. ಶಾಂತಿಯುತವಾಗಿ ವರ್ತಿಸಿ. ಯಾರ ಬಗ್ಗೆಯೂ ಲಘುವಾಗಿ ಮಾತನಾಡಬೇಡಿ ಎಂದು ಮನವಿ ಮಾಡಿದರು.
ನಿಮ್ಮ ಪ್ರೀತಿಗೆ ಆಭಾರಿ:
ತಾವು ಕರೆಯದೇ ಇಷ್ಟೊಂದು ಸಂಖ್ಯೆಯಲ್ಲಿ ಭಕ್ತರು ಬಂದಿದ್ದಾರೆ. ನಿಮ್ಮ ಬೆಂಬಲ ನೋಡಿ ಸಂತಸವಾಗುತ್ತಿದೆ. ಇಷ್ಟೊಂದು ಪ್ರಮಾಣದಲ್ಲಿ ಬೆಂಬಲ ನೀಡುತ್ತಿರುವುದನ್ನು ನೋಡಿದರೆ ನೀವು ತಮ್ಮ ಮೇಲಿಟ್ಟಿರುವ ಪ್ರೀತಿಗೆ ಸಾಕ್ಷಿಯಾಗಿದೆ. ಈ ಪ್ರೀತಿ, ಗೌರವ ಹೀಗೆಯೇ ಮುಂದುವರಿಯಲಿ ಎಂದು ಹೇಳಿದರು.
ಎನ್. ಹೆಚ್. ಕಾಮಗಾರಿಯಲ್ಲಿ ನಲ್ವತ್ತು ಲಕ್ಷ ರೂಪಾಯಿ ಯಾರು ಲೂಟಿ ಮಾಡಿದರು. ಹಣ ಹೇಗೆ ಮಾಡಿದರು ಎಂಬುದು ಎಲ್ಲರಿಗೂ ಗೊತ್ತು. ವಿನಾಕಾರಣ ತಮ್ಮ ಮೇಲೆ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಆದೇಶ ಕೊಡಿ ಗುರುಗಳೇ…:
ಸಭೆಯಲ್ಲಿ ಪಾಲ್ಗೊಂಡಿದ್ದ ಭರಮಸಾಗರ ಹೋಬಳಿಯ ವಿವಿಧ ಗ್ರಾಮಗಳ ಸಮಾಜದ ಮುಖಂಡರು, ಈ ಹಿಂದೆ ದೊಡ್ಡ ಗುರುಗಳು ಆದೇಶ ನೀಡಿದರೆ ಸಾಕು. ಭಕ್ತರು ನೋಡಿಕೊಳ್ಳುತ್ತಿದ್ದರು. ಆದ್ರೆ. ನೀವು ತಾಳ್ಮೆ ವಹಿಸಿ, ಮಾತನಾಡಬೇಡಿ, ಸಂಯಮದಿಂದ ಇರಿ ಎನ್ನುತ್ತೀರಿ. ನೀವು ನಮಗೆ ಆದೇಶ ಕೊಡಿ. ನಮ್ಮ ಧಾಟಿಯಲ್ಲಿಯೇ ಮಠದ ವಿರೋಧಿಗಳಿಗೆ ಉತ್ತರ ನೀಡುತ್ತೇವೆ ಎಂದು ಪಟ್ಟುಹಿಡಿದರು. ಈ ವೇಳೆ ಗುರುಗಳು ಎಲ್ಲರನ್ನೂ ಸಮಾಧಾನಪಡಿಸಿದರು.
ತೀರ್ಥಣ್ಣ, ರಾಜಣ್ಣ ಅವರ ನೇತೃತ್ವದಲ್ಲಿ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು.
ಬೈಕ್ ರ್ಯಾಲಿ:
ಸಿರಿಗೆರೆ ಮಠಾಧಿಪತಿ ಹಾಗೂ ಸಾಣೇಹಳ್ಳಿ ಪೀಠಾಧಿಪತಿ ಬದಲಾವಣೆ ಆಗಬೇಕು, ಈಗಿನ ಶ್ರೀಗಳು ಪೀಠ ತ್ಯಜಿಸಬೇಕು, ಮಠದ ಡೀಡ್ ಸೇರಿದಂತೆ ಭಕ್ತರಲ್ಲಿ ಗೊಂದಲ ಹುಟ್ಟುಹಾಕುತ್ತಿರುವ ಮಠದ ವಿರೋಧಿಗಳ ವಿರುದ್ಧ ಗುಡುಗಿದ ಭರಮಸಾಗರ ಸೇರಿದಂತೆ ಸುತ್ತಮುತ್ತಲಿನ ಮಠದ ಸದ್ಭಕ್ತರು ಬೈಕ್ ರ್ಯಾಲಿ ನಡೆಸಿದರು.
ಮಠದ ವಿರೋಧಿಗಳಿಗೆ ಸ್ಪಷ್ಟ ಸಂದೇಶ ನೀಡಲು ಹಾಗೂ ಸಿರಿಗೆರೆ ಪೀಠಾಧಿಪತಿ ಡಾ. ಶಿವಮೂರ್ತಿ ಶಿವಾಚಾರ್ಯರ ಪರ ಇದ್ದೇವೆ ಎಂಬ ಮನವಿ ಪತ್ರವನ್ನು ಸಲ್ಲಿಸಲು ಸೆ. 2 ರ ನಾಳೆ ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಸಿರಿಗೆರೆ ಸರ್ಕಲ್ (ಎನ್. ಹೆಚ್. -4) ನಿಂದ ಸಿರಿಗೆರೆ ಮಠದವರೆಗೆ ರ್ಯಾಲಿ ನಡೆಸಿದರು.