ಭಾರತ ಹಾಗೂ ಅಮೆರಿಕ ನಡುವೆ ಅಣು ಒಪ್ಪಂದದ ಹಿಂದಿನ ಮಾಸ್ಟರ್ ಮೈಂಡ್ ಮನಮೋಹನ್ ಸಿಂಗ್. ಅಸಲಿಗೆ 2005ರ ಜು.18ರಂದು ಭಾರತ ಹಾಗೂ ಅಮೆರಿಕ ನಡುವೆ ಅಣು ಒಪ್ಪಂದ ಕುರಿತ ಘೋಷಣೆ ಹೊರಬಿತ್ತು. ಅದರ ಹಿಂದಿನ ದಿನ ಅಮೆರಿಕದಲ್ಲಿ ಹೈಡ್ರಾಮಾ ನಡೆದಿತ್ತು. ಈ ಒಪ್ಪಂದವೇ ಬೇಡ ಎಂದು ಸಿಂಗ್ ಮುನಿಸಿಕೊಂಡು ಕೂತಿದ್ದರು.
ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಹಾಗೂ ಸಿಂಗ್ ನಡುವಿನ ಮಾತುಕತೆಯಂತೆ ಅಂತಾರಾಷ್ಟ್ರೀಯ ಸುರಕ್ಷತಾ ಸಂಸ್ಥೆಗಳ ತಪಾಸಣೆಯಿಂದ ಭಾರತದ 6 ರಿಂದ 8 ಅಣುಸ್ಥಾವರಗಳನ್ನು ಹೊರಗಿಡುವ ನಿಲುವಿಗೆ ಬರಲಾಗಿತ್ತು. ಭಾರತದ ಜತೆ ಅಣು ಒಪ್ಪಂದ ಮಾಡಿಕೊಳ್ಳುವುದು ಅಮೆರಿಕದ ಕೆಲವು ಪ್ರಭಾವಿಗಳಿಗೆ ಇಷ್ಟವಿರಲಿಲ್ಲ. ಅದೇ ಕಾರಣಕ್ಕೆ ವಿರೋಧಿಸಿದ್ದ ವ್ಯಕ್ತಿಗಳು ಅಣು ಸ್ಥಾವರಗಳ ತಪಾಸಣೆ ವಿನಾಯಿತಿಯನ್ನು ಎರಡಕ್ಕೆ ಇಳಿಸಿದ್ದರು. ಇದು ಮನಮೋಹನ್ ಸಿಂಗ್‌ಗೆ ಗೊತ್ತಾಗಿದೆ.
ಅಣು ಒಪ್ಪಂದವನ್ನು ಅಮೆರಿಕ ಅಧಿಕಾರಿಗಳು ತಮಗೆ ಬೇಕಾದಂತೆ ಮಾಡಿಕೊಂಡಿದ್ದಾರೆ ಎಂದು ರಾತ್ರೋರಾತ್ರಿ ತರಾಟೆಗೆ ತೆಗೆದುಕೊಂಡಿದ್ದರು. ಇದು ಅಮೆರಿಕದ ಅಂದಿನ ಅಧ್ಯಕ್ಷರಿಗೆ ಗೊತ್ತಾಗಿದೆ. ಕೂಡಲೇ ಸಿಂಗ್ ತಂಗಿದ್ದ ಹೋಟೆಲ್ಗೆ ಅಮೆರಿಕ ವಿದೇಶಾಂಗ ಸಚಿವೆ ಕಾಂಡೋಲಿಸಾ ಅವರನ್ನು ಸಮಾಧಾನ ಮಾಡಲು ಕಳುಹಿಸುತ್ತಾರೆ. ಅದಕ್ಕೆ ಮತ್ತಷ್ಟು ಸಿಟ್ಟಿಗೆದ್ದ ಸಿಂಗ್, ನಿಮ್ಮ ಜೊತೆ ನಾನು ಮಾತನಾಡುವುದಿಲ್ಲ. ಬುಷ್ ಜೊತೆಯೇ ಮಾತಾನಾಡ್ತೇನೆ ಎಂದು ವಾಪಸ್ ಕಳುಹಿಸಿದ್ದರು.
ಕೊನೆಗೆ ಕಾಂಡೋಲಿಸಾ ಭಾರತದ ವಿದೇಶಾಂಗ ಸಚಿವ ನಟವರ್ ಸಿಂಗ್ ಬಳಿ ತೆರಳಿದ್ದರು. ಅಲ್ಲಿ ನಡೆದ ಮಾತುಕತೆ ಬಳಿಕ ಅಮೆರಿಕ ವಿದೇಶಾಂಗ ಸಚಿವೆ ಜೊತೆ ಸಿಂಗ್ ಮಾತುಕತೆ ನಡೆಸಿದರು. ಭಾರತದ ಬೇಡಿಕೆಗೆ ಕೊನೆಗೂ ಅಮೆರಿಕ ಒಪ್ಪಿಕೊಂಡಿತು. ಮರುದಿನ ಒಪ್ಪಂದ ಘೋಷಣೆ ಆಯಿತು. ಅದಕ್ಕೆ 2008ರಲ್ಲಿ ಅಧಿಕೃತವಾಗಿ ಸಹಿ ಹಾಕಲಾಯಿತು.